ಆಪ್ ಮುಂದಿವೆ ಹೊಸ ಸವಾಲುಗಳು
ಪಂಚರಾಜ್ಯಗಳಲ್ಲಿ ನಡೆದ ಚುನಾವಣೆಯ ಜನಾದೇಶ ಹೊರಬಿದ್ದಿದೆ. ಬಿಜೆಪಿ ನಾಲ್ಕು ರಾಜ್ಯಗಳಲ್ಲಿ ಜಯಗಳಿಸಿದರೆ, ಕಾಂಗ್ರೆಸ್ ಭದ್ರ ಕೋಟೆಯಲ್ಲಿ ಆಪ್ ಜಯಭೇರಿ ಬಾರಿಸಿದೆ. ಉಳಿದಂತೆ ಎಸ್‌ಪಿ, ಕಾಂಗ್ರೆಸ್, ಬಿಎಸ್‌ಪಿ ಸೇರಿದಂತೆ ಉಳಿದ ಪಕ್ಷಗಳು ಸಂಪೂರ್ಣ ವಾಗಿನೆಲಕ್ಕಚ್ಚಿವೆ.
ಪಂಜಾಬ್‌ನಲ್ಲಿ ಆಪ್, ಹೊಸ ಪಕ್ಷವಾಗಿದ್ದರೂ ಒಟ್ಟು 117 ಸ್ಥಾನಗಳ ಪೈಕಿ 92 ಗೆಲುವು ಸಾಧಿಸಿದೆ. ಈ ಮೂಲಕ ಆಪ್ ಪಂಜಾಬ್‌ನಲ್ಲಿ ಸರಕಾರ ರಚಿಸುವುದು ಖಚಿತವಾಗಿದೆ. ಪಂಜಾಬ್‌ನಲ್ಲಿ ಆಪ್ ಜಯಭೇರಿಗೆ, ಅದರ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ದೆಹಲಿ ಆಡಳಿತದ ಪ್ರಭಾವವೇ ಕಾರಣ ಎನ್ನಲಾಗುತ್ತಿದೆ. ದೆಹಲಿ ಹಾಗೂ ಪಂಜಾಬ್‌ಗಳ ಗಡಿಗಳಷ್ಟೇ ಬೇರೆ, ಆದರೆ ದೆಹಲಿಯಲ್ಲಿ ನಡೆಯುವ ಪ್ರತಿಯೊಂದು ಆಡಳಿತಾತ್ಮಕ ಬೆಳವಣಿಗೆಗಳು ಪಂಜಾಬ್ ಅನ್ನು ತಲುಪದೇ ಇರುವುದಿಲ್ಲ. ಹೀಗಾಗಿ ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರು ತೆಗೆದುಕೊಂಡಿರುವ ನಿರ್ಧಾರಗಳು ಜನರಿಗೆ ಹಿತ ವೆನಿಸಿವೆ. ಅಂತಹದೇ ಉತ್ತಮ ಆಡಳಿತವನ್ನು ಜನರು ಪಂಜಾಬ್‌ನಲ್ಲಿಯೂ ನಿರೀಕ್ಷಿಸಿಯೇ ತಮ್ಮ ಮತವನ್ನು ಆಪ್‌ಗೆ ಒತ್ತಿದ್ದಾರೆ.
ಹೀಗಾಗಿ ದೆಹಲಿಯ ನಂತರ ಬೇರೆ ರಾಜ್ಯವೊಂದರಲ್ಲಿ ಮೊದಲ ಬಾರಿಗೆ ಆಡಳಿತ ಚುಕ್ಕಾಣಿ ಹಿಡಿದಿರುವ ಆಪ್‌ನ ಎದುರು ಸಾಕಷ್ಟು ಸವಾಲುಗಳಿವೆ. ಪಂಜಾಬ್‌ನಲ್ಲಿ ಹೆಚ್ಚಿನವರು ರೈತರೇ ಇದ್ದು, ಅವರ ಸಂಕಷ್ಟಗಳನ್ನು ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಉತ್ತಮ ಆಡಳಿತ ನೀಡುವ ಹೊಣೆಯಂತೂ ಆಪ್ ಮೇಲಿದೆ. ಅಲ್ಲದೇ ದೆಹಲಿಯಲ್ಲಿ ತೆಗೆದುಕೊಂಡಿರುವ ನಿರ್ಧಾರಗಳು, ಪಂಜಾಬ್ ನಲ್ಲಿ ಯಶಸ್ಸು ತರಬಹುದು ಎಂದು ಮುಖ್ಯಸ್ಥ ಕೇಜ್ರಿವಾಲ್ ಅವರು ಭಾವಿಸಬೇಕಿಲ್ಲ.
ದೆಹಲಿ ಪರಿಸ್ಥಿತಿಯೇ ಬೇರೆ, ಪಂಜಾಬ್‌ನ ಪರಿಸ್ಥಿತಿಯೇ ಬೇರೆಯಾಗಿದೆ. ಅಲ್ಲದೇ ಉಚಿತಗಳನ್ನೇ ನೀಡಿರುವ ಆಪ್‌ಗೆ, ಬೊಕ್ಕಸಕ್ಕೆ ಆದಾಯವನ್ನು ಕ್ರೋಢಿಕರಣಗೊಳಿಸುವ ಹಾದಿಯನ್ನೂ ಕಂಡುಕೊಳ್ಳಬೇಕಿದೆ. ಹೀಗಾಗಿ ಜನರ ನಾಡಿಮಿಡಿತವನ್ನು ಅರಿತುಕೊಂಡು ಆಪ್, ಪಂಜಾಬ್‌ಗೆ ಒಂದು ಉತ್ತಮ ಆಡಳಿತವನ್ನು ನೀಡಬೇಕಿದೆ. ಕಾಂಗ್ರೆಸ್‌ನಿಂದ ರೋಸಿ ಹೋಗಿರುವ ಜನರು ಕೂಡ ಅದನ್ನೇ ನಿರೀಕ್ಷಿಸು ತ್ತಿದ್ದಾರೆ. ಅಲ್ಲದೇ ಜನರು ತಮ್ಮ ಪಕ್ಷಗವನ್ನು ಏಕೆ ತಿರಸ್ಕರಿಸಿದರು ಎಂಬುದನ್ನು ಅರ್ಥ ಮಾಡಿಕೊಂಡು, ಸೋಲನುಭವಿಸಿದ ಪಕ್ಷಗಳ ನಾಯಕರು ಮುಂದಿನ ಹೆಜ್ಜೆಯಿಡಬೇಕು