ಪ್ರತಿಪಕ್ಷಗಳೇ ಜಗಳವಾಡಿದರೇ ಹೇಗೆ?
ವಿಧಾನಸಭೆ, ಪರಿಷತ್ ಅಧಿವೇಶನಗಳಲ್ಲಿ ಆಡಳಿತ-ಪ್ರತಿಪಕ್ಷಗಳು ಸಾಮಾನ್ಯವಾಗಿ ವಾದ ಪ್ರತಿವಾದಗಳೊಂದಿಗೆ ಕಿತ್ತಾಡಿಕೊಳ್ಳುವುದುಸಾಮಾನ್ಯದ ಸಂಗತಿ. ಇದನ್ನು ಪ್ರತಿ ಅಽವೇಶನದಲ್ಲೂ ಎಲ್ಲರೂ ಕೇಳಿದ್ದೇವೆ, ನೋಡಿದ್ದೇವೆ.
ಆದರೆ ವಿಧಾನಸಭೆಯಲ್ಲಿ ಬುಧವಾರ ನಡೆದಿದ್ದೇ ಬೇರೆ. ಎರಡೂ ಪ್ರತಿಪಕ್ಷಗಳೇ ಕಿತ್ತಾಡಿಕೊಂಡಿದ್ದು, ಅಚ್ಚರಿ ಮೂಡಿಸಿತು. ಅಧಿವೇಶನದಲ್ಲಿ ಸರಕಾರದ ನಡೆ, ರಾಜ್ಯದ ಸಮಸ್ಯೆಗಳು, ಅಭಿವೃದ್ಧಿ ಕಾರ್ಯಗಳು ಹಾಗೂ ಹಲವು ವಿಷಯಗಳನ್ನಿಟ್ಟುಕೊಂಡು ಪ್ರತಿಪಕ್ಷಗಳು, ಸರಕಾರ ಪ್ರಶ್ನಿಸುವ ಮೂಲಕ ಇಕ್ಕಟ್ಟಿಗೆ ಸಿಲುಕಿಸಬೇಕು. ಜತೆಗೆ ಪರಿಹಾರಕ್ಕಾಗಿ ಸರಕಾರವನ್ನು ಒತ್ತಾಯಿಸಬೇಕು. ಇದನ್ನು ಬಿಟ್ಟು ವೈಯಕ್ತಿಕ ರಾಜಕೀಯ ದ್ವೇಷಗಳನ್ನಿಟ್ಟುಕೊಂಡು, ಅದನ್ನು ತಂದು ಸದನದಲ್ಲಿ ಹೇಳಿಕೊಂಡು ಕಿತ್ತಾಡಿದರೆ ಹೇಗೆ? ರಾಜಕಾರಣಿ ಗಳಾದವರು, ತಮ್ಮ ರಾಜಕೀಯ ಹಾಗೂ ರಾಜಕಾರಣವನ್ನು ಸದನದಿಂದ ಹೊರಗೆ ಇಟ್ಟುಕೊಳ್ಳಬೇಕು.
ಸದನ ಇರುವುದು ರಾಜ್ಯದ ಜನರ ಸಮಸ್ಯೆಗಳ ಚರ್ಚಿಸಿ, ಆಗುಹೋಗುಗಳನ್ನು ಕಂಡುಕೊಂಡು ಪರಿಹರಿಸುವುದಕ್ಕಾಗಿದೆ ಎಂಬುದನ್ನು ರಾಜಕಾರಣಿಗಳು ಅರಿತುಕೊಳ್ಳ ಬೇಕು. ಇಂದಿನ ಜೆಡಿಎಸ್-ಕಾಂಗ್ರೆಸ್ ಕಿತ್ತಾಟ ನೋಡಿದರೆ, ವೈಯಕ್ತಿಕ ಟೀಕೆಗಳನ್ನು ಮಾಡಿಕೊಂಡು ಸದನದ ಸಮಯವನ್ನು ಹಾಳು ಮಾಡುತ್ತಿದ್ದಾರೆ ಎಂದು ರಾಜ್ಯದ ಜನರಿಗೆ ಗೊತ್ತಾಗುವುದಿಲ್ಲ ಎಂದಲ್ಲ.
ಸದನದ ಹೊರಗಿನ ವಿಷಯವನ್ನು ಸದನದ ಹೊರಗೆಯೇ ಚರ್ಚಿಸಬೇಕೆ ಹೊರತು, ಒಳಗಲ್ಲ. ಹೀಗಾಗಿ ಇನ್ನು ಮುಂದಾದರೂ ನಾಯಕ ರಾದವರು ಅರ್ಥ ಮಾಡಿಕೊಂಡು, ತಮ್ಮ ಪಕ್ಷಗಳ ಜಗಳವನ್ನು ಸದನದೊಗಳಗೆ ತರದೇ ರಾಜ್ಯದ ಜನರ ಸಮಸ್ಯೆಗಳ ಕುರಿತು ಚಿರ್ಚಿಸಿ, ಅವುಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಯತ್ನಿಸಬೇಕು.