ಹೋರಾಟಕ್ಕೆ ಜನ ನೇತೃತ್ವ ವಹಿಸಲಿ
ಕರೋನಾದ ಮೂರನೇ ಅಲೆ ಈಗಾಗಲೇ ಪ್ರವೇಶವಾಗಿದ್ದು, ಸರಕಾರವು ವಾರಾಂತ್ಯ ಕರ್ಫ್ಯೂ ಸೇರಿದಂತೆ ಮತ್ತಿತರ ಸೂಕ್ತ ಕ್ರಮಗಳನ್ನು ಕೈಗೊಂಡಿದೆ. ಆದರೆಬಹುತೇಕರು ‘ಇನ್ನೂ ಲಾಕ್‌ಡೌನ್ ಜಾರಿಯಾಗಿಲ್ಲವಲ್ಲ’ ಎಂಬ ಉಡಾಫೆಯ ಮನಸ್ಥಿತಿಯಲ್ಲೇ ಇದ್ದಾರೆ.
ಕಿಕ್ಕಿರಿದು ತುಂಬಿರುವ ದೇವಸ್ಥಾನಗಳು, ಮಾರುಕಟ್ಟೆಗಳು, ಬಸ್ ನಿಲ್ದಾಣಗಳನ್ನು ನೋಡಿದರೆ ಜನರಿಗೆ ಭಯವೇ ಇಲ್ಲದಂತಿದೆ. ಸೋಂಕಿನ ಅಲೆ ಕಾಣಿಸಿ ಕೊಂಡಾಗಲೆಲ್ಲ ಲಾಕ್ ಡೌನ್ ಹೇರುವುದು ಅಥವಾ ಹೇರಬೇಕೆಂದು ಬಯಸುವುದು ವಿವೇಕದ ನಡೆಯಲ್ಲ. ಕಳೆದ ಎರಡು ವರ್ಷಗಳಲ್ಲಿ ಜಾರಿಗೊಂಡಿದ್ದ ಲಾಕ್‌ ಡೌನ್‌ಗಳಿಂದಾಗಿ ದೇಶದಲ್ಲಿ ಬಹುತೇಕ ಆರ್ಥಿಕ ಚಟುವಟಿಕೆಗಳು ನೆಲಕಚ್ಚಿದ್ದು, ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಆರ್ಥಿಕವಾಗಿ ಸಬಲ ರಾಗಿರುವವರಿಗೆ ಲಾಕ್ ಡೌನ್ ಪರಿಣಾಮ ಅಷ್ಟೇನೂ ಆಗಿರಲಿಕ್ಕಿಲ್ಲ, ಆದರೆ ಜನಸಾಮಾನ್ಯರ ಬದುಕು ಮಾತ್ರ ಬೀದಿಗೆ ಬಿದ್ದಿದ್ದು ನಿಜ.
ಅದರಲ್ಲೂ ಬೀದಿ ವ್ಯಾಪಾರಿಗಳ ಬದುಕು ಮೂರಾಬಟ್ಟೆಯಾಗಿದೆ. ಹೀಗಾಗಿ ಲಾಕ್‌ಡೌನ್ ಜಾರಿಯಾಗು ವವರೆಗೂ ಕಾದು ನಂತರ ಕರೋನಾ ಮಾರ್ಗಸೂಚಿ ಗಳನ್ನು ಪಾಲಿಸುವುದು ದಡ್ಡತನ. ಕರೋನಾ ಮಹಾ ಮಾರಿಯನ್ನು ಹೊಡೆದೋಡಿಸಲು ಪ್ರತಿಯೊಬ್ಬರೂ ಅಗತ್ಯವಾದ ಕ್ರಮಗಳನ್ನು ಪ್ರಾಮಾಣಿಕವಾಗಿ ಜಾರಿ ಗೊಳಿಸುವುದರ ಬಗ್ಗೆ ಪ್ರಯತ್ನಿಸಬೇಕು.
ಕೋವಿಡ್ ಹರಡದಂತೆ ಜನರೇ ಸ್ವಯಂ ನಿಯಂತ್ರಣ ಕ್ರಮಗಳನ್ನು ಅನುಸರಿಸಬೇಕು. ಲಸಿಕೆ ಬಗ್ಗೆ ತಪ್ಪು ತಿಳಿವಳಿಕೆಗಳನ್ನು ಮೂಡಿಸುವ ಪ್ರಯತ್ನಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿವೆ. ಲಸಿಕೆ ಪಡೆದುಕೊಂಡವರಲ್ಲಿ ಬಹುತೇಕರಿಗೆ ಹೃದಯಾಘಾತ ವಾಗಿದೆ ಎಂಬ ಪೋಸ್ಟ್‌ಗಳನ್ನು ಹಾಕುವ ಮೂಲಕ ಕೆಲವರು ಕರೋನಾ ವಿರುದ್ಧದ ಹೋರಾಟವನ್ನು ದುರ್ಬಲವಾಗಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಸಾರ್ವಜನಿಕರು ಅಂತಹ ಬೇಜವಾಬ್ದಾರಿ ಪೋಸ್ಟ್‌ಗಳಿಗೆ, ಹೇಳಿಕೆಗಳಿಗೆ ಕಿವಿಗೊಡಬಾರದು. ಲಸಿಕೆ ಕುರಿತು ಜನರಲ್ಲಿ ಧೈರ್ಯ, ಭರವಸೆ ತುಂಬಲುಜವಾಬ್ದಾರಿಯುತ ನಾಗರಿಕರೆಲ್ಲರೂ ಪ್ರಯತ್ನಿಸಬೇಕು. ರಾಜ್ಯದಲ್ಲಿ15ರಿಂದ18ವರ್ಷದ ವಯೋಮಿತಿಯ ಮಕ್ಕಳಿಗೆ ಲಸಿಕೆ ನೀಡುವ ಅಭಿಯಾನ ಆರಂಭ ವಾಗಿದ್ದು, ಇದಕ್ಕೆ ಪ್ರತಿಯೊಬ್ಬರೂ ಕೈಜೋಡಿಸುವ ಮೂಲಕ ಯುವಪೀಳಿಗೆ ರಕ್ಷಣೆಗೆ ಬದ್ಧರಾಗಬೇಕು. ಕರೋನಾ ವಿರುದ್ಧದ ಹೋರಾಟದ ನೇತೃತ್ವವನ್ನು ಜನರೇ ವಹಿಸಿಕೊಳ್ಳದಿದ್ದರೆ, ಎರಡನೇ ಅಲೆಯಲ್ಲಿ ಆದ ಸ್ಥಿತಿ ಮತ್ತೇ ಬಂದೀತು..!