ನೈಟ್ ಕರ್ಫ್ಯೂ ಪಾಲನೆ ಸಾಮಾಜಿಕ ಹೊಣೆಗಾರಿಕೆ
ಕೋವಿಡ್ ರೂಪಾಂತರ ತಳಿ ಒಮೈಕ್ರಾನ್ ಹರಡುವಿಕೆ ತಡೆಯಲು ಸರಕಾರವು ರಾಜ್ಯದಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆಗೆ ನಿರ್ಬಂಧ ಹೇರಿರುವುದು ಸೂಕ್ತ ನಿರ್ಧಾರವಾಗಿದೆ.
ಹೊಸ ವರ್ಷದ ಸಂಭ್ರಮದ ನೆಪದಲ್ಲಿ ಯುವಜನ ಮೈಮರೆತು ಗುಂಪು ಗುಂಪಾಗಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಒಂದೆಡೆ ಸೇರಿ ಸಂಭ್ರಮಿಸುವುದು ಸಾಮಾನ್ಯ. ಒಮೈಕ್ರಾನ್ ಹರಡುವಿಕೆ ಕುರಿತು ಆತಂಕ ಇರುವ ಈ ಸಂದರ್ಭದಲ್ಲಿ ನಾಡಿನ ಜನರ ಸುರಕ್ಷತೆ ದೃಷ್ಟಿಯಿಂದ ತಜ್ಞರ ಸಲಹೆ ಮೇರೆಗೆ, ಕಟ್ಟುನಿಟ್ಟಿನ ಮಾರ್ಗಸೂಚಿ ಜಾರಿ ಮಾಡಿರುವುದು ಸರಿಯಾಗಿದೆ. ಎರಡು ವರ್ಷಗಳಿಂದಲೂ ಕರೋನಾ ವೈರಸ್ಸಿನ ಅಟ್ಟಹಾಸದಿಂದ ಜನಜೀವನ ಬಸವಳಿದಿದೆ.
ಇದನ್ನು ನೆನಪಿನಲ್ಲಿ ಇಟ್ಟುಕೊಂಡು ಸಾರ್ವಜನಿಕರು ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ತಮ್ಮ ಸುರಕ್ಷತೆ ಯೊಂದಿಗೆ ಪರರ ಸುರಕ್ಷತೆಗೂ ಆದ್ಯತೆ ನೀಡಿ ಸಾಮಾಜಿಕ ಹೊಣೆಗಾರಿಕೆ ನಿರ್ವಹಿಸಬೇಕು. ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಗುರುತರ ಜವಾಬ್ದಾರಿ ಪ್ರತಿಯೊಬ್ಬರದ್ದೂ ಆಗಿದೆ ಎಂಬುದನ್ನು ಮರೆಯಬಾರದು.
ಹೊಸ ವರ್ಷ ಆಚರಣೆಯ ನೆಪದಲ್ಲಿ ದುಪ್ಪಟ್ಟು ಹಣ ಕೊಟ್ಟು ಮೋಜು ಮಸ್ತಿಗಾಗಿ ಬೆಂಗಳೂರಿನ ಬಾರ್, ಕ್ಲಬ್ ಮತ್ತು ಹೋಟೆಲ್‌ಗಳಿಗೆ ಹೋಗುವ ಪಡ್ಡೆ ಹೈಕಳುಗಳ ಹಣದ ಪರ್ಸ್ ಕಂಡ ಬಾರ್ ಮಾಲೀಕರು ತರತರಹದ ರಂಗಿನಾಟ ಆಯೋಜಿಸಿ, ಒಂದು ತಿಂಗಳಲ್ಲಿ ಅವರಿಗೆ ಆಗುವ ವ್ಯಾಪಾರದ ಹಣ ವನ್ನು ಒಂದೇ ದಿನದಲ್ಲಿ ಬಾಚಿಕೊಳ್ಳುತ್ತಾರೆ. ಇದನ್ನು ಅರಿಯದ ಜನ ಕೆರೆಯ ನೀರನು ಕೆರೆಗೆ ಚೆಲ್ಲಿದಂತೆ ಬೆಂಗಳೂರಲ್ಲಿ ದುಡಿದ ಹಣ ವನ್ನು ಬೆಂಗಳೂರಲ್ಲಿಯೇ ವ್ಯಯ ಮಾಡುತ್ತಾರೆ.
ಇತ್ತೀಚೆಗೆ ಈ ಕೆಟ್ಟ ಸಂಪ್ರದಾಯ ಎಲ್ಲ ಕಡೆಗೂ ವ್ಯಾಪಿಸುತ್ತಿದೆ. ಹದಿಹರೆಯದ ಜೀವಗಳು ಕುಡಿಯದಿದ್ದರೆ, ಕುಣಿಯದಿದ್ದರೆ, ಕೂಗಾಡ ದಿದ್ದರೆ ಹೊಸ ವರ್ಷ ಬರುವುದಿಲ್ಲವೇ? ಹೊಸ ವರ್ಷವನ್ನು ಸ್ವಾಗತಿಸಲು ಹೋಟೆಲ್‌ಗಳಿಗೇ ಹೋಗಬೇಕೆ? ಅಷ್ಟಕ್ಕೂ ನಮ್ಮ ಭಾರತೀಯ ಪರಂಪರೆಯಂತೆ ಹೊಸ ವರ್ಷ ಬರುವುದು ಯುಗಾದಿಗೆ. ನಾವು ಜಾಗತೀಕರಣದ ವ್ಯಾಮೋಹದಲ್ಲಿ ನಮ್ಮ ನೆಲದ ಪದ್ಧತಿಗಳನ್ನು ಬದಿಗೊತ್ತುತ್ತಿದ್ದೇವೆ. ಈ ದಿಸೆಯಲ್ಲಿ ಎಚ್ಚೆತ್ತ ಸರಕಾರ ರಾತ್ರಿ ಕರ್ಫ್ಯೂ ವಿಧಿಸಿದ್ದು ಸ್ವಾಗತಾರ್ಹ ನಡೆ. ಸಾರ್ವಜನಿಕರು ಈ ನೈಟ್ ಕ-ವನ್ನುಪಾಲಿಸುವುದು ಸಾಮಾಜಿಕ ಹೊಣೆಗಾರಿಕೆ ಎಂದು ಭಾವಿಸಬೇಕಿದೆ.