ಪರ್ಯಾಯ ತೈಲ ಆಮದು ಅಗತ್ಯ
ಉಕ್ರೇನ್ ಬಿಕ್ಕಟ್ಟಿನ ಕಾರಣ ರಾಜ್ಯದಲ್ಲಿ ಸೂರ್ಯಕಾಂತಿ ಎಣ್ಣೆಯ ಬೆಲೆ ಏರುಗತಿಯಲ್ಲಿದ್ದು, ಒಂದು ವಾರದಲ್ಲಿ ಲೀಟರ್ ದರ ?130ರಿಂದ ?170ಕ್ಕೆ ಹೆಚ್ಚಳವಾಗಿದೆ. ಭಾರತಕ್ಕೆ ಉಕ್ರೇನ್ ದೇಶವು ಸೂರ್ಯಕಾಂತಿ ಎಣ್ಣೆಯನ್ನು ಪೂರೈಸುವ ಪ್ರಮುಖ ದೇಶವಾಗಿದೆ.ಕರ್ನಾಟಕವು 25000-30000 ಟನ್ ಸೂರ್ಯಕಾಂತಿ ಎಣ್ಣೆಯನ್ನು ಆಮದು ಮಾಡಿ ಕೊಳ್ಳುತ್ತದೆ.
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಿಂದಾಗಿ ಪೂರೈಕೆಯ ಸರಪಳಿಯಲ್ಲಿ ವ್ಯಾಪಾ ರಸ್ಥರಿಗೆ ಅಡೆತಡೆ ಎದುರಾಗಿದೆ. ಇದರಿಂದ ಸೂರ್ಯಕಾಂತಿ ಎಣ್ಣೆಯ ಬೆಲೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಯುದ್ಧವು ಉಲ್ಬಣಗೊಳ್ಳುತ್ತಿರುವುದರಿಂದ ಮುಂಬರುವ ದಿನಗಳಲ್ಲಿ ಎಣ್ಣೆಯ ಬಿಸಿ ಮತ್ತಷ್ಟು ತಟ್ಟಲಿದೆ ಎನ್ನಲಾಗಿದೆ. ಪೂರೈಕೆಯಲ್ಲಿನ ಕೊರತೆಯು ಬೆಲೆಯ ಹೆಚ್ಚಳಕ್ಕೆ ಕಾರಣವಾಗಿದೆ. ಈ ಬೆಲೆ ಏರಿಕೆಯ ಪರಿಣಾಮ ಇನ್ನೂ ಚಿಲ್ಲರೆ ವ್ಯಾಪಾರಿಗಳಿಗೆ ತಟ್ಟುವ ಮೊದಲೇ ಬಹುತೇಕ ಹೋಟೆಲ, ಬೇಕರಿಗಳು ಸದ್ದು, ಸೂಚನೆ ಇಲ್ಲದೆ ತಿನಿಸು, ಪಾನೀಯಗಳ ದರ ಹೆಚ್ಚಿಸಿಕೊಂಡಿವೆ.
ಈ ಬಗ್ಗೆ ಪ್ರಶ್ನಿಸಿದರೆ ‘ಹಿಂದೆ ಕೋವಿಡ್‌ನಿಂದ ನಷ್ಟವಾಗಿದೆ, ಮುಂದೆ ಅಡುಗೆ ಎಣ್ಣೆಯ ಬೆಲೆ ಹೆಚ್ಚಾಗಲಿದೆ’ ಎಂಬ ಕಾರಣಗಳನ್ನು ನೀಡುತ್ತಾರೆ ಎಂಬ ವರದಿಯಾಗಿದೆ. ಕೋವಿಡ್ ನಿಯಂತ್ರಣ ನಿಮಿತ್ತದ ಲಾಕ್‌ಡೌನ್ ಬಿಸಿ ಯಾರನ್ನು ತಾನೇ ಬಿಟ್ಟಿದೆ? ಎಲ್ಲರೂ ಕಷ್ಟ, ನಷ್ಟ ಅನುಭವಿಸಿದವರೇ. ಹಾಗಾಗಿ ಹೋಟೆಲ್ ಮಾಲೀಕರು ಬೆಲೆ ಏರಿಸಿದ್ದಾರೆ. ಆದರೆ ಗ್ರಾಹಕರು ಕೂಡ ಕೋವಿಡ್ ಅಲೆಗೆ ಸಿಲುಕಿ ದವರಲ್ಲವೇ? ಎಂಬುದನ್ನು ಹೋಟೆಲ್ ಮಾಲೀಕರು ಅರ್ಥ ಮಾಡಿಕೊಳ್ಳಬೇಕಿದೆ.
ಯುದ್ಧ ಸದ್ಯಕ್ಕೆ ನಿಲ್ಲುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಹೀಗೇ ಯುದ್ಧ ಮುಂದುವರಿದರೆ ಮುಂದಿನ ದಿನಗಳಲ್ಲಿ ಖಾದ್ಯ ತೈಲ, ಪೆಟ್ರೋಲ, ಡಿಸೇಲ್ ಬೆಲೆಯಲ್ಲೂ ಇನ್ನಷ್ಟು ಹೆಚ್ಚಬಹುದೆನ್ನುವ ಆತಂಕವಿದೆ. ಕೋವಿಡ್ ಹೊಡೆತದಿಂದ ಇನ್ನೂ ಚೇತರಿಸಿಕೊಳ್ಳದೆ ಜನರ ಜೀನವದ ಮೇಲೆ ಈ ಬೆಲೆ ಏರಿಕೆ ತೀವ್ರ ಪರಿಣಾಮ ಬೀರಲಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಜನಸಾಮಾನ್ಯರ ಹಿತದೃಷ್ಟಿಯಿಂದ ಖಾದ್ಯ ತೈಲವನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವುದು, ಅಕ್ರಮ ದಾಸ್ತಾನು ತಡೆಗಟ್ಟುವುದು, ನ್ಯಾಯಬೆಲೆ ಅಂಗಡಿಗಳಮೂಲಕ ಪೂರೈಸುವಂತಹ ಕ್ರಮಗಳನ್ನು ಸರಕಾರ ಕೈಗೊಳ್ಳಬೇಕಿದೆ. ಆ ಮೂಲಕ ಬಡವರ ಮೇಲಿನ ಹೊರೆಯನ್ನು ಕಡಿಮೆ ಮಾಡಲುಕಾರ್ಯಪ್ರವೃತ್ತರಾಗಬೇಕಿದೆ.