ವಿವೇಚನೆಯೇ ಇಲ್ಲದ ಯುದ್ಧ
ಉಕ್ರೇನ್ ಮೇಲೆ ರಷ್ಯಾ ದಾಳಿ ಶುರುವಾಗಿ ಬರೋಬ್ಬರಿ 20 ದಿನ ಕಳೆದಿದೆ. ದಿನದಿಂದ ದಿನಕ್ಕೆ ಯುದ್ಧದ ಭೀಕರತೆಗೆ ಸಾವು ನೋವುಗಳು ಹೆಚ್ಚಾಗುತ್ತಲೇ ಇವೆ. ಯುದ್ಧದ ಪರಿಸ್ಥಿತಿಯನ್ನು ನೋಡಿದರೆ ಸಧ್ಯಕ್ಕೆ ಈ ಸಮರ ಕೊನೆಯಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.
ರಷ್ಯಾ ಮತ್ತು ಉಕ್ರೇನ್ ದೇಶಗಳೆರಡೂ ಜಗತ್ತಿನ ವಿವಿಧ ದೇಶಗಳಿಗೆ ಹಲವು ಸಾಮಗ್ರಿ ಗಳನ್ನು ಪೂರೈಸುತ್ತವೆ. ಗೋಧಿ, ಸೂರ್ಯಕಾಂತಿ ಎಣ್ಣೆ, ಪೆಟ್ರೋಲಿಯಂ ಉತ್ಪನ್ನಗಳು, ರಕ್ಷಣಾ ಸಾಮಗ್ರಿಗಳು… ಹೀಗೆ ವಿವಿಧ ವಸ್ತುಗಳನ್ನು ಈ ದೇಶಗಳು ರಫ್ತು ಮಾಡುತ್ತವೆ. ರಷ್ಯಾದ ಸೇನೆಯು ಉಕ್ರೇನ್‌ನಲ್ಲಿ ಮಾಡಬಹುದಾದ ವಿವೇಕರಹಿತ ಧ್ವಂಸವು ಉಕ್ರೇನ್‌ನ ಉತ್ಪಾದಕ ಸಾಮರ್ಥ್ಯವನ್ನು ಕುಗ್ಗಿಸಿದೆ. ಅತಿಕ್ರಮಣದ ಕಾರಣಕ್ಕಾಗಿ ರಷ್ಯಾದ ಮೇಲೆ ಹೇರಲಾಗುವ ನಿರ್ಬಂಧಗಳಿಂದಾಗಿ ಆ ದೇಶದ ರಫ್ತು ಕೂಡ ಕುಂಠಿತಗೊಂಡಿದೆ.
ಗೋಧಿ, ಸೂರ್ಯಕಾಂತಿ ಎಣ್ಣೆ, ಪೆಟ್ರೋಲಿಯಂ ಉತ್ಪನ್ನಗಳಂತಹ ಅಗತ್ಯ ವಸ್ತುಗಳ ಕೊರತೆ ಉಂಟಾಗಿ, ಅವುಗಳ ಬೆಲೆ ಏರಿಕೆಯಾಗಿ, ಜಗತ್ತಿನ ಎಡೆಯೂ ಜನರ ಬದುಕು ದುರ್ಬರವಾಗುತ್ತಿದೆ. ಹೀಗಾಗಿ ಈ ಯುದ್ಧದ ಪರಿಣಾಮವನ್ನು ಉಕ್ರೇನ್-ರಷ್ಯಾ ಮಾತ್ರ ವಲ್ಲ ಇಡೀ ಜಗತ್ತು ಅನುಭವಿಸುವಂತಾಗಿದೆ. ಸಾರ್ವಭೌಮ ದೇಶವೊಂದರ ಮೇಲೆ ಈ ರೀತಿಯ ದೀರ್ಘಾವಧಿಯ ಅಮಾನುಷ ದಾಳಿಯು ಒಪ್ಪತಕ್ಕ ವಿಷಯವೇ ಅಲ್ಲ. ಈ ಸಂಘರ್ಷ ಮುಂದುವರಿದರೆ 50 ಲಕ್ಷ ಜನರು ನಿರಾಶ್ರಿತರಾಗಬಹುದು ಎಂದು ವಿಶ್ವಸಂಸ್ಥೆ ಅಂದಾಜಿಸಿದೆ. ಆದರೆ, ಪುಟಿನ್ ಅವರು ಇದಾವುದನ್ನೂ ಲೆಕ್ಕಿಸುತ್ತಿಲ್ಲ. ಉಕ್ರೇನ್ ನ್ಯಾಟೊ ಸೇರುವುದನ್ನು ತಡೆಯುವುದೇ ಪುಟಿನ್  ಉದ್ದೇಶ.
ಮಾತುಕತೆ ಮತ್ತು ಸಂಧಾನದ ಮೂಲಕ ಪರಿಹರಿಸಲು ಸಾಧ್ಯವಿಲ್ಲದಂತಹ ಸಮಸ್ಯೆಯೂ ಇಲ್ಲಿಲ್ಲ. ಆದರೆ, ಸಮಸ್ಯೆಗಳಿಗೆ ಯುದ್ಧಪರಿಹಾರವಲ್ಲ ಎಂಬುದನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗೆ ಅರ್ಥ ಮಾಡಿಸುವಂತಹ ಜಗತ್ತಿನಲ್ಲಿ ಯಾವ ನಾಯಕರೂ ಇಲ್ಲದಂತಾಗಿದೆ. ಜಗತ್ತಿನ ವಿವಿಧ ದೇಶಗಳು ಮಧ್ಯಪ್ರವೇಶಿಸಿ ಸಾವು-ನೋವು, ನಾಶ-ನಷ್ಟದ ವಿವೇಚನೆಯೇ ಇಲ್ಲದ ಈ ಯುದ್ಧವನ್ನು ತಡೆಗಟ್ಟಬೇಕಿರುವುದು ಸಧ್ಯದ ಅನಿವಾರ್ಯ. ಇಲ್ಲವಾದಲ್ಲಿ ಕರೋನಾ ದಾಳಿಯಿಂದ ಕಂಗೆಟ್ಟಿರುವ ಇಡೀ ಮನುಕುಲಕ್ಕೆ ಈ ಯುದ್ಧ ಮಾರಕವಾಗುತ್ತದೆ.