ರಾಜಕಾರಣಿಗಳಿಗೂ ಜವಾಬ್ದಾರಿಯಿರಲಿ
ರಾಜ್ಯದಲ್ಲಿ ಮತ್ತೆ ಕರೋನಾ ಸೋಂಕು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಇದನ್ನು ನಿಯಂತ್ರಿಸುವ ಸಲುವಾಗಿ ರಾಜ್ಯ ಸರಕಾರ, ‘ಕಠಿಣ ವೀಕೆಂಡ್ ಕರ್ಫ್ಯೂ’ ವಿಧಿಸಿದೆ.
ಆದರೆ ಈ ಕರ್ಫ್ಯೂ ಕೇವಲ ಜನ ಸಾಮಾನ್ಯರಿಗೆ, ದುಡಿದು ತಿನ್ನುವವರಿಗೆ ಮಾತ್ರವೇ ಎನ್ನುವ ಅನುಮಾನಗಳು, ಸರಕಾರದನಡೆ ನೋಡಿದರೆ ಅನಿಸು ತ್ತದೆ. ಕಾಂಗ್ರೆಸ್ ಮೇಕೆದಾಟು ಯೋಜನೆಗೆ ಆಗ್ರಹಿಸಿ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ. ಆರಂಭದಲ್ಲಿ ಈ ಪಾದಯಾತ್ರೆಯನ್ನು ನಡೆಯಲು ಬಿಡುವುದಿಲ್ಲ ಎನ್ನುತ್ತಿದ್ದ ಮುಖ್ಯಮಂತ್ರಿ ಗಳು ಹಾಗೂ ಸಚಿವರು, ಇದೀಗ ಕಾನೂನು ಕ್ರಮ ತಗೆದುಕೊಳ್ಳುತ್ತೇವೆ ಎನ್ನುವ ಮೂಲಕ ಪರೋಕ್ಷವಾಗಿ ಪಾದಯಾತ್ರೆಗೆ ದಾರಿ ಮಾಡಿ ಕೊಡುತ್ತಿದ್ದಾರೆ.
ಕಾಂಗ್ರೆಸ್ ನಾಯಕರು ಆರಂಭದಲ್ಲಿ ಕರೋನಾ ಮಾರ್ಗಸೂಚಿ ಪಾಲಿಸಿಕೊಂಡೇ ಪಾದಯಾತ್ರೆ ಮಾಡುತ್ತೇವೆ ಎಂದಿದ್ದರು. ಆದರೆ ಭಾನುವಾರದ ಪಾದಯಾತ್ರೆಯ ದೃಶ್ಯವನ್ನು ನೋಡಿದರೆ, ಕರೋನಾ ಮಾರ್ಗಸೂಚಿ ಎಳ್ಳಷ್ಟು ಪಾಲನೆಯಾಗಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ರಾಜ್ಯದ ಜನರಿಗೆ ಮಾದರಿಯಾಗಿ ನಿಲ್ಲಬೇಕಾದ ಜನಪ್ರತಿನಿಧಿ ಗಳು, ರಾಜಕೀಯ ಮುಖಂಡರು ತಮ್ಮ ರಾಜಕೀಯ ಲೆಕ್ಕಾಚಾರ ಗಳಿಗೆ ನೋಡಿಕೊಂಡು ತಮಗೆ ಬೇಕಾದ ರೀತಿಯಲ್ಲಿ ಕರೋನಾ ಮಾರ್ಗಸೂಚಿಯನ್ನು ವ್ಯಾಖ್ಯಾನಿಸುತ್ತಿದ್ದಾರೆ.
ರಾಜಕಾರಣಿಗಳು ಗುಂಪು ಕಟ್ಟಿಕೊಂಡು ಪಾದಯಾತ್ರೆ ಮಾಡಿದರೆ ಸುಮ್ಮನೆ ಕೂರುವ ಪೊಲೀಸರು ಜನಸಾಮಾನ್ಯರು ತುರ್ತು ಪರಿಸ್ಥಿತಿ ಎಂದು ಹೊರ ಬಂದರೂ, ದಂಡ ವಿಧಿಸುವ ಅಥವಾ ಲಾಠಿ ರುಚಿ ತೋರಿಸುತ್ತಾರೆ. ಆದ್ದರಿಂದ ಈ ಇಬ್ಬಗೆ ನೀತಿಯನ್ನು ಕೈಬಿಡಬೇಕು ಹಾಗೂ ರಾಜಕಾರಣಿಗಳು ಸಹ ತಮ್ಮಜವಾಬ್ದಾರಿಯನ್ನು ಅರಿತು ಕರೋನಾ ಕಾಲದಲ್ಲಿ ವ್ಯವಹರಿಸಬೇಕಿದೆ.