ದಾಖಲೆ ಮತದಾನ ಶ್ಲಾಘನೀಯ
ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣೆ ಸುಗಮವಾಗಿ ನಡೆದಿದ್ದು, ಬಹುತೇಕ ಜಿಲ್ಲೆಗಳಲ್ಲಿ ಶೇ.99ಕ್ಕೂ ಹೆಚ್ಚು ಮತದಾನವಾಗಿರುವುದು ಆಶಾದಾಯಕ ಬೆಳವಣಿಗೆ. ಹಿಂದುಳಿದ ಜಿಲ್ಲೆ ಕಲಬುರಗಿಯಲ್ಲೂ ಶೇ.99ರಷ್ಟು ಮತದಾನವಾಗಿರುವುದು ಶ್ಲಾಘನೀಯ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳು ಪ್ರಭುವನ್ನು ಆಯ್ಕೆ ಮಾಡಲು ಇರುವ ಏಕೈಕ ಮಾರ್ಗವೇ ಮತದಾನ ವಾಗಿರುವುದರಿಂದ ಅತಿ ಹೆಚ್ಚು ಮತದಾನ ವಾದಷ್ಟು ಪ್ರಭುಗಳ ಆಯ್ಕೆಯಲ್ಲಿ ನಿಖರತೆ, ಸ್ಪಷ್ಟತೆ ಇರುತ್ತದೆ. ಆದರೆ ಈ ಬಾರಿ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಚುನಾವಣೆಗೆ ಈ ಮಟ್ಟಿಗೆ ಉತ್ಸಾಹ ತೋರಲು ಬೇರೆ ಬೇರೆ ಕಾರಣಗಳೇ ಇವೆ ಎಂಬುವುದು ಬಿಚ್ಚಿಟ್ಟ ಸತ್ಯ. ಚಿಂತಕರ ಚಾವಡಿ ಎಂದೇ ಹೆಸರಾಗಿರುವ ವಿಧಾನ ಪರಿಷತ್‌ನ ಪ್ರವೇಶಕ್ಕೆ ಈ ಬಾರಿ ನಡೆದ ಚುನಾವಣೆಯಲ್ಲಿ ಗೆಲ್ಲಲು ಹಣವೇ ಪ್ರಧಾನ ಅಸ್ತ್ರವಾಗಿ ಬಳಕೆಯಾಗಿದೆ ಎಂಬುದು ತಲೆ ತಗ್ಗಿಸುಂತಹ ವಿಚಾರ. ಮತದಾನ ಪೆಟ್ಟಿಗೆಯಲ್ಲಿ ಪಾರಾಗಿ ಬಂದ ಜನಪ್ರತಿನಿಧಿಗಳೇ ಮತ ಚಲಾಯಿಸಲು ಲಕ್ಷ ಲಕ್ಷ ರುಪಾಯಿ ಎಣಿಸಿರುವುದು ಎಲ್ಲೆಡೆ ವರದಿಗಳಾಗಿವೆ.
ಹಲವೆಡೆ ಸೀರೆ, ಚಿನ್ನದ ಉಂಗುರಗಳೂ ಹಂಚಿಕೆಯಾಗಿವೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿನ ಸಮಸ್ಯೆಗಳನ್ನು ವಿಧಾನ ಮಂಡಲದಲ್ಲಿ ಚರ್ಚಿಸಲು ತಮ್ಮ ಪರವಾಗಿ ಒಬ್ಬ ಪ್ರತಿನಿಽಯನ್ನು ಚುನಾಯಿಸಿ ಕಳುಹಿಸಿ, ಕಾಲ ಕಾಲಕ್ಕೆ ತಮ್ಮ ಸಮಸ್ಯೆಗಳನ್ನು ಆ ಚುನಾಯಿತ ಪ್ರತಿನಿಽಗಳಿಗೆ ತಿಳಿಸಿ, ಸದನದಲ್ಲಿ ಧ್ವನಿ ಎತ್ತುವಂತೆ ಒತ್ತಾಯಿ ಸಬೇಕಾದ ಮತದಾರರೇ ತಮ್ಮ ಅಮೂಲ್ಯ ಮತಗಳನ್ನು ಮಾರಿಕೊಂಡರೆ, ತಮ್ಮ ಸಮಸ್ಯೆಗಳನ್ನು ಹೇಳಿ ಕೊಳ್ಳಲು, ಬೇಡಿಕೆಗಳನ್ನು ಪೂರೈಸುವಂತೆ ಹಕ್ಕೊತ್ತಾಯ ಮಂಡಿಸಲು ಅವಕಾಶ ಇರುತ್ತದೆಯೇ ಎಂಬ ಬಗ್ಗೆ ಯೋಚನೆ ಮಾಡಬೇಕಾಗಿತ್ತು. ಆದರೆ ಯಾವ ಜಿಲ್ಲೆಯಲ್ಲೂ ಇಂತಹ ಮತದಾರರು ಕಾಣಸಿಗಲಿಲ್ಲ.
ವಾಸ್ತವವಾಗಿ ಒಬ್ಬ ಗ್ರಾಮ ಪಂಚಾಯಿತಿ ಸದಸ್ಯನನ್ನೋ, ತಾಲೂಕು ಪಂಚಾಯಿತಿ ಸದಸ್ಯನನ್ನೋ, ಜಿಲ್ಲಾ ಪಂಚಾಯಿತಿ ಸದಸ್ಯನನ್ನೋ ತಮ್ಮ ಪ್ರತಿನಿಧಿ ಯನ್ನಾಗಿ ವಿಧಾನ ಪರಿಷತ್ ಚುನಾವಣೆಗೆ ನಿಲ್ಲಿಸಿ, ಚುನಾಯಿಸಬೇಕು. ಆದರೆ ಪಕ್ಷಗಳ ಟಿಕೆಟ್‌ಗಳು ಉಳ್ಳವರು ಕೊಂಡುಕೊಳ್ಳುವ ವಸ್ತುವಾಗಿದ್ದರಿಂದ ಪಂಚಾಯಿತಿ ಮಟ್ಟದ ಜನಪ್ರತಿನಿಧಿಗಳಿಗೆ ಕೈಗೆಟುಕದಂತಾಗಿದೆ. ಹೀಗಾಗಿ ಇದ್ದ ಮೂವರಲ್ಲೇ ಉತ್ತಮನೊಬ್ಬನನ್ನು ಹುಡುಕುವ ಸ್ಥಿತಿ ನಿರ್ಮಾಣವಾಗಿದೆ. ಹಣ ಹಂಚಿಕೆ ಮಾಡಿ ಗೆದ್ದಿದ್ದೇನೆ ಎಂಬ ಅಹಂಭಾವ ಬಿಟ್ಟು ತಮ್ಮ ಕ್ಷೇತ್ರದ ಸಮಸ್ಯೆಗಳ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಕೆಲಸ ನೂತನ ಪರಿಷತ್ ಸದಸ್ಯರು ಮಾಡಲಿ.