ಲಾಕ್‌ಡೌನ್ ಬಿಟ್ಟು, ಬೇರೆ ಯೋಚಿಸಿ
ಕರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಎಲ್ಲ ಮಾಧ್ಯಮಗಳಲ್ಲಿ ಲಾಕ್‌ಡೌನ್ ಜಾರಿಯಾಗುತ್ತದೆ ಎಂಬ ಅಬ್ಬರ ಶುರುವಾಗುತ್ತದೆ. ಲಾಕ್ ಡೌನ್ ಎಂಬ ಶಬ್ದ ಕೇಳಿದರೆ ಜನರಿಗೆ ಭಯ ಶುರುವಾಗುತ್ತಿದೆ. ಅದಕ್ಕೆ ಕಾರಣ ಒಂದು ಬಾರಿ ವಿಧಿಸಿದ ಲಾಕ್‌ಡೌನ್‌ನಿಂದ ಕಳೆದ ಎರಡು ವರ್ಷಗಳಲ್ಲಿ ಜನರಿಗೆಬದುಕು ಅತ್ಯಂತ ಭಯಾನಕ ಅನುಭವವನ್ನು ತಂದುಕೊಟ್ಟಿದೆ. ಈಗಷ್ಟೆ ಬದುಕು ಅಲ್ಲಲ್ಲಿ ಉಸಿರಾಡಲು, ಹರಳುಗಟ್ಟಲು ಪ್ರಾರಂಭಿಸಿದೆ.
ಹೊಸ ವರ್ಷದ ಹೊಸ್ತಿಲಲ್ಲಿ ಹೊಸ ಹೊಸ ಆಶೋತ್ತರಗಳತ್ತ ಜನರು ಮುಖ ಮಾಡಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಆದ ಕಹಿ ನೆನಪುಗಳನ್ನು ಎದೆಯೊಳಗೆ ನುಂಗಿಕೊಂಡು ಪ್ರಯಾಸದಿಂದ ನಗಲು ಕಲಿತಿದ್ದಾರೆ. ಹೀಗಿರುವಾಗ ಮತ್ತೆ ಲಾಕ್‌ಡೌನ್ ಜಾರಿಯಾದರೆ ಇಡೀ ಬದುಕು ಹಿಮ್ಮುಖವಾಗಿ ನಡೆಯುವ ಮನಃಸ್ಥಿತಿ ನಿರ್ಮಾಣವಾಗುವುದಂತೂ ಸತ್ಯ. ಕರೋನಾ ನಿಯಂತ್ರಣಕ್ಕೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿ. ಆದರೆ ಲಾಕ್‌ಡೌನ್ ಬದಲಿಗೆ ಅನ್ಯ ಮಾರ್ಗಗಳನ್ನು ಹುಡುಕಬೇಕಿದೆ. ಅದರಲ್ಲೂ ಶಾಲೆ ಕಾಲೇಜುಗಳು ಬಂದ್ ಆದರಂತೂ ಅಲ್ಲಿನ ಶಿಕ್ಷಕ ಮತ್ತು ಇತರ ಸಿಬ್ಬಂದಿಯ ಪಾಡು ಹೇಳತೀರದು.
ಈ ದೃಷ್ಟಿಯಿಂದ ಒಂದು ವೇಳೆ ಶಾಲಾ ಕಾಲೇಜುಗಳನ್ನು ಲಾಕ್‌ಡೌನ್ ಮಾಡಲೇಬೇಕಾದ ಅನಿವಾರ್ಯ ಎದುರಾದರೆ, ಸರಿಯಾಗಿ ಸಂಬಳ ವಿತರಣೆಯಾಗುವಂತೆ ಸರಕಾರ ನಿಗಾ ವಹಿಸಬೇಕಿದೆ. ಯಾಕೆಂದರೆ ಕಳೆದ ವರ್ಷದ ಲಾಕ್‌ಡೌನ್ ಸಮಯದಲ್ಲಿ ಅನೇಕ ಖಾಸಗಿ ಶಾಲಾ ಕಾಲೇಜುಗಳ ಆಡಳಿತ ಮಂಡಳಿಗಳು ಸಿಬ್ಬಂದಿಗೆ ವೇತನ ನೀಡಿಲ್ಲ. ಆದರೆ ಪೋಷಕರಿಂದ ಬಾಕಿ ಹಣದ ವಸೂಲಿ ಮಾತ್ರ ಕೈಬಿಡಲಿಲ್ಲ. ಹೀಗಾಗಿ ಲಾಕ್‌ಡೌನ್‌ ನಂತಹ ಕ್ಲಿಷ್ಟ ಪರಿಸ್ಥಿತಿಯನ್ನು ಸರಕಾರ ಅರ್ಥಮಾಡಿಕೊಳ್ಳಬೇಕು. ಲಾಕ್‌ಡೌನ್ ಒಂದೇ ಪರಿಹಾರ ಅಲ್ಲ ಎಂಬುದನ್ನು ಮನಗಾಣಬೇಕು.
ಅಲ್ಲದೆ, ವ್ಯಾಪಾರಿಗಳಿಗೆ ಸೂಕ್ತ ಮಾರ್ಗವೊಂದನ್ನು ಹುಡುಕಿ, ಜಾರಿ ಮಾಡಬೇಕು. ಕಳೆದ ಬಾರಿ ಕರೋನಾದಿಂದ ಮೃತಪಟ್ಟ ಕುಟುಂಬಗಳು ಇನ್ನೂ ಆ ದುಖಃದಿಂದ ಹೊರಬಂದಿಲ್ಲ. ಅಂತಹ ಕುಟುಂಬಗಳನ್ನು ಹುಡುಕಿ ಸರಕಾರ ಘೋಷಿಸಿರುವ ಪರಿಹಾರವನ್ನು ವಿತರಿಸುವುದಕ್ಕೆ ವೇಗ ನೀಡಬೇಕು. ಆರಂಭಿಕ ಹಂತದಲ್ಲೇ ಕರೋನಾ ಪರೀಕ್ಷೆಗಳನ್ನು ಹೆಚ್ಚಿಸಿ, ಸೂಕ್ತ ವೈದ್ಯಕೀಯ ಚಿಕಿತ್ಸೆ ಕೊಡುವಲ್ಲಿ ಸರಕಾರ ಪ್ರಯತ್ನ ಮಾಡಬೇಕು. ಲಾಕ್‌ಡೌನ್ಹೊರತಾದ ಎಲ್ಲ ಪರಿಹಾರವೋಪಾಯಗಳನ್ನು ಕಂಡುಹಿಡಿಯಬೇಕಿದೆ.