ಮಠಗಳು ‘ಸರ್ವಮಾನ್ಯ’ವಾಗಲಿ
ವಾದ ವಿವಾದಗಳ ನಡುವೆಯೇ ಪಂಚಮಸಾಲಿ ಲಿಂಗಾಯತ ಸಮುದಾಯದ ಮೂರನೇ ಪೀಠ ಜಮಖಂಡಿ ತಾಲೂಕಿನ ಆಲಗೂರಿನಲ್ಲಿ ಭಾನುವಾರ ಸ್ಥಾಪನೆಯಾಗಿದೆ. ಶಿಕ್ಷಣ, ಸಂಸ್ಕಾರ ಪ್ರಸಾರಕ್ಕಾಗಿ ಸಮಾಜದಲ್ಲಿ ಮಠಗಳ ಅವಶ್ಯಕತೆ ಇದೆ.
ಹೆಚ್ಚೆಚ್ಚು ಮಠಗಳಾದಷ್ಟು ಜನರಲ್ಲಿ ಅಧ್ಯಾತ್ಮ ಮನೋಭಾವನೆ ಬೆಳೆಯುತ್ತದೆ ಎಂಬುದು ದಿಟ. ಆದರೆ ಒಂದೊಂದು ಜಾತಿ, ಉಪಜಾತಿಗಳಿಗೇ ಮೂರು ನಾಲ್ಕು ಪೀಠಗಳಾಗುವುದರಿಂದ ಆ ಸಮುದಾಯದವರಲ್ಲೇ ಒಡಕು ಹುಟ್ಟಿಸಿದಂತಾಗುವುದಿಲ್ಲವೇ? ಬಹುಸಂಖ್ಯಾತರಿರುವ ಸಮುದಾಯಗಳಿಗೆ ಮಠ ಗಳಾದರೆ, ಅದೇ ಜಾತಿಯಲ್ಲಿರುವ ಅಲ್ಪಸಂಖ್ಯಾತರಿಗೆ ಯಾವ ಮಠ? ಎಂಬ ಪ್ರಶ್ನೆಗಳು ಉದ್ಭವಿಸುವುದು ಸಹಜ. ಸಮಾಜದ ಜನರಲ್ಲಿ ಸಂಸ್ಕಾರ, ಶಿಕ್ಷಣ ಪ್ರಸಾರ ಮಾಡುವುದು ಮಠಗಳ ಮುಖ್ಯ ಕಾರ್ಯ. ಆದರೆ ಈಗಾಗಲೇ ಸ್ಥಾಪನೆಯಾ ಗಿರುವ ಮಠಗಳಿಂದ ಈ ಕಾರ್ಯ ಆಗಿದೆಯಾ? ಅನೇಕ ಮಠಗಳು ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದರೂ ಬಹುತೇಕ ಶಿಕ್ಷಣ ಸಂಸ್ಥೆಗಳಲ್ಲಿ ಶುಲ್ಕ ರಹಿತ ಶಿಕ್ಷಣ ಕೊಡುತ್ತಿಲ್ಲ.
ಹಾಗಾದರೆ ಒಂದರ ಹಿಂದೆ ಒಂದು ಸ್ಪರ್ಧೆಗಿಳಿದವರಂತೆ ಈ ಮಠಗಳ ಉಗಮವಾಗುತ್ತಿರುವುದು ಯಾರ ಉದ್ಧಾರಕ್ಕೆ ಎಂಬುದನ್ನು ಸ್ಪಷ್ಟಪಡಿಸಬೇಕಿದೆ. ಒಬ್ಬೊಬ್ಬ ರಾಜಕಾರಣಿಯೂ ಒಂದೊಂದು ಮಠಗಳಿಗೆ ಬೆಂಬಲವಾಗಿ ನಿಂತಿರುವುದು, ಆ ಮಠಗಳೂ ಆ ರಾಜಕಾರಣಿಯ ಬೆಂಬಲಕ್ಕೆ ನಿಂತಿರುವುದು ತೆರೆದಿಟ್ಟ ಸತ್ಯ. ನಮ್ಮ ಜಾತಿಯವರೇ ಮುಖ್ಯಮಂತ್ರಿಯಾಗಲಿ, ಮಂತ್ರಿಯಾಗಲಿ ಎಂದು ಬಹಿರಂಗ ಸಮಾವೇಶದಲ್ಲಿ ಸ್ವಾಮೀಜಿ ಗಳು ಬೇಡಿಕೆ ಇಟ್ಟಿರುವ ಘಟನೆಗಳು ಈ ಹಿಂದೆ ನಡೆದಿವೆ.
ನಡೆಯುತ್ತಲೇ ಇವೆ. ಹಾಗಾದರೆ ರಾಜಕಾರಣಿಗಳನ್ನೇ ಬೆಂಬಲಿಸಲು ಮಠಗಳು ಅಸವಾಗುವುದಾದರೆ, ಜನಸಾಮಾನ್ಯರು ಏಕೆ ಮಠಗಳಿಗೆ ವಿಧೇಯ ರಾಗಿರಬೇಕು? ನೂರಾರು ವರ್ಷಗಳಿಂದ ಇರುವ ವಿಜಯಪುರದ ಜ್ಞಾನಯೋಗಾಶ್ರಮ, ಚಿತ್ರದುರ್ಗದ ಮುರುಘಾಮಠ, ಸುತ್ತೂರು ದೇಶಿ ಕೇಂದ್ರ,ತುಮಕೂರಿನ ಸಿದ್ಧಗಂಗಾ ಮಠ ಜಾತಿ ಮಠಗಳಾಗಿದ್ದರೂ, ಜಾತಿಗಳೊಂದಿಗೆ ತಮ್ಮನ್ನು ತಳಕು ಹಾಕಿಕೊಳ್ಳದೆ ಸಮಸಮಾಜದ ನಿರ್ಮಾಣಕ್ಕೆ ನಿತ್ಯ ಕೆಲಸಮಾಡುತ್ತಿವೆ. ಆ ಮಠಗಳು ಹೊಂದಿರುವ ಉದ್ದೇಶದಲ್ಲಿ ಎಷ್ಟೇ ಹೊಸ ಮಠಗಳು ಉಗಮವಾದರೂ ಸ್ವಾಗತಾರ್ಹವೇ. ಆದರೆ ಆ ಕೆಲಸ ಆಗುತ್ತಿಲ್ಲ ಎಂಬುದೇ ಬೇಸರದ ಸಂಗತಿ.
ಆಲಗೂರಿನಲ್ಲಿ ಸ್ಥಾಪನೆಯಾಗಿರುವ ಪಂಚಮಸಾಲಿ ಸಮಾಜದ ಮೂರನೇ ಪೀಠ ಆ ನಿಟ್ಟಿನಲ್ಲಿ ಕೆಲಸ ಮಾಡಲಿ, ಬಸವಣ್ಣನವರ ಕನಸಾದ ಜಾತಿ ವಿನಾಶಕ್ಕೆ ಕೈ ಹಾಕಿ ಅಸ್ಪೃಶ್ಯತೆಯನ್ನು ತೊಲಗಿಸುವ ಮೂಲಕ ಸಹಬಾಳ್ವೆ, ಸಮಸಮಾಜದ ನಿರ್ಮಾಣಕ್ಕೆ ಕಾರಣರಾಗಲಿ ಎಂಬುದೇ ಹಾರೈಕೆ.