ಗಾನ ಕೋಗಿಲೆ ಗುಣಮುಖರಾಗಲಿ
ಗಾನ ಕೋಗಿಲೆ, ಜನಪ್ರಿಯ ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಅವರು ಆಸ್ಪತ್ರೆಗೆ ದಾಖಲಾಗಿ ಒಂದು ವಾರದ ಮೇಲಾಗಿದೆ. ನ್ಯೂಮೋನಿಯಾದಿಂದ ಬಳಲುತ್ತಿದ್ದ ಅವರಿಗೆ ಕರೋನಾ ಪಾಸಿಟಿವ್ ಬಂದಿದ್ದು, ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಅವರ ಆರೋಗ್ಯದಲ್ಲೂ ಚೇತರಿಕೆ ಕಂಡು ಬರುತ್ತಿದೆ ಎಂದು ವೈದ್ಯರು ಹೇಳಿದ್ದು ಸಮಾಧಾನಕರ. ಲತಾ ಮಂಗೇಶ್ಕರ್ ಅವರ ಬಗ್ಗೆ ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳು ಹರಡು ತ್ತಿರುವುದು ಸರಿಯಲ್ಲ. ಮೃತರ ಆತ್ಮಕ್ಕೆ ಶಾಂತಿ ಕೋರುವುದು ಮಾನವಿಯತೆ ನೆಲೆಗಟ್ಟಿನಲ್ಲಿ ಸರಿಯಾದರೂ, ಬದುಕಿದ್ದವರಿಗೂ ಶಾಂತಿ ಕೋರುವುದು ಸರಿಯಲ್ಲ. ಭಾರತೀಯ ಚಿತ್ರರಂಗದ ಅತ್ಯಂತ ಜನಪ್ರಿಯ ಗಾಯಕಿ ಆಗಿರುವ ಲತಾ ಮಂಗೇಶ್ಕರ್ ಅವರು ಸಾವಿರಕ್ಕೂ ಅಧಿಕ ಹಿಂದಿ ಸಿನಿಮಾಗಳಲ್ಲಿ ಹಾಡುವ ಮೂಲಕ ಭಾರತಕ್ಕೇ ದೊಡ್ಡ ಆಸ್ತಿಯಾಗಿದ್ದಾರೆ. ಹಿಂದಿ, ಮರಾಠಿ ಸೇರಿದಂತೆ 36ಕ್ಕೂಅಧಿಕಭಾಷೆಗಳಲ್ಲೂ ಗಾನಸುಧೆ ಹರಿಸಿದ್ದಾರೆ.
1942 ಇಸವಿಯಿಂದ ಸಿನಿಮಾದ ಹಾಡುಗಳಿಗೆ ಲತಾ ಮಂಗೇಶ್ಕರ್ ದನಿಯಾಗುತ್ತಾ ಬಂದಿದ್ದಾರೆ. ಸಿನಿಮಾ ಸಂಗೀತ ಕ್ಷೇತ್ರದಲ್ಲಿ ಅವರು ನೀಡಿರುವ ಅಪಾರ ಕೊಡುಗೆಗಾಗಿ 1989ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಹಾಗೂ ಭಾರತ ರತ್ನ ಪ್ರಶಸ್ತಿ ನೀಡಲಾಗಿದೆ. ಮೂರು ಬಾರಿ ರಾಷ್ಟ್ರೀಯ ಪ್ರಶಸ್ತಿ, ನಾಲ್ಕು ಬಾರಿ ಫಿಲ್ಮ್ ಫೇರ್ ಪ್ರಶಸ್ತಿ, ಎರಡು ಬಾರಿ ಫಿಲ್ಮ್ ಫೇರ್ ಸ್ಪೆಷಲ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಲತಾ ಮಂಗೇಶ್ಕರ್ ಪಡೆದಿದ್ದಾರೆ.
ತಮ್ಮ ವೃತ್ತಿಜೀವನದಲ್ಲಿ ನೂರಾರು ಹಿಟ್ ಗೀತೆಗಳನ್ನು ನೀಡಿರುವ ಲತಾ ಮಂಗೇಶ್ಕರ್ ಅವರು ಕನ್ನಡದಲ್ಲಿ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಚಿತ್ರದ ಬೆಳ್ಳನೆ ಬೆಳಗಾಯಿತು..’ ಹಾಡಿಗೂ ದನಿಯಾಗಿದ್ದಾರೆ. ಇದೀಗ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದೆ ಎಂದು ವೈದ್ಯರು ಹೇಳಿದ್ದು, ಕೋಟ್ಯಂತರ ಭಾರತೀ ಯರಿಗೆ ಸಮಾಧಾನ ತಂದಿದೆ. ಅವರು ಶೀಘ್ರ ಗುಣಮುಖರಾಗಿ ಮನೆಗೆ ಮರಳಲಿ. ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳು ಹಬ್ಬಿಸುವುದನ್ನು ನಿಲ್ಲಿಸಲಿ.