ರಾಜಕೀಯ ವಲಸೆಗೆ ಬೇಕು ಕಠಿಣ ನಿರ್ಬಂಧ
ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಇರುವಾಗಲೇ ಎಲ್ಲ ಪಕ್ಷಗಳ ಮುಖಂಡರ ಬಾಯಲ್ಲೂ ಪಕ್ಷಾಂತರದ ಮಾತುಗಳು ಕೇಳಿಬರುತ್ತಿವೆ. ಇದೇಪಕ್ಷಾಂತರದ ಕಾರಣದಿಂದಲೇ ಈ ಹಿಂದೆ ಸರಕಾರ ಉರುಳಿದ್ದು, ಹಲವು ಕ್ಷೇತ್ರಗಳಲ್ಲಿ ಉಪಚುನಾವಣೆ ಎದುರಿಸಬೇಕಾಗಿ ಬಂದಿತ್ತು.
ಇದೀಗ ಮತ್ತೆ ವಲಸೆ ಎನ್ನುವುದು ರಾಜಕೀಯ ಕ್ಷೇತ್ರದಲ್ಲಿ ಸಾಮಾನ್ಯ ವಿದ್ಯಮಾನವಾಗಿ ಬೆಳೆಯುತ್ತಿರುವುದು ಹೇವರಿಕೆ ತರಿಸುವಂತಿದೆ. ಇದು ಪ್ರಜಾತಂತ್ರ ವ್ಯವಸ್ಥೆಗೆ ಅಂಟಿದ ಅಶಿಸ್ತಿನ ನಡೆ ಮಾತ್ರವಲ್ಲ, ನಾವು ಆರಿಸಿ ಕಳುಹಿಸಿದವರ ನೈತಿಕತೆಯ ಪ್ರಶ್ನೆಯೂ ಹೌದು. ಪಕ್ಷ ಯಾವುದೇ ಇರಲಿ ಅದರ ಸಿದ್ಧಾಂತಗಳು, ಪ್ರಣಾಳಿಕೆ ಗಳು, ಕಟ್ಟುಪಾಡುಗಳು ರಾಜ್ಯ, ದೇಶದ ಸುರಕ್ಷೆ ಮತ್ತು ಅಭಿವೃದ್ಧಿಯ ದೃಷ್ಟಿಯಲ್ಲಿ ಪ್ರಶ್ನಾತೀತವಾಗಿ ಇರಬೇ ಕಾದದ್ದು ನ್ಯಾಯ. ಅಂತಹ ಮೌಲ್ಯಗಳನ್ನು ಒಮ್ಮೆ ಒಪ್ಪಿ ಅಪ್ಪಿಕೊಂಡು ಬಂದ ರಾಜಕೀಯ ನಾಯಕರು ಆ ಪಕ್ಷಗಳಿಂದ ಗೆಲುವನ್ನು ಸಾಧಿಸಿ ಉನ್ನತ ಸ್ಥಾನಗಳಲ್ಲಿದ್ದರೂ ಮುಂದೆ ತಮ್ಮ ಸ್ವಾರ್ಥ ಸಾಧನೆ ಗಾಗಿ, ಕೈಹಿಡಿದ ಪಕ್ಷ ಮತ್ತು ಮತದಾರರನ್ನು ಕಡೆಗಣಿಸುವುದನ್ನು ಯಾರೂ ಸಂಭ್ರಮಿಸುವ ಸಂಗತಿಯಲ್ಲ.
ಇವರನ್ನು ಬೆಂಬಿಡದೆ ಹಿಂಬಾಲಿಸುವ ಗುಂಪು ಈ ವಿಚಾರದತ್ತ ಯೋಚಿಸುವುದೇ ಇಲ್ಲ. ಕಾರಣ ಅವರನ್ನು ತಮ್ಮ ಸುಪರ್ದಿಯಲ್ಲಿಡಲು ಗೆದ್ದ ನಾಯಕರು ಏನೆ ಬೇಕೊ ಅದೆಲ್ಲವನ್ನೂ ಮಾಡಿರುತ್ತಾರೆ. ಮನಸ್ಸು ಬಂದಾಗ ಪಕ್ಷದಿಂದ ಪಕ್ಷಕ್ಕೆ ನಾಚಿಕೆಯಿಲ್ಲದೆ ಜಿಗಿಯುವ ಇವರನ್ನು ನಿಯಂತ್ರಿಸಲು ಒಂದೋ ಮತದಾರ ಜಾಗೃತ ನಾಗಬೇಕು, ಇಲ್ಲವೇ ವಲಸೆ ವಿರುದ್ಧ ಕಟ್ಟುನಿಟ್ಟಿನ ಕಾನೂನು ಜಾರಿಯಾಗಬೇಕು. ಇಲ್ಲದಿದ್ದರೆ ಇವರ ಅಸಹ್ಯ ತರಿಸುವ ಹಾರಾಟವನ್ನು ಜನರು ಅನಿವಾರ್ಯವಾಗಿ ಸಹಿಸಿಕೊಳ್ಳಬೇಕಾಕುತ್ತದೆ.
ಅಲ್ಲದೇ, ವಿನಾಕಾರಣ ಮಧ್ಯಂತರ ಚುನಾವಣೆಯಾಗುವ ಮೂಲಕ ರಾಜ್ಯದ ಬೊಕ್ಕಸದಲ್ಲಿರುವ ಜನರ ತೆರಿಗೆ ದುಡ್ಡು ಪೋಲು ಆಗುತ್ತದೆ. ರಾಜಕಾರಣಿ ಗಳಾ ದವರು ಯುವಪೀಳಿಗೆಗೆ ಮಾದರಿಯಾಗುವ ನಡೆ ಅನುಸರಿಸಬೇಕೇ ವಿನಾಃ, ಪಕ್ಷಾಂತರದಂತಹ ಕೆಟ್ಟ ಸಂಸ್ಕೃತಿಯನ್ನು ಪಾಲಿಸಿ, ಪೋಷಿಸುವುದು ಸರಿಯಲ್ಲ.