ಮತ್ತೆ ಹೊಣೆ ಮರೆತ ಸದನ
ವಿಧಾನ ಮಂಡಲದ ಕಲಾಪ ಪ್ರಾರಂಭವಾಗಿ ಮೂರು ದಿನ ಕಳೆದರೂ ಈವರೆಗೂ ಯಾವುದೇ ಮಹತ್ವದ ಚರ್ಚೆಗಳನ್ನು ಆಡಳಿತ ಮತ್ತುಪ್ರತಿಪಕ್ಷಗಳು ಕೈಗೆತ್ತಿಕೊಂಡಿಲ್ಲ. ‘ಕೆಂಪು ಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸಲಾಗುತ್ತದೆ’ ಎಂದು ಸಚಿವ ಕೆ.ಎಸ್.ಈಶ್ವರಪ್ಪ ನೀಡಿದ್ದಹೇಳಿಕೆಯನ್ನೇ ದೊಡ್ಡದಾಗಿ ಬಿಂಬಿಸಿ ಈ ಬಾರಿಯ ಸದನದಲ್ಲಿ ಕೋಲಾಹಲ ಎಬ್ಬಿಸಲು ಪ್ರತಿಪಕ್ಷಗಳು ಸಿದ್ಧವಾದಂತಿದೆ.
ಹೀಗಾಗಿ ಅಧಿವೇಶನದಲ್ಲಿ ನಡೆಯಬೇಕಿದ್ದ ಅನೇಕ ಚರ್ಚೆಗಳಿಗೆ ಕತ್ತರಿ ಬೀಳುವುದು ಬಹುತೇಕ ಖಚಿತವಾಗಿದೆ. ಈ ಆಡಳಿತ ವ್ಯವಸ್ಥೆಗೆ ಶಕ್ತಿ ತುಂಬಲು ಚರ್ಚೆ ಅತ್ಯಗತ್ಯ. ಆ ಉದ್ದೇಶದಿಂದಲೇ ಸದನದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರಿಗೆ ಮಾತನಾ ಡಲು ಪ್ರತ್ಯೇಕ ಸಮಯ ನಿಗದಿಯಾಗಿರುತ್ತದೆ. ಆ ಸಮಯದಲ್ಲಿ ಜನರ ಸಮಸ್ಯೆಗಳನ್ನು ಸಮರ್ಥವಾಗಿ ಮಂಡಿಸಿ ಸರಕಾರದ ಕಣ್ಣು ತೆರೆಸುವುದು ಜನಪ್ರತಿನಿಧಿಗಳ ಕರ್ತವ್ಯ. ಆದರೆ ಸದ್ಯದ ಮಟ್ಟಿಗೆ ಸದನವೆಂದರೆ ಕೂಗಾಟ, ಹೊಡೆದಾಟಕ್ಕೆ ವೇದಿಕೆಯಾಗುತ್ತಿದೆ.
ಜನರ ಭಾವನೆಗಳನ್ನು ಅವರ ಕಷ್ಟಗಳನ್ನು ಇಲ್ಲಿ ಹೇಳಬೇಕು ಎಂಬುದನ್ನೇ ಮರೆತಂತಿದೆ. ಕೋವಿಡ್ ಕಾಲದಲ್ಲಿ ಸರಕಾರ ಕೈಗೊಂಡ ಕ್ರಮಗಳ ಬಗ್ಗೆ ಸದನಕ್ಕೆ ತಿಳಿಸುವುದು, ಚುನಾವಣೆಗೂ ಮುನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ ಯೋಜನೆಗಳ ಪೈಕಿ ಈವರೆಗೂ ಎಷ್ಟು ಯೋಜನೆಗಳು ಜಾರಿಯಾಗಿವೆ, ಜಾರಿಯಾಗಬೇಕಿದೆ, ಜನರ ಕಲ್ಯಾಣಕ್ಕಾಗಿ ಸರಕಾರ ಕೈಗೊಂಡಿರುವ ಕ್ರಮಗಳು ಯಾವವು ಎಂಬು ದನ್ನು ಆಡಳಿತ ಪಕ್ಷದ ಸದಸ್ಯರು ಸದನಕ್ಕೆ ತಿಳಿಸುವ ಕೆಲಸ ವಾಗಬೇಕು. ಆದರೆ ಅದ್ಯಾವುದಕ್ಕೂ ಸದನ ವೇದಿಕೆಯಾಗುತ್ತಿಲ್ಲ ಎಂಬುದು ಬೇಸರದ ಸಂಗತಿ.
ಸಂಸದೀಯ ವ್ಯವಸ್ಥೆಯ ನಿಜವಾದ ಶಕ್ತಿ ಪ್ರತಿಪಕ್ಷ. ಆಡಳಿತ ಪಕ್ಷವು ತಪ್ಪು ಹೆಜ್ಜೆ ಇಟ್ಟರೆ, ಅದನ್ನು ತಿಳಿಸಿ, ತಿದ್ದುವುದು ಪ್ರತಿಪಕ್ಷದ ಜವಾಬ್ದಾರಿ. ಆದರೆ ಈ ಬಾರಿಯೂ ಪ್ರತಿಪಕ್ಷಗಳು ತಮ್ಮ ಜವಾಬ್ದಾರಿ ಮರೆತು ಅರಾಜಕತೆ ನಿರ್ಮಾಣ ಮಾಡಲು ಸಿದ್ಧವಾಗಿದ್ದು,ಸದನದ ಸಮಯವನ್ನು ಹಾಳು ಮಾಡಲು ತುದಿಗಾಲಲ್ಲಿ ನಿಂತಂತಿದೆ. ಸ್ಪೀಕರ್ ಕಾಗೇರಿ ಅವರು ಈ ಬಾರಿ ಚುನಾವಣೆ ಸುಧಾರಣೆ ಕುರಿತು ಸದನದಲ್ಲಿ ಚರ್ಚಿಸುವುದಾಗಿ ಹೇಳಿದ್ದರು. ಹೀಗಾಗಿ ರಾಜ್ಯದ ಜನತೆ ಕಲಾಪವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
ಆದ್ದರಿಂದ ಮತೀಯ ಸಮಸ್ಯೆಗಳ ಕುರಿತ ಚರ್ಚೆಗಳನ್ನು ಬಿಟ್ಟು, ಚುನಾವಣೆ ಸುಧಾರಣೆ ಕುರಿತು ಚರ್ಚೆಗಳಾಗಬೇಕಿದೆ. ಆ ಮೂಲಕ ಸದನದ ಸಮಯವನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ.