ಸ್ವಇಚ್ಛೆಯ ಮತಾಂತರಕ್ಕೆ ಎಲ್ಲಿದೆ ನಿರ್ಬಂಧ?
ಎಲ್ಲ ಗದ್ದಲ, ವಿರೋಧ, ಟೀಕೆಗಳ ನಡುವೆಯೂ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆ ಮಂಡನೆಯಾಗಿದೆ. ಹಾಗೆ ನೋಡಿದರೆ ಕರ್ನಾಟಕವೇ ಇಂಥವಿಧೇಯಕ ಜಾರಿಗೊಳಿಸುತ್ತಿರುವ ಮೊದಲ ರಾಜ್ಯವೇನಲ್ಲ. ಮತ್ತು ಎಲ್ಲ ದೃಷ್ಟಿಯಿಂದಲೂ ಇಂಥದ್ದೊಂದು ಕಾಯಿದೆಯ ಅಗತ್ಯ ರಾಜ್ಯದಲ್ಲಿತ್ತು. ವಿಧೇಯಕದನ್ವಯ ಬಲವಂತ, ವಂಚನೆ, ಒತ್ತಾಯ ಹಾಗೂ ಆಮಿಷದ ಮೂಲಕ ನಡೆಸುವ ಮತಾಂತರ ಹಾಗೂ ಮದುವೆಯಾಗುವ ಭರವಸೆಯ ಮೂಲಕ ನಡೆಸುವ ಮತಾಂತರಕ್ಕೆ ಮಾತ್ರ ನಿಷೇಧವಿದೆ.
ವಿಧೇಯಕದಲ್ಲಿ ಎಲ್ಲೂ ಯಾವುದೇ ಧರ್ಮದ ಹೆಸರಿಲ್ಲ ಮತ್ತು ಯಾವುದೇ ಧರ್ಮದಿಂದ ಮತಾಂತರವಾದರೂ ಅದನ್ನು ಕಾಯ್ದೆ ನಿರ್ಬಂಧಿಸುತ್ತದೆ. ಹಾಗಿದ್ದ ಮೇಲೆ ವಿರೋಧದ ಪ್ರಶ್ನೆ ಎಲ್ಲಿಂದ ಬಂತು? ರಾಜ್ಯದಲ್ಲಿ ಕಳ್ಳತನ, ಭ್ರಷ್ಟಾಚಾರ, ಕೊಲೆ -ಸುಲಿಗೆ, ಅತ್ಯಾಚಾರಗಳಂಥವನ್ನು ನಿರ್ಬಂಧಿಸಿದರೆ ಅದನ್ನು ವಿರೋಧಿಸುವುದು ಎಷ್ಟು ಮೂರ್ಖತನವೋ ಮತಾಂತರ ನಿಷೇಧವನ್ನು ವಿರೋಧಿಸುವುದೂ ಅಷ್ಟೇ ಅರ್ಥಹೀನ.
ವಿಧೇಯಕದಲ್ಲಿರುವುದನ್ನೆಲ್ಲ ಸಂವಿಧಾನದಲ್ಲಿ ಸ್ಪಷ್ಟವಾಗಿ ಹೇಳಲಾಗಿದ್ದೇ. ವ್ಯಕ್ತಿಯು ಆತನ ನಿಕಟಪೂರ್ವ ಧರ್ಮಕ್ಕೆ ಮರು ಮತಾಂತರಗೊಂಡರೆ ಅದನ್ನು ಈ ಅಧಿನಿಯಮದಡಿಯಲ್ಲಿ ಮತಾಂತರವೆಂದು ಪರಿಗಣಿಸ ಲಾಗುವುದಿಲ್ಲ. ಅಂದರೆ ಸ್ವ ಇಚ್ಛೆಯಿಂದ ಯಾರು ಬೇಕಿದ್ದರೂ ಯಾವುದೇ ಧರ್ಮಕ್ಕೆ ಮತಾಂತರಗೊಳ್ಳ ಬಹುದು. ಆದರೆ, ಮತಾಂತರ ಮಾಡುವ ವ್ಯಕ್ತಿ ಜಿಲ್ಲಾ ದಂಡಾಧಿಕಾರಿಗೆ ಮೂವತ್ತು ದಿನಗಳ ಮೊದಲೇ ಈ ಬಗ್ಗೆ ಮಾಹಿತಿ ಕೊಡಬೇಕು ಎಂದು ವಿಧೇಯಕದಲ್ಲಿ ತಿಳಿಸಲಾಗಿದೆ.
ಎಂಬಲ್ಲಿಗೆ ಗುಟ್ಟಾಗಿ, ದುರುದ್ದೇಶಪೂರ್ವಕ, ಬಲವಂತದಿಂದ ನಡೆಯುವ ಮತಾಂತರವನ್ನು ನಿಬಂಧಿಸುವುದಷ್ಟೇ ಉದ್ದೇಶ. ವಯಸ್ಕನೊಬ್ಬ/ಳು ಸ್ವತಂತ್ರವಾಗಿ ಸ್ವ ಇಚ್ಛೆಯಿಂದ ವಿವಾಹವಾಗುವಾಗ ನೋಂದಣಾಧಿಕಾರಿಗಳೆದುರು ನೋಂದಣಿ ಮಾಡಿಕೊಂಡಷ್ಟೇ ಸಹಜ ಪ್ರಕ್ರಿಯೆ ಇದಾಗಲಿದೆ. ಅಕ್ರಮ ವಿವಾಹಕ್ಕೆ ಮುಂದಾ ಗುವವನು ಮಾತ್ರವೇ ವಿವಾಹ ನೋಂದಣಿಗೆ ಹಿಂಜರಿಯುವುದು. ಅದಿಲ್ಲವೆಂದಾದರೆ ಕಾನೂನು ಸಮ್ಮತ ವಯಸ್ಕರ ವಿವಾಹಕ್ಕೆ ಕಾನೂನಾತ್ಮಕ ರಕ್ಷಣೆಯೇ ಸಿಗುತ್ತದಲ್ಲವೇ? ಹಾಗೆಯೇ ಕಾನೂನು ಸಮ್ಮತ ಮತಾಂತರಕ್ಕೆ ಸರಕಾರವೇ ರಕ್ಷಣೆ ನೀಡುತ್ತದೆ.
ಸ್ವತಃ ಸಂವಿದಾನ ಕರ್ತೃ ಅಂಬೇಡ್ಕರ್ ಅವರೇ ಬಹಿರಂಗವಾಗಿ ಬೌದ್ಧ ಧರ್ಮ ಸ್ವೀಕರಿಸಿರಲಿಲ್ಲವೇ? ನಿಜವಾಗಿ ಪ್ರತಿಪಕ್ಷ ಆರೋಪಿಸಿದಂತೆ ವಿಧೇಯಕವನ್ನು ಕದ್ದುಮುಚ್ಚಿ ವಿಧೇಯಕ ಮಂಡಿಸಿಲ್ಲ. ಇವರ ಬೆಂಬಲದಲ್ಲಿ ಕದ್ದು ಮುಚ್ಚಿ ನಡೆಯುತ್ತಿದ್ದ ಮತಾಂತರಕ್ಕೆ ತಡೆ ಬೀಳುತ್ತಿದೆ.