ಶೋಷಣೆಯ ಒಪ್ಪಲು ಮನಸ್ಸಿಲ್ಲವೇ?
ಇತ್ತೀಚೆಗೆ ಅತಿಥಿ ಉಪನ್ಯಾಸಕರು ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೋಲಾರದಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದಾಗ ‘ಶೋಷಣೆ’ ಎಂಬ ಪದ ಬಳಸಿದ್ದಕ್ಕೆ ಬಿ.ಸಿ.ನಾಗೇಶ್ ಅವರು ಸಿಟ್ಟಾಗಿ, ಅತಿಥಿ ಉಪನ್ಯಾಸಕರ ಮೇಲೆಹರಿಹಾಯ್ದಿದ್ದಾರೆ ಎಂಬ ಬಗ್ಗೆ ವರದಿಯಾಗಿದೆ.
ಸಮಾನ ಕೆಲಸಕ್ಕೆ ಸಮಾನ ವೇತನ ನೀಡದಿದ್ದರೆ, ಐದಾರು ತಿಂಗಳಿಗೊಮ್ಮೆ ವೇತನ ನೀಡುತ್ತಿದ್ದರೆ, ಅದನ್ನು ‘ಶೋಷಣೆ’ ಎನ್ನದೆ ಇನ್ನೇನಂತ ಕರೆಯಬೇಕು. ಅದಕ್ಕೆ ಮತ್ಯಾವ ಪದ ಬಳಸಬೇಕು ಎಂಬುದನ್ನು ಅವರೇ ಹೇಳಬೇಕು. ‘ನಾವು ನಿಮ್ಮ ಬಾಗಿಲಿಗೆ ಬಂದು ಬಲವಂತವಾಗಿ ಈ ಕೆಲಸ ಮಾಡಿ ಎಂದು ಕೇಳಿದ್ದಾವಾ?’ ಎಂದೂ ಅವರು ಕೇಳಿದ್ದಾರೆ. ಆದರೆ ಪ್ರತಿವರ್ಷ ಕಾಲೇಜು ಶಿಕ್ಷಣ ಇಲಾಖೆಯು ಅತಿಥಿ ಉಪನ್ಯಾಸಕ ಹುದ್ದೆಗೆ ಅರ್ಜಿ ಆಹ್ವಾನಿಸುತ್ತದೆ, ಅರ್ಹತೆಯ ಆಧಾರದ ಮೇಲೆ ನೇಮಕ ಮಾಡಿಕೊಳ್ಳುತ್ತದೆ. ಅವಶ್ಯಕತೆ ಇದ್ದರೆ ಮಾತ್ರ ಅತಿಥಿ ಉಪನ್ಯಾಸಕರನ್ನು ನೇಮಿಸಿ ಕೊಳ್ಳುತ್ತದೆ. ಹಾಗೆ ನೇಮಕವಾಗಿ ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ.
ಹಾಗಿದ್ದ ಮೇಲೆ ಸರಕಾರ ಕರೆದಾಗ ತಾನೇ ಅತಿಥಿ ಉಪನ್ಯಾಸಕರು ಸೇವೆಗೆ ಹಾಜ ರಾಗುವುದು? ಸರಕಾರ ನೀಡುವ ಅಲ್ಪ ಸಂಬಳವನ್ನು ನಂಬಿಕೊಂಡು ಹಲವಾರು ಅತಿಥಿ ಉಪನ್ಯಾಸಕರು ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಬೇರೆ ಬೇರೆ ರಾಜ್ಯಗಳಲ್ಲಿ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಲಾಗಿದೆ. ಅದನ್ನು ಕೇಳುವುದರಲ್ಲಿ ತಪ್ಪೇನಿದೆ? ಎನ್ ಇಟಿ, ಕೆಸೆಟ್ ಪರೀಕ್ಷೆ ಗಳನ್ನು ಪಾಸು ಮಾಡಿ, ಪಿಎಚ್‌ಡಿಯಂತಹ ಅತ್ಯುನ್ನತ ವ್ಯಾಸಂಗ ಮಾಡಿ, ಸರಕಾರ ಆಗೊಮ್ಮೆ ಈಗೊಮ್ಮೆ ಕೊಡುವ ಹತ್ತು ಹದಿನೈದು ಸಾವಿರಕ್ಕೆ ಕೆಲಸ ಮಾಡುವುದು ಶೋಷಣೆಯಲ್ಲದೆ ಮತ್ತೇನೂ ಅಲ್ಲ.
ಸಚಿವರು ಆ ಉಪನ್ಯಾಸಕರ ಸ್ಥಾನದಲ್ಲಿ ನಿಂತು ನೋಡಿದ್ದರೆ ಅವರ ಪರಿಸ್ಥಿತಿ ಅರ್ಥವಾಗುತ್ತಿತ್ತು. ಆದರೆ ಈಗ ಅವರು ಗೂಟದ ಕಾರಿನಲ್ಲಿ ಓಡಾಡುತ್ತಿ ರುವುದರಿಂದ ಶೋಷಣೆಗೆ ಒಳಗಾದವರ ಧ್ವನಿ ಕೇಳಿಸಿಕೊಳ್ಳುವ ವ್ಯವಧಾನ ಇಲ್ಲವೆನಿಸುತ್ತದೆ. ಸಚಿವ ನಾಗೇಶ್ ಅವರು ಖಾಸಗಿ ಕಾಲೇಜುಗಳಲ್ಲಿ ಉಪನ್ಯಾಸಕರಿಗೆ ಎಷ್ಟು ಸಂಬಳ ಕೊಡಲಾಗುತ್ತಿದೆ, ಸರಕಾರಿ ಕಾಲೇಜುಗಳಲ್ಲಿ ಯಾವ ಪರಿಸ್ಥಿತಿ ಇದೆ ಎಂಬು ದನ್ನು ನೋಡಬೇಕು. ಅತಿಥಿ ಉಪನ್ಯಾಸಕರ ಪರಿಸ್ಥಿತಿ ಹೀಗೇ ಮುಂದುವರಿದರೆ ಉನ್ನತ ಶಿಕ್ಷಣ ಕಲಿಯಲು ವಿವಿಯ ಮೆಟ್ಟಿಲು ಹತ್ತಲೂ ವಿದ್ಯಾರ್ಥಿಗಳು ಹಿಂದೇಟು ಹಾಕುವ ಸಾಧ್ಯತೆ ಇದೆ.