ಅತಿರೇಕದ ಪ್ರಚಾರ ನಿಲ್ಲಲಿ
ಸಾವಿರಾರು ಜನರ ಸಾವು ನೋವುಗಳಿಗೆ ಕಾರಣವಾಗುವ ಯುದ್ಧವನ್ನು ಯಾರೂ ಸಂಭ್ರಮಿಸುವುದಿಲ್ಲ. ಆದರೆ ನಮ್ಮ ದೇಶದ ವಿದ್ಯುನ್ಮಾನ ಮಾಧ್ಯಮಗಳು ಮಾತ್ರ ಸಂಭ್ರಮಿಸುತ್ತಿರುವಂತಿದೆ.
ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದ ಬಗೆಗಿನ ಸುದ್ದಿಗಳನ್ನು ಬಿತ್ತರಿಸುವಾಗ ವೈಭವೀಕರಿಸುವ ಭರದಲ್ಲಿ ಸಾಮಾಜಿಕ ಬದ್ಧತೆ, ಜವಾಬ್ದಾರಿಯನ್ನು ಮರೆತು ಅತಿರೇಕದಿಂದ ವರ್ತಿಸುತ್ತಿವೆ. ಸಾವು ನೋವಿನ ದೃಶ್ಯ ಮತ್ತು ವಿವರಣೆಯನ್ನು ಅತಿ ರಂಜಿತವಾಗಿ ಪ್ರಸಾರ ಮಾಡುವಲ್ಲಿ ಒಂದಕ್ಕಿಂತ ಒಂದು ಚಾನೆಲ್‌ಗಳು ಪೈಪೋಟಿ ಗಿಳಿದಂತಿವೆ. ಕನ್ನಡಿಗರೂ ಸೇರಿದಂತೆ ಅನೇಕ ಸಹಸ್ರ ಸಂಖ್ಯೆಯ ಭಾರತೀಯ ವಿದ್ಯಾರ್ಥಿಗಳು ಯುದ್ಧಭೂಮಿ ಉಕ್ರೇನ್‌ನ ಹಲವು ನಗರಗಳಲ್ಲಿ ಆತಂಕದಲ್ಲಿದ್ದಾರೆ.
ಅವರ ಬಗ್ಗೆ ಟೆಲಿವಿಷನ್‌ಗಳಲ್ಲಿ ಬರುವ ಭಯಾನಕ ದೃಶ್ಯಗಳನ್ನು ನೋಡಿ ಇಲ್ಲಿ ಅವರ ಪಾಲಕರು, ಪೋಷಕರು ಗಾಬರಿಗೆ ಒಳಗಾಗುತ್ತಿzರೆ ಎಂಬುದನ್ನು ಯಾವ ಟಿ.ವಿ. ಚಾನೆಲ್‌ಗಳಿಗೂ ಅರ್ಥ ಮಾಡಿಕೊಳ್ಳುವ ವ್ಯವಧಾನ ಇಲ್ಲವಾಗಿದೆ. ಕನ್ನಡಿಗ, ವಿದ್ಯಾರ್ಥಿ ನವೀನ್ ಸಾವಿನ ನಂತರ ಮೃತದೇಹವನ್ನು ಪದೇ ಪದೆ ತೋರಿಸಲಾಗುತ್ತಿದೆ. ಅಷ್ಟೇ ಅಲ್ಲ, ನವೀನ್ ಸಾವಿಗೀಡಾದ ಸ್ಥಳದ ಬಳಿ ಶೆಲ್ ಬಿದ್ದು ಸೋಟ ಗೊಂಡಿದ್ದನ್ನು ದಿನ ವಿಡೀ ತೋರಿಸಲಾಗುತ್ತಿದೆ. ಶೆಲ್ ದಾಳಿಗಳಿಂದ ಅಲ್ಲಿನ ಕಟ್ಟಡಗಳಿಗೆ ಹಾನಿ ಯಾಗಿರುವುದನ್ನು ಪದೇ ಪದೆ ತೋರಿಸ ಲಾಗುತ್ತಿದೆ.
ಇದರಿಂದ ಪಾಲಕರ ಮನಸ್ಸು ಎಷ್ಟು ಗಾಸಿಗೊಳ್ಳಬಹುದು ಎಂಬ ಅರಿವು ಮಾಧ್ಯಮಗಳಿಗೆ ಇಲ್ಲವೇ? ಉಳಿದ ವಿದ್ಯಾರ್ಥಿಗಳ ಪಾಲಕರು ತಮ್ಮ ಮಕ್ಕಳ ಬಗ್ಗೆ ಚಿಂತಿತರಾಗುವುದಿಲ್ಲವೇ? ನವೀನ್ ಅವರ ಪಾಲಕರನ್ನು ಸಂದರ್ಶಿಸುವ ಪ್ರತಿನಿಽಗಳು ಕೇಳುವ ಪ್ರಶ್ನೆಗಳಂತೂ ಅನಗತ್ಯ ಮತ್ತು ಅತಿರೇಕದಿಂದ ಕೂಡಿವೆ. ಅಲ್ಲಿ ಅವರ ಮಕ್ಕಳು ಶೆಲ್ ದಾಳಿ ಎದುರಿಸುತ್ತಿದ್ದರೆ, ಇಲ್ಲಿ ಅವರ ಪಾಲಕರು ಮಾಧ್ಯಮಗಳ ದಾಳಿ ಎದುರಿಸುವಂತಾಗಿದೆ. ಇದೇ ರೀತಿ ಮುಂದುವರಿದರೆ ಭಾರತದಲ್ಲೂ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆಯೇನೋ ಎಂಬಂತೆ ಭಾಸವಾಗುವು ದರಲ್ಲಿ ಯಾವುದೇ ಅನುಮಾನವಿಲ್ಲ.
ವಿದ್ಯುನ್ಮಾನ ಮಾಧ್ಯಮಗಳು ಇಂಥ ಅತಿರೇಕದ ವರದಿಗಳನ್ನು ಬಿತ್ತರಿಸುವುದನ್ನು ಬಿಟ್ಟು ಅವರ ಪಾಲಕ, ಪೋಷಕರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕಿದೆ. ಅಲ್ಲಿ ಸಿಲುಕಿಕೊಂಡಿರುವ ವಿದ್ಯಾರ್ಥಿಗಳನ್ನು ತಾಯ್ನಾಡಿಗೆ ಕರೆತರಲು ಸರಕಾರದ ಪ್ರಯತ್ನದ ಕುರಿತು ತಿಳಿಸಬೇಕಿದೆ.