ಮೋಟಾರ್ ಸೈಕಲ್‌ನಲ್ಲಿ ಮಕ್ಕಳಿಗೆ ಹೆಲ್ಮೆಟ್: ಪರಾಮರ್ಶೆ ಅಗತ್ಯ
ಸರಕಾರ ರೂಪಿಸಲು ನಿಯಮಗಳು ಸರ್ವಮನ್ನಣೆ ಪಡೆಯುವಂತಿರಬೇಕು. ಇಲ್ಲವಾದಲ್ಲಿ ಒಂದಷ್ಟು ಪರಾಮರ್ಶೆ ನಡೆಸಿ ನಿಯಮ ಜಾರಿಮಾಡಬೇಕು. ಇದೀಗ ಕೇಂದ್ರ ಸರಕಾರ ಜಾರಿಗೆ ತಂದಿರುವ ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ ಎಂಬ ನಿಯಮ ವಿವಾದಕ್ಕೆ ಕಾರಣ ವಾಗಿದೆ. ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಹೆಲ್ಮೆಟ್ ಹಾಕುವುದು ಸಾಧ್ಯವೇ ಎಂಬ ಪ್ರಶ್ನೆ ಸಾರ್ವಜನಿಕರ ವಲಯದಲ್ಲಿ ಮೂಡಿದೆ.
ದೇಶದಲ್ಲಿ ನಡೆಯುವ ಅಪಘಾತಗಳ ಪೈಕಿ ಅತಿ ಹೆಚ್ಚಿನ ಸಾವಾಗುವುದು ಹೆಲ್ಮೆಟ್ ರಹಿತ ಪ್ರಯಾಣದಿಂದ ಎಂಬ ಅಂಕಿ-ಅಂಶಗಳಿವೆ. ಅಪಘಾತ ಸಂದರ್ಭದಲ್ಲಿ ದ್ವಿಚಕ್ರವಾಹನಗಳ ಮೇಲಿದ್ದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ, ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯ ಮಾಡಬೇಕು ಎಂಬುದು ಸರಕಾರದ ವಾದ. ಸರಕಾರದ ವಾದವೇನೋ ಸರಿ, ಆದರೆ, ಈ ವಯಸ್ಸಿನ ಮಕ್ಕಳು ಹೆಲ್ಮೆಟ್ ಧರಿಸಿ ಪ್ರಯಾಣ ಮಾಡಲು ಸಾಧ್ಯವೇ? ಮಕ್ಕಳು ತಲೆಯ ಮೇಲೆ ಹೆಲ್ಮೆಟ್‌ನಂತಹ ಭಾರ ಹೊತ್ತು ಪ್ರಯಾಣದಲ್ಲಿ ಕೂರುವುದು ಸಾಧ್ಯವೇ? ಆ ಕಿರಿಕಿರಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ತಂದೆ-ತಾಯಿಯ ವಾಹನ ಚಾಲನೆಗೆ ಅಡ್ಡಿಯನ್ನುಂಟು ಮಾಡುವು ದಿಲ್ಲವೇ? ಇದರಿಂದ ಅಪಘಾತಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವುದಿಲ್ಲವೇ? ಎಂಬುದು ಸಾರ್ವಜನಿಕರ ವಲಯದಲ್ಲಿ ಮೂಡಿಬರುತ್ತಿರುವ ಪ್ರಶ್ನೆಗಳು.
ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಮೋಟಾರ್ ಸೈಕಲ್‌ನಲ್ಲಿ ಮಕ್ಕಳು ಪ್ರಯಾಣಿಸುವಾಗ ಅಥವಾ ಕರೆದೊಯ್ಯುವಾಗ ಹೆಲ್ಮೆಟ, ರಕ್ಷಾಕವಚ ಕಡ್ಡಾಯವಾಗಿದೆ ಎಂದು ತಿಳಿಸಿದೆ. ಈ ಸುರಕ್ಷತಾ ಕ್ರಮಗಳ ಜತೆಗೆ ಮಕ್ಕಳನ್ನುಕರೆದೊಯ್ಯುವಾಗ ಮೋಟಾರ್ ಸೈಕಲ್ ವೇಗ ಗಂಟೆಗೆ 40 ಕಿ.ಮೀ.ಗಿಂತ ಹೆಚ್ಚು ಇರುವಂತಿಲ್ಲ. ರಕ್ಷಾ ಕವಚವನ್ನು ಮಗುವಿಗೆ ಧರಿಸಿರ ಬೇಕು ಹಾಗೂ ಅದಕ್ಕೆ ಜತೆಯಾಗಿರುವ ಪಟ್ಟಿಯನ್ನು ವಾಹನ ಚಾಲನೆ ಮಾಡುವ ವ್ಯಕ್ತಿಯು ಭುಜದ ಮೇಲಿನಿಂದ ಧರಿಸಬೇಕು. ಈ ಮೂಲಕ ಮಗುವಿನ ತಲೆಯ ಕೆಳಗಿನ ದೇಹದ ಭಾಗವು ಸುರಕ್ಷಿತವಾಗಿ ಚಾಲಕನೊಂದಿಗೆ ಜತೆಯಾಗಿರಬೇಕು.
ಮಕ್ಕಳ ಸುರಕ್ಷತೆಗೆ ಬಳಸುವ ಹೆಲ್ಮೆಟ, ಸುರಕ್ಷತಾ ಕವಚಗಳು ಹಗುರವಾಗಿರಬೇಕು, ಹೊಂದಿಸಿಕೊಳ್ಳುವಂತಿರಬೇಕು, ಜಲ ನಿರೋಧಕ ವಾಗಿರಬೇಕು ಹಾಗೂ ಬಾಳಿಕೆ ಬರುವಂತಿರಬೇಕು ಎಂದು ಸಚಿವಾಲಯವು ತಿಳಿಸಿದೆ.