ಕರ್ನಾಟಕ ಬಂದ್‌ನಿಂದ ನಷ್ಟ ಯಾರಿಗೆ?
ಕರ್ನಾಟಕ ಏಕೀಕರಣವಾದಂದಿನಿಂದ ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂಇಎಸ್) ಉಪಟಳ ನಡೆಯುತ್ತಲೇ ಇದೆ. ಕನ್ನಡಿಗರನ್ನು ಪ್ರಚೋದಿಸಿ ನೆಮ್ಮದಿ ಯನ್ನು ಕದಡುವ, ಕರ್ನಾಟಕದ ಹಿತಕ್ಕೆ ಮಾರಕವಾಗುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದಿದೆ.
ಇತ್ತೀಚೆಗೆ ಎಂಇಎಸ್ ಕಾರ್ಯಕರ್ತರು, ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ವಿರೂಪಗೊಳಿ ಸಿದ್ದು, ಕನ್ನಡ ಬಾವುಟವನ್ನು ಸುಟ್ಟಿರುವುದು ಅಕ್ಷಮ್ಯ. ಎಂಇಎಸ್‌ನ ಇಂತಹ ಚಟುವಟಿಕೆಗೆ ಕಡಿವಾಣ ಹಾಕಲೇಬೇಕು. ಆದರೆ, ಎಂಇಎಸ್ ಈಗಲೇ ನಿಷೇಧವಾಗಬೇಕು ಎಂದು ಹಠ ಹಿಡಿದು ಕರ್ನಾಟಕ ಬಂದ್‌ಗೆ ಕರೆ ನೀಡಿರುವುದು ಸರಿಯಲ್ಲ. ಬಂದ್ ಅನ್ನುವುದು ಜನಾಗ್ರಹದ ಕೊನೆಯಅಸ್ತ್ರ. ಎಂಇಎಸ್ ರಾಜಕೀಯ ಪಕ್ಷವಾಗಿ ನೋಂದಣಿಯಾಗಿದೆ.
ರಾಜ್ಯ ಸರಕಾರ ನೇರವಾಗಿ ಅದನ್ನು ನಿಷೇಧಿಸಲು ಸಾಧ್ಯವಿಲ್ಲ. ಕೇಂದ್ರ ಸರಕಾರಕ್ಕೆ ಪತ್ರ ಬರೆದು, ಕೇಂದ್ರ ಸರಕಾರವು ಚುನಾವಣಾ ಆಯೋಗಕ್ಕೆ ಆ ಪತ್ರವನ್ನು ರವಾನಿಸಿ ಸೂಕ್ತ ಕ್ರಮಕ್ಕೆ ಸೂಚಿಸಬೇಕು. ಆಗಲೂ ನಿಷೇಧಿಸುವ ಸಾಧ್ಯತೆ ತೀರಾ ಕಡಿಮೆ.
ಕಳೆದೆರಡು ವರ್ಷಗಳಿಂದ ಕರೋನಾ ಸಂಕಟದಿಂದ ನರಳಿರುವ ಜನ ಸ್ವಲ್ಪಮಟ್ಟಿಗೆ ಸುಧಾರಿಸಿಕೊಳ್ಳುತ್ತಿರುವ ಈ ಕಾಲದಲ್ಲಿ ಬಂದ್ ಮಾಡುವುದು ಎಷ್ಟು ಸರಿ ಎಂಬುದನ್ನು ಹೋರಾಟದ ಮುಂಚೂಣಿ ಕಾರ್ಯಕರ್ತರು ಯೋಚಿಸಬೇಕು. ಬಂದ್‌ನಿಂದ ಕನ್ನಡಿಗರೇ ತೊಂದರೆ ಗೊಳಗಾಗುವರು ವಿನಾಃ ಮರಾಠಿಗರಲ್ಲ. ಇಲ್ಲಿನ ವ್ಯಾಪಾರ ವಹಿವಾಟುಗಳಿಗೆ ತೊಂದರೆಯಾದರೆ ಕರ್ನಾಟಕಕ್ಕೇ ಆರ್ಥಿಕವಾಗಿ ನಷ್ಟವೇ ವಿನಾಃ ಮಹಾರಾಷ್ಟ್ರ ಕ್ಕಲ್ಲ. ರಾಜ್ಯ ಸರಕಾರವೂ ಎಂಇಎಸ್ ವಿರುದ್ಧ ಕಠಿಣ ಧೋರಣೆ ತಾಳಿದಾಗಲೂ ಬಂದ್ ಅವಶ್ಯಕತೆ ಏನಿದೆ? ಒಂದು ವೇಳೆ ಆಡಳಿತ ಅಥವಾ ಪ್ರತಿಪಕ್ಷದ ಯಾರೇ ಒಬ್ಬರು ಎಂಇಎಸ್ ಬಗ್ಗೆ ಮೃದು ಧೋರಣೆ ತಾಳಿದ್ದರೆ, ಎಂಇಎಸ್ ಪರ ವಾದ ಮಂಡನೆ ಮಾಡಿದ್ದರೆ ಈ ಬಂದ್‌ಗೆ ಅರ್ಥವಿರುತ್ತಿತ್ತು.
ಇಡೀ ಕರ್ನಾಟಕವೇ ಒಕ್ಕೊರಿಲಿನಿಂದ ಎಂಇಎಸ್ ನಡೆಯನ್ನು ವಿರೋಧಿಸಿದ್ದರೂ ಯಾರ ಮೇಲೆ ಆಕ್ರೋಶ ವ್ಯಕ್ತಪಡಿಸಲು ಈ ಬಂದ್ ಎಂಬುದನ್ನು ಅರ್ಥಮಾಡಿ ಕೊಳ್ಳಬೇಕಿದೆ. ಬಂದ್ ವಿಫಲವಾದರೆ ಕನ್ನಡ ಹೋರಾಟಗಾರರಿಗೆ ಮುಜುಗರವಾಗುತ್ತದೆ, ಕನ್ನಡ ಚಳವಳಿಯ ಗಾಂಭೀರ್ಯಕ್ಕೂ ಚ್ಯುತಿ ಬರುತ್ತದೆ. ಬಂದ್ ಕರೆಯನ್ನು ಹಿಂದಕ್ಕೆ ಪಡೆದು, ತಪ್ಪಿತಸ್ಥರನ್ನು ಸಮಾಜವಿರೋಧಿ ಅಥವಾ ಗೂಂಡಾ ಕಾಯಿದೆಯಡಿ ಬಂಧಿಸಿ ಕಠಿಣ ಶಿಕ್ಷೆ ವಿಽಸುವಂತೆ ಸರಕಾರವನ್ನು ಒತ್ತಾಯಿ ಸುವುದು ಪ್ರಬುದ್ಧ ನಡೆ.