ನ್ಯಾಯಾಲಯಕ್ಕೆ ಗೌರವ ಕೊಡಿ
ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆಯ ಬಗ್ಗೆ ಹೈಕೋರ್ಟ್ ಬುಧವಾರ ಆಕ್ಷೇಪ ವ್ಯಕ್ತಪಡಿಸಿದೆ. ಕೋವಿಡ್ ಸಂದರ್ಭದಲ್ಲಿಪಾದಯಾತ್ರೆ ಅಗತ್ಯವಿತ್ತೇ ಎಂದು ಪ್ರಶ್ನಿಸಿದೆ.
ಕಾಂಗ್ರೆಸ್ ನಾಯಕರು ಕೋವಿಡ್ ನಿಯಮಗಳನ್ನೂ ಗಾಳಿಗೆ ತೂರಿ, ಪಾದಯಾತ್ರೆ ಮುಂದುವರಿಸಿದ್ದಾರೆ. ಇದೀಗ ನ್ಯಾಯಾಲಯಕ್ಕಾದರೂ ಬೆಲೆ ಕೊಟ್ಟು ಪಾದಯಾತ್ರೆ ವಾಪಸ್ ಪಡೆಯಬೇಕಿದೆ. ಹೋರಾಟ, ಪ್ರತಿಭಟನೆ, ಪಾದಯಾತ್ರೆಗಳು ಪ್ರಜಾಪ್ರಭುತ್ವದ ಸೌಂದರ್ಯ. ಹಾಗಂತ ಸಾಮಾಜಿಕ ಆರೋಗ್ಯ ಕಡೆಗಣಿಸಿ, ಅದನ್ನು ಮಾಡುವುದು ಅಪರಾಧವಾಗುತ್ತದೆ. ಪಾದಯಾತ್ರೆಯಲ್ಲಿ ಭಾಗವಹಿಸಿದ ಅನೇಕ ನಾಯಕರಿಗೆ ಸೋಂಕು ತಗುಲುತ್ತಿದೆ. ಹೋರಾಟದ ಹೆಸರಿನಲ್ಲಿ ಅಮಾಯಕರ ಪ್ರಾಣಕ್ಕೆ ಸಂಚಕಾರ ಬಂದರೆ ಅದರ ಹೊಣೆಯನ್ನು ಕಾಂಗ್ರೆಸ್ ನಾಯಕರು ಹೊರುತ್ತಾರೆಯೇ? ಮುಖ್ಯಮಂತ್ರಿಯಾಗಿ ಅಪಾರ ಅನುಭವವುಳ್ಳ ಸಿದ್ದರಾಮಯ್ಯ ತಮ್ಮ ಪಕ್ಷದ ಕಾರ್ಯಕರ್ತರಿಗೆ, ಮುಖಂಡರಿಗೆ ಬುದ್ಧಿ ಹೇಳಬೇಕಿದೆ.
ಪಾದಯಾತ್ರೆ ಪ್ರತಿಷ್ಠೆಯಾಗಿಸದೆ ಇದ್ದರೆ ಇಡೀ ರಾಜ್ಯಕ್ಕೇ ಹಿತ ಎಂಬುದನ್ನು ಮನವರಿಕೆ ಮಾಡಿಕೊಡಬೇಕಿದೆ. ಅಷ್ಟಕ್ಕೂ ಯೋಜನೆ ಜಾರಿಗೆ ಸರಕಾರ ಬದ್ಧ ವಾಗಿದೆ ಎಂದು ಸ್ಪಷ್ಟನೆ ನೀಡಿದರೂ ಯಾರ ವಿರುದ್ಧ ಈ ಪಾದ ಯಾತ್ರೆ ಎಂಬುದೇ ಗೊತ್ತಾಗುತ್ತಿಲ್ಲ. ಯೋಜನೆ ಕುರಿತು ಚೆನ್ನೈನ ಹಸಿರುಪೀಠದಲ್ಲಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸುವಲ್ಲಿ ಬಿಜೆಪಿ ಸರಕಾರ ಯಶಸ್ವಿಯಾಗಿದೆ.
ಆದರೆ ತಮಿಳುನಾಡು ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆ ಬಾಕಿ ಇದೆ. ಇದರ ವಿಲೇವಾರಿ ಆಗದೇ ಯೋಜನೆ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ಈ ರೀತಿ ಇರುವಾಗ ಪಾದಯಾತ್ರೆ ಎಷ್ಟರ ಮಟ್ಟಿಗೆ ಸರಿ? ಎಂಬುದನ್ನು ಕಾಂಗ್ರೆಸ್ ನಾಯಕರು ಚಿಂತಿಸಬೇಕಿದೆ.
ಕಾನೂನು ಬಲ್ಲವರಿಂದಲೇ ಕಾನೂನು ಉಲ್ಲಂಘನೆಯಾದರೆ ಹೇಗೆ ಎಂದು ಜನರು ಪ್ರಶ್ನಿಸುವಂತಾಗುತ್ತದೆ. ಸರಕಾರ ಕೂಡ ಪಾದಯಾತ್ರೆ ಮೇಲೆ ನಿರ್ಬಂಧ ವಿಽಸಲು ಮೀನಾಮೇಷ ಎಣಿಸುತ್ತಿರುವುದು ಸರಿಯಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ಕೆಲವು ಸಂದರ್ಭಗಳಲ್ಲಿ ಸರಕಾರ ಕಠಿಣವಾಗಿ ವರ್ತಿಸಬೇಕು. ಆ ಮೂಲಕ ಜನಪರ ಸರಕಾರ ಎಂಬುದನ್ನು ಸಾಬೀತುಪಡಿಸಬೇಕು. ಇಲ್ಲವಾದಲ್ಲಿ ಸರಕಾರಕ್ಕೇ ಕೆಟ್ಟ ಹೆಸರು.