ಸಬ್ ಕಾ ವಿಕಾಸ್ ಬಜೆಟ್
ಪ್ರಸಕ್ತ ಸಾಲಿನ ಸಮಾಜದ ಎಲ್ಲ ವರ್ಗಗಳನ್ನು ಒಳಗೊಂಡಂತೆ ಸಂಘಟಿತ ಹಾಗೂ ಸುಸ್ಥಿರ ಅಭಿವೃದ್ಧಿಗೆ 2022-23ನೇ ಸಾಲಿನ ಕೇಂದ್ರ ಬಜೆಟ್ ಪೂರಕ ವಾಗಿದೆ. ಈ ಬಜೆಟ್ ದೇಶದ ಅರ್ಥವ್ಯವಸ್ಥೆಗೆ ಹೊಸ ಚೈತನ್ಯ ತುಂಬುವ ಜತೆಗೆ ಪ್ರಗತಿಗೆ ವೇಗವರ್ಧಕವಾಗಿದೆ.
ಸಾಂಕ್ರಾಮಿಕದ ಸವಾಲುಗಳನ್ನು ಹಿಮ್ಮೆಟ್ಟಿಸಿ, ಸ್ವಾವಲಂಬಿ ರಾಷ್ಟ್ರನಿರ್ಮಾಣಕ್ಕೆ ಪೂರಕವಾಗಿದೆ. ಪ್ರಧಾನಿ ನರೇಂದ್ರ ಮೋದಿ ಸರಕಾರದ ಸಬ್ ಕಾ ವಿಕಾಸ್ ಘೋಷಣೆಗೆ ಬದ್ಧವಾಗಿದೆ. ವಿಶೇಷವಾಗಿ ಕಾವೇರಿ ಸೇರಿ ದಂತೆ ನದಿಗಳ ಜೋಡಣೆ ಪ್ರಸ್ತಾಪ ಐತಿಹಾಸಿಕ ಸಾಧನೆ. ಇದರಿಂದ ರಾಜ್ಯದಲ್ಲಿ 9 ಲಕ್ಷ ಹೆಕ್ಟೇರ್ ಅಂದರೆ, 25 ಲಕ್ಷ ಎಕರೆಗೆ ನೀರಾವರಿ ಒದಗಿಸಲು ಸಾಧ್ಯವಾಗುತ್ತದೆ. ಕೃಷಿ ಮಾತ್ರವಲ್ಲದೆ, ಕುಡಿಯುವ ನೀರಿನ ಸಮಸ್ಯೆ ಯೂ ಬಗೆಹರಿಯಲಿದೆ.
ಉದ್ಯೋಗ ಸೃಷ್ಟಿ, 3.8 ಕೋಟಿ ಕುಟುಂಬಗಳಿಗೆ ನಲ್ಲಿನೀರು ಸಂಪರ್ಕ ಕಲ್ಪಿಸಲು 60000 ಕೋಟಿ ರು., ಕೃಷಿ, ಪಿಎಂ ಗತಿಶಕ್ತಿ, ಆರೋಗ್ಯ ಸೇವೆ, ಹೂಡಿಕೆ ಉತ್ತೇಜನ ವಲಯಗಳಿಗೆ ಆದ್ಯತೆ ನೀಡಿರುವುದು ಕರ್ನಾಟಕದ ಬೆಳವಣಿಗೆಗೆ ಗಣನೀಯ ನೆರವು ನೀಡಲಿದೆ. ಒಂದು ದೇಶ ಒಂದು ತೆರಿಗೆ ಜತೆಗೆ ಒಂದು ದೇಶ ಒಂದು ಮಾರು ಕಟ್ಟೆ ಎಂಬ ನೀತಿಗೆ ಬಜೆಟ್ ಮುನ್ನುಡಿ ಬರೆದಿದೆ. ಎಲ್ಲ ರಾಜ್ಯಗಳ ಆರ್ಥಿಕ ಬಲವರ್ಧನೆಗೆ ?1 ಲಕ್ಷ ಕೋಟಿ ದೀರ್ಘಕಾಲದ ಸಾಲ ನೀಡಲಾಗಿದೆ. ಕೋವಿಡ್ ಸಂದರ್ಭದಲ್ಲೂ ದೇಶದ ಆರ್ಥಿಕತೆ ಹಳಿ ತಪ್ಪದ ಹಾಗೆ ಎಚ್ಚರ ವಹಿಸಲಾಗಿದೆ. ಸಂಶೋಧನೆ ಮತ್ತು ಅಭಿವೃದ್ಧಿಗೆ ಒತ್ತು ನೀಡಿ ಭಾರತ ಆತ್ಮನಿರ್ಭರ ವಾಗುವ ಕಡೆ ಹೆಜ್ಜೆ ಇರಿಸಿದೆ.
ಮುಖ್ಯವಾಗಿ ರಕ್ಷಣಾ  ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಾಗಿದೆ. ರಕ್ಷಣಾ ಇಲಾಖೆಗೆ ಮೀಸಲಿರಿಸಿದ ಬಜೆಟ್‌ನಲ್ಲಿ ಶೇ.68ರಷ್ಟು ಬಂಡವಾಳವನ್ನು ದೇಶದ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಉದ್ದಿಮೆಗಳಲ್ಲಿ ತೊಡಗಿಸಲು ನಿರ್ಧರಿಸಲಾಗಿದೆ. ಖಾಸಗಿ ಕಂಪನಿಗಳು ರಕ್ಷಣಾ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಅವಕಾಶಕಲ್ಪಿಸಲಾಗಿದ್ದು ಸ್ವಾಗತಾರ್ಹ ನಿರ್ಣಯ. ಗ್ರಾಮೀಣ ಜನರಿಗೆ ಅನುಕೂಲ ಒದಗಿಸುವ ದೃಷ್ಟಿಯಿಂದ ಡಿಜಿಟಲ್ ಇಂಡಿಯಾ ಯೋಜನೆ ಭಾಗವಾಗಿ ದೇಶದ ಎಲ್ಲ ಅಂಚೆ ಕಚೇರಿಗಳನ್ನು ದೇಶದ ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಜೋಡಿಸಲಾಗಿದೆ. ಒಟ್ಟಾರೆ ಇದೊಂದು ಸಬ್ ಕಾ ವಿಕಾಸ್ ಬಜೆಟ್.