ಪ್ರಚೋದನಾಕಾರರ ಹತ್ತಿಕ್ಕಿ
ರಾಜ್ಯದಲ್ಲಿ ಪದವಿಪೂರ್ವ ತರಗತಿಗಳೂ ಸೇರಿದಂತೆ ಎಲ್ಲ ಶಾಲಾ- ಕಾಲೇಜುಗಳು ಇಂದಿನಿಂದ ಮತ್ತೆ ಆರಂಭವಾಗಲಿದ್ದು, ಇಡೀಸಮಾಜದಲ್ಲಿ ಮತ್ತೆ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಹಿಜಾಬ್ -ಕೇಸರಿ ಶಾಲು ಸಂಘರ್ಷವನ್ನು ರಾಜಕಾರಣಿಗಳು, ಮತೀಯ ಸಂಘಟನೆ ಗಳು, ಮಾಧ್ಯಮಗಳು ಮನಬಂದಂತೆ ಬಳಸಿಕೊಳ್ಳು ತ್ತಿರುವುದರಿಂದಲೇ ಈ ವಾತಾವರಣ ತಿಳಿಯಾಗುತ್ತಿಲ್ಲ ಎನ್ನುವುದು ಸ್ಪಷ್ಟ. ಮುಗ್ಧ ವಿದ್ಯಾರ್ಥಿಗಳನ್ನು ಮುಂದಿಟ್ಟುಕೊಂಡು ಸಮಾಜ ಹಾಗೂ ಮನಸ್ಸು ಒಡೆಯುವ ಪ್ರಯತ್ನ ಆಗುತ್ತಲೇ ಇದೆ. ಹೀಗಾಗಿ ಪದೇ ಪದೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸುವ ಬದಲು ಪ್ರಚೋದ ನಾಕಾರರನ್ನು ಗುರುತಿಸಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.
ಕರೋನಾ ಸಂದರ್ಭ ಎಷ್ಟೋ ವಿದ್ಯಾರ್ಥಿಗಳು ಆನ್‌ಲೈನ್ ಶಿಕ್ಷಣ ಪಡೆದುಕೊಂಡರು. ಹಾಗೇ ಎಷ್ಟೋ ಮಂದಿ ಶಿಕ್ಷಣ ವಂಚಿತರಾದರು. ಅದರಲ್ಲೂ ಪದವಿ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷದಲ್ಲಿ ಏರುಪೇರುಗಳಾಗಿ, ಉನ್ನತ ಶಿಕ್ಷಣಕ್ಕೆ ಹೋಗುವವರು ತೊಂದರೆ ಅನುಭವಿಸ ಬೇಕಾಯಿತು. ಈಗ ಪದವಿ ಪರೀಕ್ಷೆ ಪ್ರಾರಂಭವಾಗುತ್ತಿದೆ. ಬಹಳಷ್ಟು ಕಾಲೇಜುಗಳಲ್ಲಿ ಪದವಿ ಪಠ್ಯ ಕ್ರಮ ಪೂರ್ಣಗೊಂಡಿಲ್ಲ.
ಇಂತಹ ಸಂದರ್ಭದಲ್ಲೇ ಹಿಜಾಬ ವಿವಾದ ಹೊತ್ತಿಕೊಂಡಿತು. ಆದರೂ ಪರಿಸ್ಥಿತಿ ಶಾಂತಗೊಳಿಸಲು ರಾಜ್ಯ ಸರಕಾರ ರಜೆ ಘೋಷಿಸುವ ತೀರ್ಮಾನ ತೆಗೆದುಕೊಂಡಿತು. ಇದೀಗ ಮತ್ತೆ ಶಾಲಾ-ಕಾಲೇಜುಗಳ ಆರಂಭ ವಾಗುತ್ತಿದ್ದಂತೆ ಅದೇ ಪರಿಸ್ಥಿತಿ ಮುಂದುವರಿಯುವ ಲಕ್ಷಣಗಳು ಗೋಚರಿಸುತ್ತಿವೆ. ಹೀಗೆಯೇ ಮುಂದುವರಿದರೆ ವಿದ್ಯಾರ್ಥಿಗಳ ಭವಿಷ್ಯ ಹೇಗೆ? ಶೈಕ್ಷಣಿಕ ವ್ಯವಸ್ಥೆಯಲ್ಲಿ ಧರ್ಮ ಮತ್ತು ರಾಜಕಾರಣದ ಹಸ್ತಕ್ಷೇಪವಾಗದಂತೆ, ಎಲ್ಲರಿಗೆ ಸೌಹಾರ್ದದ ಬಗ್ಗೆ ಮನವರಿಕೆ ಮಾಡ ಬೇಕಾಗಿದೆ. ವಿದ್ಯಾರ್ಥಿಗಳು, ಯಾವುದೇ ಆತಂಕ ಅಥವಾ ಅಭದ್ರತೆಯ ಭಯವಿಲ್ಲದೆ ಪಠ್ಯ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಮೂಲಕ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸುವತ್ತ ಗಮನ ಹರಿಸುವಂತೆ ಪರಿವರ್ತನೆ ಮಾಡಬೇಕಿದೆ.
ಇಲ್ಲವಾದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶವೊಂದು ಹರಿದಾಡುತ್ತಿರುವಂತೆ ‘ಕಾಲೇಜು ಮುಗಿಸಿ ಉದ್ಯೋಗಕ್ಕಾಗಿ ಅಲೆದಾಡು ವಾಗ ಯಾವ ಅಲ್ಲಾ, ಯಾವ ಶ್ರೀರಾಮನೂ ನೆರವಿಗೆ ಬರಲ್ಲ. ಆಗ ಕಾಣುವುದು ತಂದೆಯ ಸವೆದಿರುವ ಚಪ್ಪಲಿ, ತಾಯಿಯ ಹರಿದ ಸೀರೆ ಮಾತ್ರ.