ಮಾಸ್ಕ್ ಬಳಕೆ ಇಳಿಕೆ ಆತಂಕಕಾರಿ
ಜೂನ್ ಮತ್ತು ಡಿಸೆಂಬರ್ ನಡುವಣ ಅವಧಿಯಲ್ಲಿ ಜನರಲ್ಲಿ ಮಾ ಧರಿಸುವ ಪ್ರವೃತ್ತಿ ಕಡಿಮೆ ಆಗಿದೆ ಎಂದು ವಾಷಿಂಗ್ಟನ್‌ನ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಮೆಟ್ರಿಕ್‌  ಎಂಡ್ ಇವ್ಯಾಲುಯೇಷನ್ ಇತ್ತೀಚೆಗೆ ನಡೆಸಿದ ಅಧ್ಯಯನವೊಂದರಿಂದ ತಿಳಿದುಬಂದಿದೆ.
ಕರೋನಾ ವೈರಾಣು ರೂಪಾಂತರದ ಹೊಸ ತಳಿಯು ಕಾಣಿಸಿಕೊಂಡ ಈ ಸಂದರ್ಭದಲ್ಲಿ, ಮಾ ಬಳಕೆ ಮತ್ತು ಲಸಿಕೆ ಹಾಕಿಸಿಕೊಳ್ಳುವಿಕೆ ಹೆಚ್ಚಾಗಬೇಕಿತ್ತು. ಆದರೆ ಜನರು ಮೈಮರೆತು ಮಾಸ್ಕ್ ಬಳಕೆ ಕಡಿಮೆ ಮಾಡಿರು ವುದು ಆತಂಕಕಾರಿ ಸಂಗತಿ. ಇದೇ ಪರಿಸ್ಥಿತಿ ಮುಂದುವರಿದರೆ ಎರಡನೇ ಅಲೆಯಲ್ಲಿ ಅನುಭವಿಸಿದ ಯಾತನೆ ಮತ್ತೆ ಮರುಕಳಿಸುತ್ತದೆ ಎಂದು ತಜ್ಞರು ಎಚ್ಚರಿಸಿದ್ದರೂ ಭಾರತದಲ್ಲಿ ಲಸಿಕೆ ಮತ್ತು ಮಾಸ್ಕ್ ಬಳಕೆಯ ಬಗ್ಗೆ ಉಡಾಫೆ ತೋರಲಾಗುತ್ತಿದೆ. ಜನರು ಕರೋನಾ ಅಪಾಯವನ್ನು ದಾಟಿದ್ದೇವೆ ಎಂಬ ಭ್ರಮೆಯಲ್ಲಿದ್ದಂತಿದೆ.
ಜಗತ್ತಿನ ನಾನಾ ದೇಶಗಳು ಈಗಾಗಲೇ ಒಮೈಕ್ರಾನ್‌ನಿಂದ ತತ್ತರಿಸಿ, ಅನುಭವಿಸುತ್ತಿರುವ ಯಾತನೆಯನ್ನು ನೋಡಿಯೂ ಜನರು ಎಚ್ಚೆತ್ತುಕೊಳ್ಳದಿದ್ದರೆ ಹೇಗೆ? ಅಥವಾ ಎರಡೂ ಡೋಸ್ ಲಸಿಕೆ ಪಡೆದಿದ್ದೇವೆ ಎಂಬ ಭಂಡ ಧೈರ್ಯ ಪ್ರದರ್ಶನವೇ? ಒಮೈಕ್ರಾನ್ ಹರಡುವಿಕೆಗೆ ಕರೋನಾಗೆ ಪಡೆದ ಲಸಿಕೆ ರಕ್ಷಣೆ ನೀಡುವು ದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರೇ ಹೇಳಿದ್ದಾರೆ ಎಂಬುದನ್ನು ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕಿದೆ.
ಮುಖಗವಸು ಧರಿಸುವುದು, ಅಂತರ ಕಾಯ್ದು ಕೊಳ್ಳುವುದು, ಆಗಾಗ ಕೈ ಸ್ವಚ್ಛಗೊಳಿಸುವುದು ಯಾರಿಗೋ ಮಾಡಿದ ಉಪಕಾರ ಎಂಬ ಭಾವನೆಯಿಂದ ಜನರು ಹೊರಬರಬೇಕಿದೆ.
ಇದು ತಮ್ಮ ಮತ್ತು ತಮ್ಮವರ ಜೀವ ಕಾಪಾಡಿಕೊಳ್ಳಲು ಇರುವ ಮಾರ್ಗಸೂಚಿ ಎಂಬುದನ್ನು ಸದಾ ನೆನಪಿ ನಲ್ಲಿಟ್ಟುಕೊಳ್ಳಬೇಕು. ಅಲ್ಲದೇ, ಈವರೆಗೂ ದೇಶದ ಒಟ್ಟು ಜನಸಂಖ್ಯೆಯ ಶೇ.೩೦ಕ್ಕಿಂತ ಸ್ವಲ್ಪ ಹೆಚ್ಚಿನ ಭಾಗಕ್ಕಷ್ಟೇ ಲಸಿಕೆಯ ಎರಡೂ ಡೋಸ್ ಹಾಕಲಾಗಿದೆ. ಅಂದರೆ, ಜನಸಂಖ್ಯೆಯ ಬಹುಭಾಗಕ್ಕೆ ಲಸಿಕೆಯ ರಕ್ಷಣೆ ಸಿಕ್ಕಿಲ್ಲ. ಇಷ್ಟೊಂದು ದೊಡ್ಡ ವರ್ಗಕ್ಕೆ ಲಸಿಕೆಯ ರಕ್ಷಣೆ ಇಲ್ಲದೇ ಇರುವುದು ಬಹುದೊಡ್ಡ ಅಪಾಯಕ್ಕೆ ಕಾರಣ ಆಗಬಹುದು. ಲಸಿಕೆ, ಮಾಸ್ಕ್, ಸಾಮಾಜಿಕ ಅಂತರ ಪಾಲನೆಯು ಒಮೈಕ್ರಾನ್‌ನಿಂದ ರಕ್ಷಣೆ ಪಡೆಯಲು ಇರುವ ದಾರಿ ಎಂಬುದನ್ನು ಜನರು ಸದಾ ನೆನಪಿನಲ್ಲಿ ಇರಿಸಿಕೊಳ್ಳಬೇಕಿದೆ. ಇಲ್ಲವಾದಲ್ಲಿ ದೊಡ್ಡ ಗಂಡಾಂತರ ಎದುರಾದೀತು.