ಕೆಂಪುವಲಯ ಪಟ್ಟಿಗೆ ಬೆಂಗಳೂರು: ಇರಲಿ ಎಚ್ಚರ
ಜನವರಿ ಅಂತ್ಯ ಅಥವಾ ಫೆಬ್ರವರಿಯಲ್ಲಿ ಕೋವಿಡ್ ಮೂರನೇ ಅಲೆಯ ಉಪಟಳ ಹೆಚ್ಚುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು. ಆದರೆ ಜನವರಿ ಆರಂಭದಲ್ಲೇ ಬೆಂಗಳೂರು ನಗರ ಕೆಂಪು ವಲಯದ ಪಟ್ಟಿಗೆ ಸೇರಿರುವುದು ಆತಂಕ ಹುಟ್ಟಿಸಿದೆ.
ತಜ್ಞರ ಊಹೆಗೂ ಮೀರಿ ಕೋವಿಡ್ ವೈರಸ್ ಹಬ್ಬುತ್ತಿದೆ. ಹೀಗಾಗಿ ಸರಕಾರ ಮತ್ತು ಜನರು ತಕ್ಷಣದಿಂದಲೇ ಎಚ್ಚರವಾಗಬೇಕಿದೆ. ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಸರಕಾರ ತುಸು ವಿಳಂಬ ಮಾಡಿದ್ದರಿಂದ ದೊಡ್ಡ ಪ್ರಮಾಣದ ಸಂಕಷ್ಟ ಎದುರಾಯಿತು. ರೂಪಾಂತರಿ ಒಮೈಕ್ರಾನ್ ವೈರಾಣು ಬಗ್ಗೆ ಈಗಾಗಲೇ ಸಾಕಷ್ಟು ಅರಿವು ಮೂಡಿಸ ಲಾಗಿದೆ. ಹಾಗಾಗಿ, ಓಮೈಕ್ರಾನ್ ನಿಯಂತ್ರಣಕ್ಕೆ ಎಷ್ಟು ಸಾಧ್ಯವೋ ಅಷ್ಟು ಬೇಗ ಸಿದ್ಧತೆ ಮಾಡಿಕೊಳ್ಳುವುದು ಒಳ್ಳೆಯದು.
ಇದರ ಜಿನೋಮ್ ಸಿಕ್ವೆನ್ಸಿಂಗ್ ಮಾಡಲು8ರಿಂದ10ದಿನ ಬೇಕಾಗುತ್ತದೆ. ಹಾಗಾಗಿ, ಈ ಹಿಂದೆ ತೆಗೆದುಕೊಂಡಿದ್ದಕ್ಕಿಂತ ಹೆಚ್ಚು ಜಾಗ್ರತೆಯನ್ನು ಜನ ವಹಿಸಬೇಕಿದೆ. ಮಕ್ಕಳಿಗೆ ಲಸಿಕೆ ಹಾಗೂ ದೊಡ್ಡವರಿಗೆ ಬೂಸ್ಟರ್ ಡೋಸ್ ನೀಡುವುದಕ್ಕೆ ವೇಗ ನೀಡಬೇಕಿದೆ. ಕೋವಿಡ್ ನಿಯಂತ್ರಣ ಹೇಗೆ ಸಾಧ್ಯ ಎಂಬ ಬಗ್ಗೆ ಸರಕಾರಕ್ಕೆ ಈಗಾಗಲೇ ಅನುಭವವಿದೆ, ತಜ್ಞರಿಗೆ, ಜನರಿಗೂ ತಿಳಿವಳಿಕೆ ಇದೆ. ಇಷ್ಟೆಲ್ಲ ಇದ್ದ ಮೇಲೂ ವೈರಸ್‌ನ ಪೀಡಣೆಗೆ ಒಳಗಾಗುವುದು ನಮ್ಮ ದಡ್ಡತನ. ‘ಮಾ, ವ್ಯಾಕ್ಸಿನ್, ಸಾಮಾಜಿ ಅಂತರ; ಈ ಮೂರು ಸೂತ್ರಗಳನ್ನು ಪಾಲಿಸುವುದನ್ನು ಮರೆಯಬಾರದು.
ಸರಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ಸಾರ್ವಜನಿಕರು ಸಹಕರಿಸಿದರೆ ಮಾತ್ರ ಕರೋನಾ ಮಹಾಮಾರಿಯನ್ನು ನಿಯಂತ್ರಿಸಲು ಸಾಧ್ಯ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಿದೆ. ಇಲ್ಲವಾದರೆ ಎರಡನೇ ಅಲೆಯಲ್ಲಿ ಆದ ಕಹಿ ಘಟನೆಗಳು ಮತ್ತೆ ಮರುಕಳಿಸುವ ಸಾಧ್ಯತೆ ಇದೆ. ಸರಕಾರವೂ ಎಲ್ಲ ಆಸ್ಪತ್ರೆಗಳಲ್ಲಿ ಸೂಕ್ತ ವೈದ್ಯಕೀಯ ಸಿದ್ಧತೆ ಮಾಡಿಕೊಳ್ಳಬೇಕು. ಎಲ್ಲ ಖಾಸಗಿ ಸಂಸ್ಥೆಗಳು (ಸಾಧ್ಯ ವಾದರೆ ಸರಕಾರಿ ಕಚೇರಿಗಳು) ವರ್ಕ್ ಫ್ರಂ ಹೋಮ್ ಜಾರಿ ಮಾಡುವುದರಿಂದ ತಮ್ಮ ಸಿಬ್ಬಂದಿಯನ್ನು ಮಹಾಮಾರಿಯಿಂದ ರಕ್ಷಿಸಿ ಕೊಳ್ಳಬಹುದು.
ಕಂಪನಿಯ ಆದಾಯವನ್ನು ಪರಿಗಣಿಸಿ, ಆಫೀಸುಗಳಲ್ಲಿ ಜನರನ್ನು ಸೇರಿಸುವುದರಿಂದ ಸಾಮಾಜಿಕ ಆರೋಗ್ಯ ಹಾಳಾಗುತ್ತದೆ ಎಂಬು ದನ್ನು ಕಂಪನಿಗಳ ಮಾಲೀಕರು ಅರ್ಥ ಮಾಡಿಕೊಳ್ಳಬೇಕು. 3ನೇ ಅಲೆಯಿಂದ ತಪ್ಪಿಸಿಕೊಳ್ಳುವಲ್ಲಿ ಎಲ್ಲರೂ ಜವಾಬ್ದಾರಿಯಿಂದ ವರ್ತಿಸಬೇಕಿದೆ