ಕನ್ನಡ ನಿಷ್ಠ, ಸತ್ಯ ನಿಷ್ಠುರ ವ್ಯಕ್ತಿತ್ವದ ಚಂಪಾ
ಚಂಪಾ ಎನ್ನುವ ಹೆಸರಿನಿಂದ ಕನ್ನಡಿಗರಿಗೆ ಚಿರ ಪರಿಚಿತ ಕನ್ನಡದ ಹಿರಿಯ ಕವಿ, ನಾಟಕಕಾರ ಪ್ರೊ. ಚಂದ್ರಶೇಖರ ಪಾಟೀಲರು ಇನ್ನಿಲ್ಲವಾಗಿರುವುದು ನಿಜಕ್ಕೂ ಕನ್ನಡ ಚಳವಳಿಗೆ ಆದ ಬಹುದೊಡ್ಡ ನಷ್ಟ.
ಅಧ್ಯಾಪಕ, ಕವಿ, ನಾಟಕಕಾರ, ಸಂಪಾದಕ, ಸಂಘಟಕ, ವಿಚಾರವಾದಿ, ವಿಡಂಬನಕಾರ- ಹೀಗೆ ಹಲವು ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ್ದ ಚಂಪಾ ಎಲ್ಲಕ್ಕಿಂತ ಹೆಚಾಗಿ ಕನ್ನಡದ ಆರಂಭಿಕ ಹೋರಾಟಗಾರ. ಇಂಗ್ಲಿಷ್ ಮಾಸ್ತರರಾಗಿದ್ದ ಚಂಪಾ ಅವರ ಕನ್ನಡ ಪ್ರೇಮ ಅನುಕರಣೀಯ. ಯಾವುದೇ ವೇದಿಕೆಯಲ್ಲಿ ನಿಂತು ನಿರರ್ಗಳವಾಗಿ, ಶುದ್ಧ, ವ್ಯಾಕರಣ ಬದ್ಧ ಇಂಗ್ಲಿಷ್‌ನಲ್ಲಿ ಮತಾಡಬಲ್ಲವರಾಗಿದ್ದ ಚಂಪಾ, ಜೀವಮಾನದುದ್ದಕ್ಕೂ ಮಿಡಿದುದ್ದು, ದುಡಿದದ್ದು ಮಾತ್ರ ಕನ್ನಡಕ್ಕಾಗಿ. ಹೇಗೇ ನೋಡಿದರೂ ಅವರೊಬ್ಬ ಕನ್ನಡ ಪರ ಬಂಡಾಯಗಾರ.
ಕನ್ನಡ ಚಳವಳಿಗೂ ಬಂಡಾಯ ಸಂಘಟನೆಗೂ ಭಿನ್ನಾಭಿಪ್ರಾಯ ಸೃಷ್ಟಿಯಾದಾಗಲೂ, ಬಂಡಾಯ ಅಥವಾ ಕನ್ನಡ ಹೋರಾಟ ಎಂಬೆರಡು ಆಯ್ಕೆ ಎದುರಾದಾಗ ಕನ್ನಡವನ್ನೇ ಆಯ್ಕೆ ಮಾಡಿಕೊಂಡವರು. ‘ಕನ್ನಡವೇ ನನ್ನ ಅಸ್ಮಿತೆ ಹಾಗೂ ಜೀವನ ಇಂಗ್ಲಿಷ್ ನನ್ನ ಉಪಜೀವನ. ಕನ್ನಡ ನನ್ನ ಜೀವನ’ ಎಂದಿದ್ದ ಪಾಟೀಲರು, ಕನ್ನಡ ಚಳವಳಿ ಎಂಬುದು ಈ ನೆಲದಲ್ಲಿ ನಿರಂತರ ಜಾಗೃತಿಯ ಪ್ರಕ್ರಿಯೆಯಾಗಿ ಉಳಿಯಬೇಕೆಂದು ಪ್ರತಿಪಾದಿಸಿದ್ದ ವರು. ಗೋಕಾಕ್ ಚಳವಳಿಯ ಕಾಲದಲ್ಲಿ ಅವರು ಟಂಕಿಸಿದ ‘ಕನ್ನಡ ಕನ್ನಡ; ಬರ್ರ‍ಿ ನಮ್ಮ ಸಂಗಡ’, ’ನಾವು ಹೊರಟೆವು ಜೈಲಿಗೆ ಕನ್ನಡ ತಾಯಿಯ ಸೇವೆಗೆ’ ಘೋಷಿಸಿ, ಹೋರಾಟ ಕಿಡಿ ಹೊತ್ತಿಸಿದ್ದರು.
ಶಾಲೆಗಳಲ್ಲಿ ಭಾಷೆ ಕಲಿಕೆ ಕುರಿತು ಜನಾಭಿಪ್ರಾಯ ಸಂಗ್ರಹಿಸಲು ಗೋಕಾಕರು ಮುಂದಾದಾಗಲೂ ‘ಧಿಕ್ಕಾರ’ ಕೂಗಿದ್ದ ಧೀರ. ಭಾಷಾ ಸೂತ್ರ ಅನುಷ್ಠಾನಕ್ಕಾಗಿ ‘ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾ ಸಮಿತಿ’ ಸಂಘಟಿಸಿದ್ದವರು. ಇದೇ ಮುಂದೆ ಗೋಕಾಕ್ ಚಳವಳಿ ಯಾಗಿ ಡಾ.ರಾಜ್‌ಕುಮಾರ ಸೇರಿದಂತೆ ಗಣ್ಯರು ರಾಜ್ಯದ ಮೂಲೆ ಮೂಲೆ ಸುತ್ತಿ ಯಶಸ್ವಿಯಾದದ್ದು ಮರೆಯಲುಂಟೆ? ಹೇಗೇ ನೋಡಿದರೂ ‘ಕನ್ನಡ- ಕನ್ನಡಿಗ- ಕರ್ನಾಟಕ’ಗಳ ವಿಪರೀತ ವ್ಯಾಮೋಹಿ ಯಾಗಿದ್ದವರು ಚಂಪಾ.
ಮನದಲ್ಲಿ ಮೂಡಿದ್ದನ್ನು ಸ್ವಲ್ಪವೂ ಸೆನ್ಸಾರ್ ಇಲ್ಲದೇ ಎಂಥವರ ಮುಖದ ಮೇಲಾದರೂ ಹೇಳಿ ದಕ್ಕಿಸಿಕೊಳ್ಳುತ್ತಿದ್ದ ಚಂಪಾ ಎಂಬ ವ್ಯಕ್ತಿಯ ಒಳಗೊಂದು ಅಸೀಮ ಪ್ರೀತಿ ಇತ್ತು ಎಂಬದು ಒಪ್ಪಲೇಬೇಕಾದ ಸತ್ಯ. ಇಂಥ ಕನಡದ ಸ್ವಾಭಿಮಾನಿಗೆ ನಮೋ.