ಅಮೋಘ ರಕ್ಷಣಾ ಕಾರ್ಯಾಚರಣೆ
ಉಕ್ರೇನ್ ಅಕ್ಷರಶಃ ರಕ್ತಸಿಕ್ತ ರಾಷ್ಟ್ರವಾಗಿದೆ. ಕಳೆದ ಎರಡು ವಾರಗಳಿಂದ ರಷ್ಯಾದ ನಿರಂತರ ದಾಳಿಯಿಂದ ಉಕ್ರೇನ್ ಬಹುಪಾಲುಅಸ್ತವ್ಯಸ್ತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಉಕ್ರೇನ್‌ನಿಂದ ಭಾರತದ 20 ಸಾವಿರಕ್ಕೂ ಹೆಚ್ಚು ಮಂದಿಯನ್ನು ವಾಪಸು ಕರೆಸಿಕೊಂಡುಬರುವ ಭಾರತದ ಸರಕಾರ ಯೋಜನೆ ‘ಆಪರೇಷನ್ ಗಂಗಾ’.
ಇದೀಗ ಈ ಬೃಹತ್ ರೆಸ್ಕ್ಯೂ ಆಪರೇಷನ್ ಬಹುತೇಕ ಅಂತ್ಯಕ್ಕೆ ಬಂದಿದ್ದು, ಸುಮಾರು ೨೦ ಸಾವಿರಕ್ಕೂ ಹೆಚ್ಚು ಜನರನ್ನು ಉಕ್ರೇನ್ ಯುದ್ಧ ಪೀಡಿತ ಪ್ರದೇಶದಿಂದ ತಮ್ಮ ತವರಿಗೆ ಸುರಕ್ಷಿತವಾಗಿ ತಲುಪಿಸುವಲ್ಲಿ ಭಾರತ ಸರಕಾರ ಯಶಸ್ವಿಯಾಗಿದೆ. ಕೇಂದ್ರ ಸರಕಾರ ಉಕ್ರೇನ್‌ನಲ್ಲಿ ಯುದ್ಧ ಘೋಷಣೆಯಾಗುತ್ತಿದ್ದಂತೆ ತಮ್ಮ ದೇಶದ ಪ್ರಜೆಗಳನ್ನು ವಾಪಸು ಕರೆದುಕೊಂಡು ಬರಲು ರಾಜತಾಂತ್ರಿಕವಾಗಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿತ್ತು.
ಇದರೊಂದಿಗೆ ಇಡೀ ಯೋಜನೆಗೆ ನಾಲ್ಕು ಕೇಂದ್ರ ಸಚಿವರು ಖುದ್ದಾಗಿ ತೆರಳಿ ಯಾವುದೇ ಲೋಪವಾಗದಂತೆ ಎಚ್ಚರ ವಹಿಸಿದ್ದರು. ಉಕ್ರೇನ್‌ಗೆ ವಾಯು ಮಾರ್ಗ ನಿಷೇಧವಾಗು ತ್ತಿದ್ದಂತೆ, ಅಲ್ಲಿನ ನೆರೆ ರಾಷ್ಟ್ರಗಳಲ್ಲಿ ವಿಮಾನಗಳನ್ನು ಕಳುಹಿಸಿ ಅಲ್ಲಿಂದ ಕರೆದುಕೊಂಡುಬರುವ ಕಾರ್ಯ ಭಾರಿ ಆತಂಕದ ನಡುವೆ ಪೂರ್ಣಗೊಂಡಿದೆ. ಹಾಗೇ ನೋಡಿದರೆ ವಿಶ್ವದ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೆರಿಕ, ಜರ್ಮನಿ ಸೇರಿದಂತೆ ಹಲವು ರಾಷ್ಟ್ರಗಳು, ಉಕ್ರೇನ್‌ನಲ್ಲಿರುವ ತಮ್ಮ ಪ್ರಜೆಗಳಿಗೆ ‘ಎಚ್ಚರಿಕೆಯಿಂದ ಬನ್ನಿ’ ಎನ್ನುವ ಸಂದೇಶವನ್ನು ನೀಡಿ ಸುಮ್ಮನಾದವು.
ವಾಪಸು ಕರೆಸಿಕೊಳ್ಳಲು ಯಾವುದೇ ವಿಶೇಷ ವಿಮಾನಗಳನ್ನು ಸಿದ್ಧಪಡಿಸಲಿಲ್ಲ. ಸೂಪರ್ ಪವರ್ ದೇಶವಾಗಿರುವ ಚೀನಾ ಸಹ ತಮ್ಮದೇಶದವರನ್ನು ರಕ್ಷಿಸಿ ಮೊದಲ ಗುಂಪನ್ನು ಕರೆಸಿಕೊಂಡಿದ್ದು ಕಳೆದ ಶನಿವಾರ. ಆದರೆ ಆ ವೇಳೆಗಾಗಲೇ ಭಾರತ ಸರಕಾರ ಸಾವಿರಾರು ಜನರನ್ನು ಕರೆಸಿಕೊಂಡಿತ್ತು. ಈ ಹಿಂದೆ ಹಲವು ಬಾರಿ ಈ ರೀತಿಯ ಆಪರೇಷನ್‌ಗಳನ್ನು ಭಾರತ ಮಾಡಿದೆ. ಆದರೆ ಯುದ್ಧ ಪೀಡಿತ ದೇಶದಿಂದ ಇಷ್ಟು ದೊಡ್ಡ ಸಂಖ್ಯೆಯನ್ನು 15 ರಿಂದ 16 ದಿನದಲ್ಲಿ ಕರೆದುಕೊಂಡು ಬರುವುದು ಸಣ್ಣ ಮಾತಲ್ಲ. ಎಲ್ಲ ಅಡೆತಡೆ ಮೀರಿ, ದೇಶದ ಜನರನ್ನು ಸುರಕ್ಷಿತವಾಗಿ ಕರೆದುಕೊಂಡು ಬರಲು ಕೇಂದ್ರ ಸರಕಾರ, ವಿದೇಶಾಂಗ ಇಲಾಖೆ ತಗೆದುಕೊಂಡ ಕಾರ್ಯ ಶ್ಲಾಘನೀಯ.