ಟೋಯಿಂಗ್ ಸಿಬ್ಬಂದಿಗೆ ತರಬೇತಿ ಅಗತ್ಯ
ಬೆಂಗಳೂರಿನಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದ್ದರಿಂದ ಕಳೆದ ಎರಡು ದಿನಗಳಿಂದ ಟೋಯಿಂಗ್ ಅನ್ನು ನಿಲ್ಲಿಸಲಾಗಿದೆ. ಆದರೆ ವಾಹನ ಸವಾರರು ಮನಬಂದಂತೆ ವಾಹನ ಪಾರ್ಕಿಂಗ್ ಮಾಡುತ್ತಿರುವುದರಿಂದ ಸಂಚಾರ ದಟ್ಟಣೆ ಹೆಚ್ಚುತ್ತಿದೆ ಎಂದು ವರದಿಯಾಗಿದೆ.
ಟೋಯಿಂಗ್ ಮಾಡುವ ಸಿಬ್ಬಂದಿಗೆ ಸೂಕ್ತ ತರಬೇತಿ, ಮಾರ್ಗಸೂಚಿ ಇಲ್ಲದೇ ಇರುವುದಕ್ಕೆ ಸಾರ್ವಜನಿಕರು ಮತ್ತು ಟೋಯಿಂಗ್ ಸಿಬ್ಬಂದಿ ನಡುವೆ ರಾದ್ಧಾಂತ ಗಳು ಘಟಿಸುತ್ತಿವೆ. ವಾಹನವನ್ನು ಟೋಯಿಂಗ್ ಮಾಡುವ ಸ್ಥಳದಲ್ಲಿ ಸರಕಾರದ ಪರವಾಗಿ ಪೊಲೀಸ್ ಮತ್ತು ಟೋಯಿಂಗ್ ಸಿಬ್ಬಂದಿ ಇರುತ್ತಾರೆ. ಕೆಲವೊಮ್ಮೆ ಇಬ್ಬರೂ ಸೇರಿ ವಾಹ ಸವಾರರ ಮೇಲೆ ದೌರ್ಜನ್ಯ ಎಸಗುತ್ತಾರೆ. ಇಲ್ಲಿ ಸಾರ್ವಜನಿಕರ ಪರವಾಗಿ ಯಾರೂ ಇರುವುದಿಲ್ಲ. ಜನ ಎಷ್ಟೇ ಬೇಡಿಕೊಂಡರೂ ವಾಹನಗಳನ್ನು ಬಿಡುವುದಿಲ್ಲ.
ಆದ್ದರಿಂದ ಟೋಯಿಂಗ್ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿದೆಯೇ ಎಂದು ಖಾತರಿಪಡಿಸಿಕೊಳ್ಳಲು ಅಧಿಕೃತ ಸ್ವಯಂಸೇವಕ ಮಾರ್ಷಲ್‌ಳನ್ನು ನೇಮಿಸಬೇಕು. ಟೋಯಿಂಗ್ ಸರಿಯಾಗಿ ನಡೆಯುತ್ತಿದೆ ಎಂದು ಅವರು ಖಚಿತಪಡಿಸಿಕೊಂಡ ಮೇಲೆಯೇ ವಾಹನವನ್ನು ಒಯ್ಯಬಹುದು.
ಅದಕ್ಕೂ ಮುಂಚೆ ವಾಹನದ ಸಂಖ್ಯೆಯನ್ನು ಮೈಕ್ ಮೂಲಕ ಘೋಷಿಸಿ, 10 ನಿಮಿಷ ಕಾಲಾವಕಾಶ ಕೊಡ ಬೇಕು ಎಂದು ಟೋಯಿಂಗ್ ಸಿಬ್ಬಂದಿಗೆ ಸೂಚಿಸಬೇಕಿದೆ. ಇಲ್ಲವಾದಲ್ಲಿ ಟೋಯಿಂಗ್ ಸಿಬ್ಬಂದಿ ಮತ್ತು ಸಾರ್ವಜನಿಕರ ನಡುವೆ ಘರ್ಷಣೆಗಳೂ ಆಗುತ್ತಲೇ ಇರುತ್ತವೆ. ಸಾರ್ವಜನಿಕರು ಪಾರ್ಕಿಂಗ್ ಅಗತ್ಯ ವ್ಯವಸ್ಥೆ ಇದ್ದರೂ ಅದನ್ನು ಬಳಕೆ ಮಾಡದೇ ಇರುವುದಕ್ಕೆ ಕಾರಣ ದುಬಾರಿ ಶುಲ್ಕ.
ಪ್ರತಿ ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಲಾಗಿದೆಯಾದರೂ ಅದನ್ನು ಖಾಸಗಿ ವ್ಯಕ್ತಿಗಳಿಗೆ ಟೆಂಡರ್ ಕೊಡಲಾಗುತ್ತಿದೆ. ಅವರು ಮನಬಂದಂತೆ ಶುಲ್ಕ ವಿಽಸುತ್ತಿದ್ದಾರೆ. ಹೀಗಾಗಿ ಜನರು ನಿಗದಿತ ಸ್ಥಳದಲ್ಲಿ ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಬಿಎಂಆರ್‌ಸಿಎಲ್ ಗಮನಹರಿಸಿ, ಟೆಂಡರ್ ಪಡೆದವರ ಮೇಲೆ ಹಿಡಿತ ಸಾಧಿಸಬೇಕು. ಇದೆಲ್ಲಕ್ಕಿಂತ ಮುಖ್ಯವಾಗಿ ಜನರು ಆದಷ್ಟು ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಿದರೆ ಇವ್ಯಾವ ಸಮಸ್ಯೆಗಳೂ ಉದ್ಭವವಾಗುವುದಿಲ್ಲ. ಇಲ್ಲಿ ಟೋಯಿಂಗ್ ಸಿಬ್ಬಂದಿ ಮತ್ತು ಸಾರ್ವಜನಿಕರು ಜಂಟಿಯಾಗಿ ಹೊಣೆಗಾರಿಕೆ ನಿಭಾಯಿಸಬೇಕಿದೆ.