ಕರೋನಾ ಸಂಕೀರ್ಣ ಸಮಯದಲ್ಲಿ ಪ್ರತಿಭಟನೆಗಳ ಅಬ್ಬರವೇಕೆ ?
ರಾಜ್ಯ ಸರಕಾರ ವಾರಾಂತ್ಯ ಕರ್ಫ್ಯೂ ತೆಗೆದು ಹಾಕುವಾಗ, ಪ್ರತಿಭಟನೆ, ಮೆರವಣಿಗೆಯಂತಹ ಗುಂಪುಗೂಡುವ ಕಾರ್ಯಕ್ರಮಗಳನ್ನು ಮಾಡಬಾರದೆಂದು ಮನವಿ ಮಾಡಿತ್ತು. ಆದರೆ ನಿತ್ಯವೂ ರಾಜ್ಯದಲ್ಲಿ ಪ್ರತಿಭಟನೆಗಳು ನಿಲ್ಲುತ್ತಿಲ್ಲ. ನ್ಯಾಯಾಧೀಶ ರೊಬ್ಬರು ಗಣರಾಜ್ಯೋತ್ಸವ ದಿನದಂದು ಅಂಬೇಡ್ಕರ್ ಭಾವಚಿತ್ರತೆಗೆದು ಹಾಕಿದ್ದಾರೆ ಎಂಬ ಕಾರಣಕ್ಕೆ ಕಳೆದೆರಡು ದಿನಗಳಿಂದ ಎಲ್ಲ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ನೂರಾರು ಜನ ಸೇರಿ ಪ್ರತಿಭಟನೆ ಮಾಡುತ್ತಲೇ ಇದ್ದಾರೆ. ಅವರೆಲ್ಲರೂ ಕರೋನಾ ಸೋಂಕು ಹೋಗಿದೆ ಎಂದು ಭಾವಿಸಿದಂತಿದೆ.
ನ್ಯಾಯಾಧೀಶರ ಮೇಲಿನ ಆಕ್ರೋಶ ಹೊರಹಾಕಲು ಪ್ರತಿಭಟನೆಯೊಂದೇ ದಾರಿ ಅಲ್ಲವಲ್ಲ. ಕಾನೂನು ರೀತಿ ಅವರ ಮೇಲೆ ಕ್ರಮ ಕೈಗೊಳ್ಳಲು ಅನೇಕ ದಾರಿಗಳಿದ್ದರೂ ನೂರಾರು ಜನ ಗುಂಪುಗೂಡಿ ಶಕ್ತಿಪ್ರದರ್ಶನ ಮಾಡುವುದೇಕೆ? ಈಗಾಗಲೇ ಆ ನ್ಯಾಯಾಧೀಶರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯವಾದಿಗಳು ಮುಖ್ಯ ನ್ಯಾಯಮೂರ್ತಿ ಅವರಿಗೆ ದೂರು ಸಲ್ಲಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿಗಳು ಕೂಡ ಸಮಗ್ರ ವರದಿ ತರಿಸಿ, ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಇಷ್ಟಾದರೂ ಪ್ರತಿಭಟನೆಗಳ ಸಂಖ್ಯೆ ಕಡಿಮೆ ಆಗುತ್ತಿಲ್ಲ. ಅನೇಕ ಸಂಘ-ಸಂಸ್ಥೆಗಳು ತಮ್ಮ ಪ್ರತಿಭಟನೆಯಿಂದ ಏನೂ ಪ್ರಯೋಜನ ಇಲ್ಲವೆಂದು ಗೊತ್ತಿದ್ದರೂ ಅದೊಂದು ತಮ್ಮ ಕರ್ತವ್ಯ ಎಂದು ಭಾವಿಸಿದಂತಿದೆ.
ಸಾಂಕ್ರಾಮಿಕದ ಈ ಸಂಕೀರ್ಣ ಸಮಯದಲ್ಲಿ ಕೋವಿಡ್ ಮಾರ್ಗಸೂಚಿಗಳಿಗೆ ಸಂಬಂಧಿಸಿದಂತೆ ಇವರ‍್ಯಾರಿಗೂ ಸಾಮಾನ್ಯ ಸಾಮಾಜಿಕ ಪ್ರಜ್ಞೆ, ಬದ್ಧತೆ ಮತ್ತು ಕಾಳಜಿ ಇದ್ದಂತೆ ಕಾಣುತ್ತಿಲ್ಲ. ರಾಜಕಾರಣಿಗಳ ಪಾದಯಾತ್ರೆ, ಸಭೆ, ಸಮಾರಂಭಗಳನ್ನು ಟೀಕಿಸುವ ಜನರು, ತಾವು ಮಾಡುತ್ತಿರುವುದು ಸರಿಯೇ ಎಂಬುದನ್ನು ಪ್ರಶ್ನೆ ಮಾಡಿಕೊಳ್ಳಬೇಕಿದೆ. ಜನರ ಜೀವ, ಜೀವನವನ್ನು ಕಾಪಾಡ ಬೇಕು ಎಂಬ ಕಾರಣಕ್ಕೆ ವಾರಾಂತ್ಯ ಕರ್ಫ್ಯೂ ತೆಗೆಯಲಾಗಿದೆಯೇ ವಿನಾಃ ಬೀದಿಗಿಳಿದು ಪ್ರತಿಭಟನೆ ಮಾಡಲಿ ಎಂದಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ.
ರಾಜ್ಯದಲ್ಲಿ ಮತ್ತೆ ಕರೋನಾ ಸೋಂಕು ಹೆಚ್ಚಾದಲ್ಲಿ ಸರಕಾರಕ್ಕೆ ಮತ್ತೆ ಲಾಕ್‌ಡೌನ್ ಜಾರಿ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗುವುದರಲ್ಲಿ ಸಂದೇಹವೇ ಇಲ್ಲ. ಆಗ ಮತ್ತೆ ಸರಕಾರವನ್ನು ದೂಷಿಸುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಆದ್ದರಿಂದ ಸಂಘ-ಸಂಸ್ಥೆಗಳ ಮುಖಂಡರು ತಮ್ಮ ಆಕ್ರೋಶವನ್ನು ಸಾತ್ವಿಕತೆಯಿಂದ ಹೊರಹಾಕುವ ಮೂಲಕ ಪರಿಹಾರ ಕಂಡುಕೊಳ್ಳಬೇಕು