ಭದ್ರತಾ ವೈಫಲ್ಯ ದೇಶಕ್ಕೆ ಸವಾಲು
ಪ್ರಧಾನಿ ನರೇಂದ್ರ ಮೋದಿ ಅವರ ಪಂಜಾಬ್ ಪ್ರವಾಸದ ಸಂದರ್ಭದಲ್ಲಿ ಮೇಲ್ಸೇತುವೆ ಮೇಲೆ ಗಂಟಗಟ್ಟಲೇ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಮತ್ತು ಅಲ್ಲಿಂದ ಅವರು ವಾಪಸ್ ತೆರಳಿದ್ದು ಭದ್ರತಾ ವೈಫಲ್ಯ ಎನ್ನುವ ಜತೆಗೆ ದೇಶದ ಭದ್ರತಾ ವ್ಯವಸ್ಥೆಯ ಸವಾಲು ಕೂಡ ಎನ್ನಬಹುದು.
ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಾಹ್ಯ ಶಕ್ತಿಗಳಿಂದ ಬೆದರಿಕೆಯಿದೆ. ಈ ಸಂದರ್ಭದಲ್ಲಿ ಭದ್ರತಾ ಕಾರಣದಿಂದಾಗಿಯೇ ಅನೇಕ ಹೆಚ್ಚುವರಿ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಒಂದು ಪ್ರತಿಭಟನೆಯಂತಹ ಘಟನೆಯನ್ನು ನಿಯಂತ್ರಿಸಲು ಸಾಧ್ಯವಾಗದೆ, ಪ್ರಧಾನಿ ಅವರ ವಾಹನ ಗಂಟೆಗಟ್ಟಲೇ ಮೇಲ್ಸೇತುವೆ ಮೇಲೆ ಕಾಯುವಂತಾಗಿರುವುದು ದುರಂತ. ರೈತರು ದೆಹಲಿಯಲ್ಲಿ ತಮ್ಮ ಪ್ರತಿಭಟನೆಗೆ ಸರಕಾರ ಅವಕಾಶ ಕೊಡದೆ ಇದ್ದದ್ದಕ್ಕೆ ಸೇಡು ತೀರಿಸಿಕೊಂಡಿದೆ ಎಂಬುದು ಸಬೂಬಾದರೂ, ಅದನ್ನು ತಡೆಯುವ ಹೊಣೆ ಗಾರಿಗೆ ಅಲ್ಲಿನ ಸರಕಾರದ್ದಲ್ಲವೇ? ಪಂಜಾಬ್ ಸಿಎಂ, ಮೋದಿ ಅವರ ರ‍್ಯಾಲಿಯಲ್ಲಿ ಭಾಗವಹಿಸಲು ಜನರ ಕೊರತೆ ಯಿತ್ತು.
ಹೀಗಾಗಿ, ರ‍್ಯಾಲಿಯನ್ನು ಮೊಟುಕುಗೊಳಿಸಿ ವಾಪಸ್ ಆಗಿದ್ದಾರೆ. ಯಾವುದೇ ಭದ್ರತಾ ವೈಫಲ್ಯವಾಗಿಲ್ಲ ಎಂದು ತಿಳಿಸಿದ್ದಾರೆ. ಇದೊಂದು ರಾಜಕಾರಣದ ಆರೋಪ, ಪ್ರತ್ಯಾರೋಪವೇ ಹೊರತು, ಇನ್ನೇನು ಅಲ್ಲ. ಒಬ್ಬ ಸಿಎಂ ಆಗಿ ಪ್ರಧಾನಿ ಅವರ ಭದ್ರತೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾದದು ಅವರ ಧರ್ಮ ಕೂಡ. ಈ ದೇಶ ಈಗಾಗಲೇ ಅನೇಕ ಕಾರಣ ಗಳಿಗೆ ಇಬ್ಬರು ಪ್ರಧಾನಿಗಳನ್ನು ಭದ್ರತಾ ವೈಫಲ್ಯದಿಂದಾಗಿಯೇ ಕಳೆದುಕೊಂಡಿದೆ. ಖಲಿಸ್ತಾನದ ಉಗ್ರರ ಗುಂಡೇಟಿಗೆ ಇಂದಿರಾ ಗಾಂಧಿ ಬಲಿಯಾದರೆ, ಎಲ್‌ಟಿಟಿಇ ಉಗ್ರರು ಬಾಂಬ್ ಇಡುವ ಮೂಲಕ ರಾಜೀವ್ ಗಾಂಧಿಯನ್ನು ಬಲಿ ತೆಗೆದುಕೊಂಡಿದ್ದಾರೆ. ಅನೇಕ ಕಾರಣಗಳಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಂತಾರಾಷ್ಟ್ರೀಯ ಉಗ್ರರಿಂದ ಜೀವಬೆದರಿಕೆಯಿದೆ. ಹೀಗಿರುವಾಗ ಇಂತಹ ಪರಿಸ್ಥಿತಿ ಸಾಧುವಲ್ಲ. ಇದು ಮತ್ತೆಂದೂ, ಯಾವ ರಾಜ್ಯದಲ್ಲಿಯೂ ಮರುಕಳಿಸಬಾರದು. ಪ್ರಧಾನಿ ಇಡೀ ದೇಶಕ್ಕೆ ಪ್ರಧಾನಿಯೇ ಹೊರತು ಅವರು ಯಾವುದೇ ರಾಜಕೀಯ ಪಕ್ಷದ ಪ್ರಧಾನಿ ಯಲ್ಲ.
ಅವರು ರಾಜಕೀಯ ವಸ್ತುವೂ ಅಲ್ಲ. ಅವರನ್ನು ಗೌರವದಿಂದ ಮತ್ತು ಸುರಕ್ಷಿತವಾಗಿ ಕಾಣುವುದು ಒಕ್ಕೂಟ ವ್ಯವಸ್ಥೆಯಲ್ಲಿ ಒಳಗೊಂಡ ಪ್ರತಿಯೊಂದು ರಾಜ್ಯದಹೊಣೆಗಾರಿಕೆ. ಈ ಎಲ್ಲ ಅಂಶಗಳಲ್ಲಿ ಪಂಜಾಬ್ ಸರಕಾರ ವೈಫಲ್ಯವಾಗಿದೆ. ಈ ವೈಫಲ್ಯವನ್ನು ರಾಜಕೀಯಗೊಳಿಸುವ ಹುನ್ನಾರವೂ ನಡೆಯುತ್ತಿದೆ. ದೇಶದ ಪ್ರಧಾನಿಗೆ ಭದ್ರತಾ ವೈಫಲ್ಯ ಎದುರಾಗುವುದು ಬಹುದೊಡ್ಡ ತಪ್ಪು. ಇದನ್ನು ರಾಜಕೀಯಗೊಳಿಸಿ ಲಾಭ ಮಾಡಿಕೊಳ್ಳುವುದು ಮತ್ತು ಭದ್ರತಾ ವೈಫಲ್ಯಕ್ಕಿಂತಲೂ ಬಹುದೊಡ್ಡ ತಪ್ಪು. ಈ ಘಟನೆಯಿಂದ ಎಸ್‌ಪಿಜಿ ಭದ್ರತಾ ಕಾರ್ಯಗಳನ್ನು ಮತ್ತಷ್ಟು ಗಟ್ಟಿಗೊಳಿಸಲಿ, ಹಾಗೂ ಪ್ರತಿ ರಾಜ್ಯವೂ ಪ್ರಧಾನಿ ಸೇರಿದಂತೆ ಪ್ರಮುಖ ಗಣ್ಯರ ಭದ್ರತಾ ವಿಚಾರದಲ್ಲಿ ಗಂಭಿರತೆ ಮೆರೆಯಬೇಕು ಎಂಬುದು ದೇಶದ ಪ್ರತಿಯೊಬ್ಬ ನಾಗರೀಕನ ಒತ್ತಾಯ.