ಮದುವೆ ವಯಸ್ಸು ಜಾಗೃತಿ ಮುಖ್ಯ
ಕಂದ್ರ ಸರಕಾರವು ಹೆಣ್ಣು ಮಕ್ಕಳ ಮದುವೆಯ ಕನಿಷ್ಠ ವಯಸ್ಸನ್ನು 21ಕ್ಕೆ ಏರಿಸಿದೆ. ಹೆಣ್ಣು ಗಂಡಿನ ನಡುವಿನ ತಾರತಮ್ಯ, ಹೆರಿಗೆ ಸಂದರ್ಭದಲ್ಲಿ ತಾಯಂದಿರಮರಣ ಪ್ರಮಾಣ ತಗ್ಗಿಸುವುದು, ತಾಯಿಯಾಗುವ ವಯಸ್ಸು, ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಅಪೌಷ್ಟಿಕತೆ ಸಮಸ್ಯೆ ಮುಂತಾದವುಗಳ ಬಗ್ಗೆ ಸಮಾಲೋಚನೆ ನಡೆಸಿ ಕೇಂದ್ರ ಸರಕಾರ ಈ ನಿರ್ಧಾರ ತೆಗೆದುಕೊಂಡಿದೆ.
ಹೆಣ್ಣು ಮಕ್ಕಳ ಮದುವೆಯ ಕನಿಷ್ಠ ವಯಸ್ಸನ್ನು ಏರಿಸಿದ ಮಾತ್ರಕ್ಕೆ ಅದು ದೇಶಾದ್ಯಂತ ಜಾರಿಯಾಗುತ್ತದೆ ಎನ್ನಲಾಗದು. ಏಕೆಂದರೆ ಬಹುತೇಕ ಪೋಷಕರು ಹಲವಾರು ಕಾರಣಗಳಿಂದಾಗಿ ಹೆಣ್ಣು ಮಗು ತವರು ಮನೆಗೆ ಹೊರೆ ಎಂದು ಭಾವಿಸಿದ್ದಾರೆ. ಸುಶಿಕ್ಷಿತ ಪೋಷಕರು ಕೂಡ ಆದಷ್ಟು ಬೇಗ ತಮ್ಮ ಮಗಳ ಮದುವೆ ಮಾಡಿ ಕೈತೊಳೆದುಕೊಳ್ಳುವ ಲೆಕ್ಕಾಚಾರದಲ್ಲೇ ಇರುತ್ತಾರೆ. ಹೀಗಾಗಿ ಈ ಮೊದಲಿಗಿಂತ ಹೆಚ್ಚಾಗಿ ಇನ್ಮುಂದೆ ಬಾಲ್ಯವಿವಾಹಗಳು ನಡೆಯುವ ಅಪಾಯವಿದೆ. ಭಾರತದಲ್ಲಿ ಪ್ರತಿವರ್ಷ 15 ಲಕ್ಷ ಹೆಣ್ಣು ಮಕ್ಕಳಿಗೆ 18 ವರ್ಷ ವಯಸ್ಸಿನ ಒಳಗೆ ಮದುವೆ ಮಾಡಲಾಗುತ್ತದೆ.
ಮದುವೆಯ ವಿಚಾರದಲ್ಲಿ ಬರೀ ಕಾಯಿದೆ ಮಾಡಿ ಸುಮ್ಮನಾದರೆ ಸಾಲದು ಎಂಬುದಕ್ಕೆ ಈ ಅಂಕಿಅಂಶಗಳೇ ಸಾಕ್ಷಿ. ಹೀಗಾಗಿ ಸರಕಾರವು ಇದನ್ನು ಗಂಭೀರವಾಗಿ ಪರಿಗಣಿಸಿ ಮುಂದೆ ನಡೆಯಲಿರುವ ಬಾಲ್ಯವಿವಾಹಗಳ ತಡೆಗೆ ವಿಶೇಷ ತಂಡಗಳನ್ನು ನಿಯೋಜನೆ ಮಾಡಬೇಕಿದೆ. ಅಲ್ಲದೆ, ಜನರಲ್ಲಿ ಜಾಗೃತಿ ಮೂಡಿಸಲು ಬೇಕಾದ ಕೆಲಸಗಳನ್ನು ಸರಕಾರ ಮಾಡಲೇಬೇಕು. ಹೆಣ್ಣು ಮಕ್ಕಳಿಗೆ ವಿದ್ಯೆ, ವೃತ್ತಿ ಮತ್ತು ಬದುಕಿನಲ್ಲಿ ಸಮಾನ ಅವಕಾಶಗಳು ಇನ್ನೂ ಹೆಚ್ಚಿಗೆ ತೆರೆದುಕೊಳ್ಳು ವಂತೆ ಮಾಡಬೇಕು. ತಮ್ಮ ಮಕ್ಕಳಿಗೆ ಬದುಕಿನ ಸುರಕ್ಷತೆಯ ಖಾತರಿ ಇದೆ ಎಂದಾದರೆ ಅಪ್ಪ-ಅಮ್ಮಂದಿರು ಹೆಣ್ಣು ಮಕ್ಕಳನ್ನು ಹೊರೆ ಎಂದು ಭಾವಿಸಲಾರರು.
ಬಾಲ್ಯವಿವಾಹ ವಿಷಯದಲ್ಲಿ ದಂಡನೆಗಿಂತ ಜಾಗೃತಿಯೇ ಹೆಚ್ಚು ಮುಖ್ಯ ಎಂಬುದನ್ನು ಅಧಿಕಾರಿ ವರ್ಗವು ತಿಳಿದುಕೊಳ್ಳಬೇಕು.  ಕೇವಲ ಕಾಯಿದೆ ಮಾಡಿ ಸುಮ್ಮನಾದರೆ ಎಲ್ಲರಲ್ಲೊಂದು ಕಾಯಿದೆಯಾಗಿ ಪುಸ್ತಕದ ಪುಟದಲ್ಲೇ ಉಳಿಯುವ ಸಾಧ್ಯತೆ ಇದೆ. ಹೀಗಾಗಿ ಮದುವೆ ವಿಚಾರದಲ್ಲಿ ಜನಜಾಗೃತಿ ಮೂಡಿಸುವುದು ಅತ್ಯಗತ್ಯ.