ಮೈಮರೆಯುವಿಕೆ ಕಡಿಮೆಯಾಗಲಿ
ಒಮೈಕ್ರಾನ್ ಹೊಸ ತಳಿಯ ಆರ್ಭಟ ಆರಂಭಾಗಬಹುದು ಎಂಬ ಆತಂಕ ಇಡೀ ವಿಶ್ವವನ್ನು ಕಾಡುತ್ತಿದೆ. ವಿವಿಧ ದೇಶಗಳು ಈ ಹೊಸ ವೈರಸ್‌ನ ಕಾಟಕ್ಕೆ ತತ್ತರಿಸಿವೆ. ಅಷ್ಟೊಂದು ಅಪಾಯಕಾರಿಯಲ್ಲ ಎಂಬ ಮಾತನ್ನು ಬಹುತೇಕ ತಜ್ಞರು ಹೇಳುತ್ತಿದ್ದರೂ, ಅವರ ಪರಿಣಾಮ ಸೋಂಕು ಉಲ್ಬಣಗೊಂಡ ನಂತರವಷ್ಟೇಗೋಚರಿಸುತ್ತದೆ.
ಆದರೆ, ಈ ಎಲ್ಲ ಅಂಶಗಳನ್ನು ಮರೆತ ಜನರು ದೈನಂದಿನ ಜೀವನದಂತೆಯೇ ನಡೆದುಕೊಳ್ಳುತ್ತಿರುವುದು ಆತಂಕಕಾರಿ ವಿಚಾರ. ಬಹುತೇಕರು ಈಗಾಗಲೇ ಕರೋನಾ ಮರೆಯಾಗಿದೆಯೇನೋ ಎಂಬಂತೆ ಮೈಮರೆ ಯುತ್ತಿದ್ದಾರೆ. ವ್ಯಾಕ್ಸಿನ್ ಹಾಕಿಸಿಕೊಂಡಿದ್ದೇವೆ ನಮಗೆ ಕರೋನಾ ಬರುವುದೇ ಇಲ್ಲ ಎಂಬ ಉಡಾಫೆಯೂ ಕಾಣುತ್ತಿದೆ. ಮತ್ತೇ ಕೆಲವರು ಟಿವಿ ಮತ್ತು ಪತ್ರಿಕೆಗಳಲ್ಲಿ ಮಾತ್ರವೇ ಕರೋನಾ ಬರುತ್ತಿದೆ.
ಜನರನ್ನು ಹೆದುರಿಸಲು ಹೀಗೆಲ್ಲ ಮಾಡುತ್ತಿದ್ದಾರೆ ಎಂಬ ಮಾತುಗಳನ್ನು ಆಡುತ್ತಿದ್ದಾರೆ. ಮೊದಲ ಮತ್ತು2ನೇ ಅಲೆಯ ಸಂದರ್ಭಗಳಲ್ಲು ಇದೇ ರೀತಿಯ ಮನಸ್ಥಿತಿಯಿಂದ ಜನರು ನಡೆದುಕೊಂಡಿದ್ದರು. ಆದರೆ, ಆ ವೇಳೆ ಆದ ಸಾವು ನೋವುಗಳು ಇಡೀ ದೇಶವನ್ನೇ ತಲ್ಲಣಗೊಳಿಸಿತ್ತು.
ಆಗಲೂ ಎರಡನೇ ಅಲೆ ಎಂಬುದು ಸರಕಾರದ ಸುಳ್ಳು ಪ್ರಚಾರ. ಮಾಧ್ಯಮಗಳ ಸೃಷ್ಟಿ ಎಂದುಕೊಂಡು ಅನೇಕರು ಉಡಾಫೆ ಮಾಡಿದ್ದರು. ಅಂತಹ ಉಡಾಫೆ ಮಾಡಿದವರು, ಅವರ ಕುಟುಂಬದ ಅನೇಕ ಸದಸ್ಯರು ಸೇರಿದಂತೆ ಸಾವಿರಾರು ಜನರು ಎರಡನೇ ಅಲೆಯ ಕರೋನಾ ಆರ್ಭಟಕ್ಕೆ ಬಲಿಯಾದರು. ಇದೀಗ ಮೂರನೇ ಅಲೆಯ ಭೀತಿ ನಮ್ಮನ್ನು ಕಾಡುತ್ತಿದೆ. ಜನವರಿ ವೇಳೆಗೆ ಮೂರನೇ ಅಲೆ ಅತಿರೇಕಕ್ಕೆ ಹೋಗಬಹುದು ಎಂಬುದು ತಜ್ಞರ ಅಭಿಪ್ರಾಯ. ಆದರೆ, ಜನರು ಇದನ್ನೆಲ್ಲ ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಮಾಸ್ಕ್ ಧರಿಸುವುದನ್ನು ಮರೆತಂತೆ ವರ್ತಿಸುತ್ತಿದ್ದಾರೆ.
ಸಮಾಜಿಕ ಅಂತರ ಎಂಬುದಂತು ದೂರದ ಮಾತಾಗಿದೆ. ಸರಕಾರ ಭಯ ಬೇಡ ಎಂದು ಹೇಳಿದೆ ಎಂಬ ಕಾರಣಕ್ಕೆ ಮೈಮರೆಯುವುದು ನಂತರ ಸರಕಾರ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ದೂರುವುದನ್ನು ಮಾಡದೆ, ಸಾರ್ವಜನಿಕರಾದ ನಾವೆಲ್ಲರೂ ಮೈಮರೆಯದಂತೆ ನಡೆದುಕೊಳ್ಳುವುದು ಮತ್ತು ನಮ್ಮ ಜವಾಬ್ದಾರಿ  ಗಳನ್ನು ಸರಿಯಾಗಿ ನಿಭಾಯಿಸುವ ಮೂಲಕ ಕರೋನಾ ಹರಡದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಈಗಿನಿಂದಲೇ ಕಾರ್ಯಪ್ರವೃತ್ತರಾದರೆ ಕರೋನಾ ಮೂರನೇ ಅಲೆಯನ್ನು ಅಪಾಯವಿಲ್ಲದೆ ದಾಟಬಹುದು. ಇಲ್ಲವಾದಲ್ಲಿ ಬಹುದೊಡ್ಡ ಬೆಲೆ ತೆರಬೇಕಾದೀತು. ಹೀಗಾಗಿ ಎಚ್ಚರವಿರಲಿ.