ಮೀಸಲು ಪರಿಷ್ಕರಣೆ ಯಾವಾಗ ?
ದೇಶಾದ್ಯಂತ ಡಾ.ಬಿ.ಆರ್.ಅಂಬೇಡ್ಕರ್ ಅವರ 65ನೇ ಪರಿನಿರ್ವಾಣ ದಿನ ಆಚರಿಸಲಾಯಿತು. ಎಲ್ಲೆಡೆಯೂ ಅಂಬೇಡ್ಕರ್ ಅವರು ಸಂವಿಧಾನ ರಚಿಸಿರುವಬಗೆಯನ್ನು ಭಿನ್ನ ಭಿನ್ನವಾಗಿ ಹಾಡಿ ಹೊಗಳಲಾಗಿದೆ. ಆದರೆ ಅಂಬೇಡ್ಕರ್ ಅವರ ಸಂವಿಧಾನದ ಆಶಯ ಈಡೇರಿದೆಯೇ ಎಂಬುದನ್ನು ಪರಾಮರ್ಶಿಸುವ ಕಾರ್ಯ ಎಲ್ಲೂ ಕೇಳಿಬರಲಿಲ್ಲ.
ಸಂವಿಧಾನ ರಚನೆ ಸಂದರ್ಭದಲ್ಲಿ ತುಳಿತಕ್ಕೊಳಗಾಗಿರುವ, ಸಮಾಜದ ಮುಖ್ಯ ವಾಹಿನಿಯಿಂದ ದೂರ ಇರುವ ದಲಿತ ಸಮುದಾಯಕ್ಕಾಗಿ ಉದ್ಯೋಗ, ಶಿಕ್ಷಣ, ರಾಜಕೀಯದಲ್ಲಿ ಮೀಸಲು ಕಲ್ಪಿಸಬೇಕು ಎಂದು ಒತ್ತಾಯಿಸಿ, ಅದನ್ನು ಜಾರಿಗೆ ಬರುವಂತೆಯೂ ಡಾ.ಬಿ.ಆರ್.ಅಂಬೇಡ್ಕರ್ ಅವರು ನೋಡಿಕೊಂಡರು. ಆದರೆ ಅದು ಕೇವಲ 10 ವರ್ಷ ಮಾತ್ರ ಜಾರಿಯಲ್ಲಿರಬಹುದು ಎಂಬ ಅಂಶವನ್ನೂ ಸೇರಿಸಿದ್ದರು. ಆದರೆ ಸಂವಿಧಾನ ಅಂಗೀಕಾರ ಗೊಂಡು 72 ವರ್ಷಗಳೇ ಕಳೆದರೂ ಈವರೆಗೂ ಮೀಸಲು ಬದಲಾವಣೆಗೆ ಯಾವ ಸರಕಾರವೂ ಮನಸ್ಸು ಮಾಡಿಲ್ಲ. ಇದು ಅಂಬೇಡ್ಕರ್ ಆಶಯಕ್ಕೆ ಧಕ್ಕೆಯಾದಂತಲ್ಲವೇ? ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಆಗ ಪರಿಶಿಷ್ಟ ಜಾತಿ ಪಟ್ಟಿಗೆ ಆರು ಜಾತಿಗಳನ್ನಷ್ಟೇ ಸೇರ್ಪಡೆ ಮಾಡಿದ್ದರು.
ಆದರೆ ಮುಂಬರುವ ದಿನಗಳಲ್ಲಿ ಮತ ಬ್ಯಾಂಕ್ ರಾಜಕಾರಣಕ್ಕಾಗಿ ಜನಪ್ರತಿನಿಧಿಗಳು ಇದಕ್ಕೆ ಇನ್ನೂ 95 ಜಾತಿಗಳನ್ನು ಸೇರಿಸಿದ್ದಾರೆ. ಸಮುದಾಯದ ಹೆಸರು ಮುಂದಿಟ್ಟುಕೊಂಡು ಮೀಸಲಿನ ಲಾಭ ಪಡೆದು ಶಾಸಕ ಹಾಗೂ ಸಂಸದರಾಗಿ ಆಯ್ಕೆಯಾದವರು ಸ್ವಯಂ ಏಳಿಗೆಯತ್ತ ಮಾತ್ರ ಚಿತ್ತ ಹರಿಸುತ್ತಿದ್ದಾರೆ. ಸಮು ದಾಯದ ಹಿತ ಕಡೆಗಣಿಸುತ್ತಿದ್ದಾರೆ. ಒಂದು ಕುಟುಂಬ ಒಂದು ಬಾರಿ ಮೀಸಲಿನ ಲಾಭ ಪಡೆದು ಶಾಸಕ, ಸಂಸದರಾದರೆ ಮತ್ತೊಮ್ಮೆ ಸ್ಪರ್ಧಿಸದೇ, ಬೇರೊಬ್ಬರಿಗೆ ಅವಕಾಶ ಮಾಡಿಕೊಡಬೇಕು. ಆದರೆ ಯಾರೊಬ್ಬರೂ ಅಂತಹ ಉದಾರತೆ ತೋರುತ್ತಿಲ್ಲ. ಕುಟುಂಬದ ಕುಡಿಗಳಿಗೇ ಆ ಕ್ಷೇತ್ರವನ್ನು ಮೀಸಲು ಮಾಡುವ ಮೂಲಕ ಸಂವಿಧಾನದ ಮೂಲ ಆಶಯವನ್ನೇ ಹತ್ತಿಕ್ಕುತ್ತಿದ್ದಾರೆ.
ಗ್ರಾಮೀಣ ಭಾಗದ ಬಡವರ ಬದುಕು ಈಗಲೂ ಶೋಚನೀಯವಾಗಿದೆ. ತಳ ಸಮುದಾಯದ ಬಲಿಷ್ಠರಾಗಿರುವ ಕೆಲವರಷ್ಟೇ ಸರಕಾರದ ಸವಲತ್ತುಗಳನ್ನು ಪಡೆದುಕೊಳ್ಳುತ್ತಿದ್ದಾರೆ. ದಲಿತರು ವಾಸಿಸುವ ಮನೆ ಹಾಗೂ ಉಡುಗೆ ತೊಡುಗೆಯಲ್ಲಷ್ಟೇ ಬದಲಾವಣೆಯಾಗಿದೆ. ಅವರ ಆರ್ಥಿಕ ಸ್ಥಿತಿ ಇಂದಿಗೂ ದಯನೀಯ ವಾಗಿದೆ. ಹೀಗಾಗಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲು ಹೆಚ್ಚಿಸುವ ಕೆಲಸವಾಗಬೇಕು. ಈ ವಿಚಾರದಲ್ಲಿ ಸರಕಾರದ ಕಣ್ಣು ತೆರೆಸಲು ವಿಶೇಷ ಅಭಿಯಾನ ವಾಗಬೇಕಿದೆ.