ಮಂಗಳದಾಯಕ ಕಾರ್ಯ
ರಾಜ್ಯದ ಪೊಲೀಸ್ ಇಲಾಖೆಯಲ್ಲಿ ನಡೆಯುವ ನೇಮಕದಲ್ಲಿ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದವರಿಗೆ ಶೇ.೧ರಷ್ಟು ಮೀಸಲು ಕಲ್ಪಿಸುವ ಮೂಲಕ ದೇಶದಲ್ಲೇ ಮೊದಲ ಬಾರಿಗೆ ಮಹತ್ವದ ನಿರ್ಧಾರವೊಂದನ್ನು ಕರ್ನಾಟಕ ಪೊಲೀಸ್ ಇಲಾಖೆ ಕೈಗೊಂಡಿದೆ.
ಲಿಂಗ ಎಂಬ ಕಾಲಂನಲ್ಲಿ ಏನು ಭರ್ತಿ ಮಾಡಬೇಕು ಎಂಬ ಬಗ್ಗೆ ಸ್ಪಷ್ಟಪಡಿಸದ ಕಾರಣ ಅನೇಕ ಲೈಂಗಿಕ ಅಲ್ಪಸಂಖ್ಯಾತರು ಸರಕಾರಿ ನೌಕರಿ ಸೇರಲು ಸಾಧ್ಯ ವಾಗುತ್ತಿಲ್ಲ ಎಂಬುದನ್ನು ಗಮನಿಸಿದ ಡಿಜಿಪಿ ಪ್ರವೀಣ್ ಸೂದ್ ಅವರು ಇದೀಗ ಇಂಹತ ಮಹತ್ವದ ಕಾರ್ಯ ಮಾಡಿದ್ದಾರೆ. ಇನ್ನಿತರ ಇಲಾಖೆಗಳೂ ಇಂತಹ ಮಹತ್ವದ ನಿರ್ಧಾರವನ್ನು ಕೈಗೊಂಡು, ಸಮಾಜದ ಮುಖ್ಯ ವಾಹಿನಿಯಿಂದ ದೂರ ಇರುವವರನ್ನು ಮುಖ್ಯ ವಾಹಿನಿಗೆ ತರುವಲ್ಲಿ ಪ್ರಯತ್ನಿಸಬೇಕು.
ಪೊಲೀಸ್ ಇಲಾಖೆ ತನ್ನ ಕೆಲಸ ಮಾಡಿದೆ, ಆದರೆ ಇನ್ನು ನಿಜವಾದ ಕೆಲಸ ಮಾಡಬೇಕಿರುವುದು ಲೈಂಗಿಕ ಅಲ್ಪಸಂಖ್ಯಾತರು. ಸಮಾಜ ನಮ್ಮನ್ನು ದೂರ ಇಟ್ಟಿದೆ ಎಂದು ಹೇಳಿಕೊಂಡೇ ಅನೈತಿಕ ಚಟುವಟಿಕೆ, ಭಿಕ್ಷಾ ಟನೆಗಳಲ್ಲಿ ತೊಡಗುತ್ತಿದ್ದವರು ಇನ್ನು ಮುಂದೆ ಅದರಿಂದ ದೂರ ಇರಬೇಕಿದೆ. ಪೊಲೀಸ್ ಇಲಾಖೆಗೆ ಸೇರಲು ಬೇಕಾದ ತಯಾರಿಯನ್ನು ಮಾಡಿಕೊಳ್ಳಬೇಕಿದೆ. ತಾವೂ ಸರಕಾರಿ ನೌಕರಿ ಪಡೆಯುವ ಮೂಲಕ ಎಲ್ಲರಂತೆ ಸಮಾಜದ ಮುಖ್ಯವಾಹಿನಿಯಲ್ಲಿ ಬದುಕಬಹುದು ಎಂಬು ದನ್ನು ಅದೇ ಸಮುದಾಯದ ಇನ್ನುಳಿದವರಿಗೆ ತೋರಿಸಿ ಕೊಡಬೇಕಿದೆ.
ಹೆಚ್ಚಿನ ಸಂಖ್ಯೆಯಲ್ಲಿರುವ ಲೈಂಗಿಕ ಅಲ್ಪಸಂಖ್ಯಾತರಿಗಾಗಿ ಕೇವಲ ಶೇ.1ರಷ್ಟು ಮೀಸಲು ಕಲ್ಪಿಸಿದರೆ ಹೇಗೆ? ಎಂಬ ಪ್ರಶ್ನೆಯನ್ನೂ ಸಾಮಾಜಿಕ ಜಾಲತಾಣ ಗಳಲ್ಲಿ ಎತ್ತಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ನೇಮಕ ಆದೇಶ ಪ್ರಕಟವಾದಾಗಲೆಲ್ಲಾ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಳವಾದರೆ, ಮೀಸಲು ಸಂಖ್ಯೆಯನ್ನೂಹೆಚ್ಚಿಸುವ ಸಾಧ್ಯತೆ ಇದೆ. ಆದರೆ ಅದು ಲೈಂಗಿಕ ಅಲ್ಪಸಂಖ್ಯಾತರು ತೋರಿಸುವ ಇಚ್ಛಾಶಕ್ತಿ ಮೇಲೆ ಅವಲಂಬನೆಯಾಗಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಭಿಕ್ಷಾಟನೆ, ಅನೈತಿಕ ಚಟುವಟಿಕೆಗಳನ್ನು ಬಿಟ್ಟು, ಎಲ್ಲರಂತೆ ಸಾಮಾನ್ಯ ಬದುಕು ಬದುಕುವತ್ತ ಗಮನ ಹರಿಸಬೇಕಿದೆ. ಈ ನಾಗರಿಕ ಸಮಾಜವೂ ಅವರನ್ನು ಎಲ್ಲರಂತೆ ಕಾಣುವ ದೃಷ್ಟಿ ಹೊಂದಬೇಕಿದೆ. ಕರ್ನಾಟಕ ಪೊಲೀಸ್ ಇಲಾಖೆ ಮಾತ್ರ ಅಂಬೇಡ್ಕರ್ ಅವರ ಸಮ ಸಮಾಜದ ಕನಸು ನನಸಾಗುವ ಪಯಣದಲ್ಲಿ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ.