ಆನ್‌ಲೈನ್ ಪ್ರಚಾರ ಸಾಧ್ಯವಿಲ್ಲವೇ?
ಒಂದೆಡೆ ಸೋಂಕು ತಡೆಯಲೆಂದು ಸರಕಾರವು ನಿರ್ಬಂಧ ಹೇರಿ ಜನರ ಆರ್ಥಿಕ ಚಟುವಟಿಕೆಗಳನ್ನು ನಿಯಂತ್ರಿಸುತ್ತಿದೆ.
ಇನ್ನೊಂದೆಡೆ ಉತ್ತರ ಪ್ರದೇಶದಲ್ಲಿ ಆಡಳಿತ ಪಕ್ಷವೇ ರ‍್ಯಾಲಿಗಳನ್ನು ಏರ್ಪಡಿಸಿ ಸಾವಿ ರಾರು ಜನರನ್ನು ಒಂದೆಡೆ ಸೇರಿಸುತ್ತಿದೆ. ಇದು ಸೋಂಕು ತಡೆಯುವ ತನ್ನ ಪ್ರಯತ್ನ ಗಳಲ್ಲಿ ಸರಕಾರ ಪ್ರಾಮಾಣಿಕವಾಗಿದೆಯೇ ಎಂಬ ಪ್ರಶ್ನೆ ಹುಟ್ಟು ಹಾಕುತ್ತದೆ. ಸರಕಾರದ ಈ ವಿರೋಧಾಭಾಸದ ಕ್ರಮಗಳಿಂದಾಗಿ ಜನಸಾಮಾನ್ಯರು ಕೂಡ ಒಮೈಕ್ರಾನ್ ಸೋಂಕು ತಡೆಗಾಗಿ ಸರಕಾರ ಕೈಗೊಳ್ಳುತ್ತಿರುವ ಕ್ರಮ ಗಳನ್ನು ಲಘುವಾಗಿ ಪರಿಗಣಿಸು ವಂತಾಗಿದೆ.
ಬಿಜೆಪಿಯ ಸಂಸತ್ ಸದಸ್ಯರೇ ಆಗಿರುವ ವರುಣ್ ಗಾಂಧಿ ಅವರು ‘ರಾತ್ರಿ ಕರ್ಫ್ಯೂ ಹೇರುವುದು ಮತ್ತು ಹಗಲಿನಲ್ಲಿ ರ‍್ಯಾಲಿ ನಡೆಸಿ ಲಕ್ಷಾಂತರ ಜನರನ್ನು ಸೇರಿಸುವುದು ಸಾಮಾನ್ಯ ಜನರ ತರ್ಕಕ್ಕೆ ನಿಲುಕದು’ ಎಂದು ಟೀಕಿಸಿದ್ದಾರೆ. ಸೋಂಕು ಗರಿಷ್ಠ ಪ್ರಮಾಣದಲ್ಲಿ ಹರಡುವುದು ಜನಸಂದಣಿ ಹೆಚ್ಚಿಗೆ ಇರುವ ಹಗಲಿನ ವಿನಾ ರಾತ್ರಿ ವೇಳೆ ಅಲ್ಲ. ರಾತ್ರಿ ವೇಳೆ ಜನಸಂಚಾರ ಹೆಚ್ಚು ಇರುವುದಿಲ್ಲ. ಈ ರಾಜಕೀಯ ರ‍್ಯಾಲಿಗಳು ಕೋವಿಡ್ ಹಾಟ್‌ಸ್ಪಾಟ್‌ಗಳಾಗಿ ಸೋಂಕು ಹರಡುವಿಕೆ ವೇಗ ಪಡೆಯಲು ಕಾರಣವಾಗ ಬಾರದು.
ಹೆಚ್ಚಿನ ಕೆಲಸ ಕಾರ್ಯಗಳನ್ನು ಆನ್‌ಲೈನ್ ಮೂಲಕವೇ ಮಾಡುವಂತೆ ಶಿಕ್ಷಣ ಸಂಸ್ಥೆಗಳು, ಐಟಿ, ಬಿಟಿ ಕಂಪನಿಗಳಿಗೆ ಸರಕಾರ ಒತ್ತಡ ಹೇರುತ್ತಿರುವಾಗ, ಚುನಾವಣಾ ಪ್ರಚಾರದ ರ‍್ಯಾಲಿಗಳನ್ನೂ ಆನ್‌ಲೈನ್‌ನಲ್ಲೇ ನಡೆಸಲು ಸಾಧ್ಯವಿಲ್ಲವೇ? ತಮ್ಮ ತಮ್ಮ ಪಕ್ಷದ ಸಾಧನೆ ಗಳನ್ನು ಅಬ್ಬರದ ಪ್ರಚಾರದ ಮೂಲಕವೇ ಏಕೆ ಮಾಡಬೇಕು? ಮನ್ ಕಿ ಬಾತ್, ಕೋವಿಡ್ ಸಂದೇಶಗಳು, ಸಭೆಗಳು, ಲಾಕ್‌ಡೌನ್‌ಗೆ ಸಂಬಂಧಿಸಿದ ಬ್ರೇಕಿಂಗ್ ಸುದ್ದಿಗಳನ್ನು ಆನ್‌ಲೈನ್ ಮೂಲಕವೇ ಇಡೀ ದೇಶಕ್ಕೆ ತಲುಪಿಸಿರುವಾಗ, ಆಯಾ ರಾಜ್ಯದ ಚುನಾವಣಾ ಪ್ರಚಾರವನ್ನೂ ಆನ್‌ಲೈನ್ ಮೂಲಕವೇ ಮಾಡುವಂತೆ ಆಗಬೇಕು. ಇದರಿಂದ ದೇಶಕ್ಕೂ ಕ್ಷೇಮ ಮತ್ತು ಹಣ ಉಳಿತಾಯ. ಚುನಾವಣೆ ಗೆಲ್ಲುವ ಏಕೈಕ ಉದ್ದೇಶದಿಂದ ಸರಕಾರವೇ ಜನರನ್ನು ಅಪಾಯಕ್ಕೆ ದೂಡುವುದು ಸರಿಯಲ್ಲ.
ಜನರ ಆರೋಗ್ಯದ ಮೇಲೆ ಏನೇ ದುಷ್ಪರಿಣಾಮ ಉಂಟಾದರೂ ಪರವಾಗಿಲ್ಲ, ತಮ್ಮ ರಾಜಕೀಯ ಪ್ರಚಾರ ಯಾವುದೇ ಅಡೆತಡೆಯಿಲ್ಲದೆ ನಡೆಯಬೇಕು ಎಂಬುದು ಜನಪರ ನಾಯಕತ್ವದ ಲಕ್ಷಣವಲ್ಲ.