ಶ್ರೀಗಳು ಗುಣಮುಖರಾಗಲಿ
ಆಯತಪ್ಪಿ ಬಿದ್ದು ಗಾಯಗೊಂಡು ಚಿಕಿತ್ಸೆಗೆ ಒಳಪಟ್ಟಿರುವ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಯವರು ಶೀಘ್ರ ಚೇತರಿಸಿಕೊಳ್ಳಲೆಂದು ಮುಖ್ಯಮಂತ್ರಿಯಾದಿಯಾಗಿ ಇಡೀ ರಾಜ್ಯದ ಪರವಾಗಿ ಹಾರೈಕೆಗಳು ಹರಿದುಬರುತ್ತಿವೆ.
ರಾಜಕಾರಣಿಗಳು, ಚಿತ್ರನಟರುಗಳ ವಿಚಾರದಲ್ಲಿ ಅಭಿಮಾನಿಗಳಿಂದ ಇಂಥ ನಡೆ ನಿರೀಕ್ಷಿತ. ಆದರೆ, ಸಾಮಾನ್ಯ ರಲ್ಲಿ ಸಾಮಾನ್ಯರಾಗಿ ಬದುಕುತ್ತಿರುವ ಸ್ವಾಮೀಜಿ ಯೊಬ್ಬರ ಮೇಲಿನ ಅಭಿಮಾನ ಅವರ ವ್ಯಕ್ತಿತ್ವದಲ್ಲಿನ ಅಂತಃಸತ್ವಕ್ಕೆ ಸಾಕ್ಷಿ. ಚಿಕ್ಕೋಡಿ ತಾಲ್ಲೂಕಿನ ಬಸವನಾಳಗಡ್ಡೆಯಲ್ಲಿರುವ ಭಕ್ತರಾದ ಮಗದುಮ್ ಅವರ ತೋಟದ ಮನೆಯಲ್ಲಿ ಸೋಮವಾರ ಆಕಸ್ಮಿಕವಾಗಿ ಬಿದ್ದು ಶ್ರೀಗಳು ಗಾಯಗೊಂಡಿದ್ದರು. ಅವರಿಗೆ ನೆರೆಯ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿರುವ ಕನ್ಹೇರಿ ಮಠದ ಸಿದ್ಧಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಸಣ್ಣ ಪ್ರಮಾಣದ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ, ಶ್ರೀಗಳು ಅದಕ್ಕೆ ಸಮ್ಮತಿಸಿಲ್ಲ. ಲವಲವಿಕೆಯಿಂದ ಇದ್ದೇನೆ; ಶಸ್ತ್ರಚಿಕಿತ್ಸೆ ಮಾಡದೆಯೂ ಗುಣಪಡಿಸುವ ಮಾರ್ಗ ತಿಳಿಸುವಂತೆ ವೈದ್ಯರಿಗೆ ತಿಳಿಸಿದ್ದಾರೆ, ವೈದ್ಯರು ಅವರ ಮನವೊಲಿಕೆಗೆ ಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಎಲ್ಲ ಲೌಕಿಕ ಸುಖಗಳನ್ನೂ ತೊರೆದು, ತಮ್ಮ ದೇಹದ ಬಗ್ಗೆ ಕನಿಷ್ಠ ಕಾಳಜಿ ಮಾಡುವ ನಿಸ್ವಾರ್ಥ, ಅತ್ಯಂತ ಸರಳ ಜೀವನದ ಮೂಲಕ ಆದರ್ಶಮಯ ಬದುಕು ಬದುಕುತ್ತಿರುವ ಶ್ರೀಗಳಿಂದ ಇಂಥ ಪ್ರತಿಕ್ರಿಯೆ ನಿರೀಕ್ಷಿತ.
ಆದರೆ, ಅವರ ದೇಹಾರೋಗ್ಯ ಹಾಗೂ ದೀರ್ಘಾಯುಷ್ಯ ಈ ಸಮಾಜಕ್ಕೆ, ಕನ್ನಡಿಗರಿಗೆ ಅನವರತ ಬೇಕು. ಹೀಗಾಗಿ ಚಿಕಿತ್ಸೆಯ ವಿಚಾರದಲ್ಲಿ ಹಠಯೋಗಿಗಳಾದ ಅವರು ಇಂಥ ನಿಲುವು ಖಂಡಿತಾ ತಾಳಬಾರದು. ಶ್ರೀಗಳು ಗಾಯ ಗೊಂಡಿರುವ ಸುದ್ದಿ ತಿಳಿದೇ ಭಕ್ತ ಸಮೂಹ ಆಘಾತ ಮತ್ತು ಆತಂಕಕ್ಕೆ ಒಳಗಾಗಿದೆ. ಶೀಘ್ರ ವಾಗಿ ಗುಣಮುಖರಾಗಲೆಂದು ಎಲ್ಲರೂ ಪ್ರಾರ್ಥನೆ ಮೊರೆಹೋಗಿ ದ್ದಾರೆ. ಅವರ ಮಾರ್ಗದರ್ಶನ, ಸುಬೋಧೆಯ ಅಗತ್ಯ ಹಿಂದೆಂದಿಗಿಂತಲೂ ಈಗಿನ ಸನ್ನಿವೇಶ ದಲ್ಲಿ ಸಮಾಜಕ್ಕೆ ಹೆಚ್ಚಿದೆ. ಅಧ್ಯಾತ್ಮಿಕ ಕ್ಷೇತ್ರದಲ್ಲಿ ಸಿದ್ದೇಶ್ವರ ಶ್ರೀಗಂಥವರು ಅತಿ ವಿರಳ. ಈ ಹಿಂದೆ೨ಬಾರಿ ಪೆಟ್ಟು ಬಿದ್ದು ಮೂಳೆ ಮುರಿದಾಗಲೂ ಅಲೋಪಥಿ ಔಷಧಗಳಿಂದ ದೂರವಿದ್ದರು.
‘ಶರೀರದಲ್ಲಿ ತಪ್ಪುಗಳಾದರೆ ಅದನ್ನು ಸರಿಪಡಿಸುವ ಶಕ್ತಿ, ಸಾಮರ್ಥ್ಯ ಸ್ವತಃ ಶರೀರಕ್ಕೆ ಇದೆ’ ಎಂಬ ಅವರ ನಂಬುಗೆ ಸಹಜ. ಅವರಂಥವರಿಗೆ ಇಂಥ ಶಕ್ತಿಇರುವುದು ಸತ್ಯವೂ ಹೌದು. ಆದರೆ ಕಾಲ, ಸನ್ನಿವೇಶಗಳು ಭಿನ್ನ. ಹೀಗಾಗಿ ದಯಮಾಡಿ ಶ್ರೀಗಳು ಭಕ್ತಕೋಟಿಯ ಪ್ರೀತಿಯ ಹಕ್ಕೊತ್ತಾಯಕ್ಕೆ ಮಣಿದುಚಿಕಿತ್ಸೆಗೆ ಸಹಕರಿಸಬೇಕಿದೆ. ಆದಷ್ಟು ಶೀಘ್ರ ಗುಣಮುಖರಾಗಿ ಮತ್ತೆ ನಿತ್ಯ ಜ್ಞಾನದಾಸೋಹಕ್ಕೆ ಮರಳಿ ಭಕ್ತರ ಭರವಸೆ ಹೆಚ್ಚಿಸಬೇಕಿದೆ.