ಪ್ರತಿ ಗ್ರಾಮಕ್ಕೂ ಬಸ್ ವ್ಯವಸ್ಥೆ ಕಲ್ಪಿಸಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ವಹಿಸಿಕೊಂಡ ಕೆಲ ದಿನಗಳಲ್ಲೇ ಖಾಸಗಿ ಸುದ್ದಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ, ಅಲ್ಲಿ ಸ್ಪರ್ಧಿಸಿದ್ದ ಗಾಯಕನ ಗ್ರಾಮಕ್ಕೆ ಬಸ್ ಸಂಪರ್ಕ ವ್ಯವಸ್ಥೆ ಕಲ್ಪಿಸಿದ್ದು ರಾಜ್ಯಾದ್ಯಂತ ಸುದ್ದಿಯಾಗಿತ್ತು, ಮೆಚ್ಚುಗೆಗೂ ಪಾತ್ರವಾಗಿತ್ತು. ಆ ಕಾರ್ಯಕ್ರಮದಲ್ಲಿ ‘ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ನಾವಿನ್ನೂ ಗ್ರಾಮೀಣ ಭಾಗಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿಲ್ಲ ಎಂಬುದು ನೋವಿನ ಸಂಗತಿ’ ಎಂದು ಸಿಎಂ ಮಮ್ಮಲ ಮರುಗಿದ್ದರು.
ಪಾವಗಡ ತಾಲೂಕಿನ ಪಳವಳ್ಳಿಕಟ್ಟೆಯಲ್ಲಿ ಬಸ್ ಅಪಘಾತವಾದ ಸುದ್ದಿ ಕೇಳಿದ ತಕ್ಷಣ ಈ ಘಟನೆ ನೆನಪಿಗೆ ಬಂತು. ಸಾರಿಗೆ ಇಲಾಖೆ ನಷ್ಟದಲ್ಲಿದ್ದರೂ ಅದೊಂದು ಸಾರ್ವ ಜನಿಕ ಸೇವೆ ಆಗಿದ್ದರಿಂದ ಪ್ರತಿ ಗ್ರಾಮಕ್ಕೂ ಬಸ್ ವ್ಯವಸ್ಥೆ ಕಲ್ಪಿಸುವುದು ಸರಕಾರದ ಆದ್ಯ ಕರ್ತವ್ಯ. ಆದರೆ ಈವರೆಗೂ ರಾಜ್ಯದ ಪ್ರತಿ ತಾಲೂಕಿನ ಶೇ.25ರಷ್ಟು ಗ್ರಾಮ ಗಳಿಗೆ ಬಸ್ ಸಂಪರ್ಕ ಕಲ್ಪಿಸಲು ಸಾಧ್ಯವಾಗಿಲ್ಲ. ಈ ಹಿಂದಿನ ಮತ್ತು ಈಗಿನ ಸರಕಾರದ ಇಚ್ಛಾಶಕ್ತಿ ಕೊರತೆಯಿಂದಲೇ ಸಾರಿಗೆ ಸಂಪರ್ಕ ಕಲ್ಪಿಸುವಲ್ಲಿ ಹಿನ್ನಡೆ ಯಾಗಿದೆ.
ಪಳವಳ್ಳಿಕಟ್ಟೆ ದುರಂತಕ್ಕೆ ಸಾರಿಗೆ ಇಲಾಖೆಯ ಕರ್ತವ್ಯಲೋಪ ಮತ್ತು ದಿವ್ಯನಿರ್ಲಕ್ಷ್ಯವೇ ಕಾರಣ. ಬಸ್ಸಿನೊಳಗೆ ಪ್ರಯಾಣಿಕರು ಕಿಕ್ಕಿರಿದುತುಂಬಿದ್ದರು. ಟಾಪ್ ತುಂಬಾ ಜನ ಕೂತಿದ್ದರು. ಮಕ್ಕಳು, ಮಹಿಳೆಯರು, ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಜನ ಹೆಚ್ಚಿದ್ದರೂ ಈಮಾರ್ಗದಲ್ಲಿ ಬಸ್‌ಗಳ ಸಂಚಾರ ಸರಿಯಾಗಿಲ್ಲವೇಕೆ? ಎಂಬ ಬಗ್ಗೆ ತನಿಖೆಯಾಗಬೇಕಿದೆ, ಕರ್ತವ್ಯಲೋಪ ಎಸಗಿದ ಎಲ್ಲ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಿದೆ.
ಎಷ್ಟೋ ಕನಸುಗಳನ್ನು ಕಟ್ಟಿಕೊಂಡಿದ್ದ ವಿದ್ಯಾರ್ಥಿಗಳ ಜೀವಗಳು ಈ ಅಪಘಾತದಲ್ಲಿ ಬಲಿಯಾಗಿವೆ. ಸರಕಾರ ಕೂಡಲೇ ಆ ಕುಟುಂಬ ಗಳಿಗೆ ಕನಿಷ್ಠ 25 ಲಕ್ಷ ರು. ಪರಿಹಾರ ನೀಡಬೇಕು. ಈ ಅಪಘಾತದಲ್ಲಿ ಗಾಯಗೊಂಡವರನ್ನು ಬೆಂಗಳೂರು, ತುಮಕೂರು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅವರಿಗೆ ಅಲ್ಲಿ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ವರದಿಗಳು ಮಾಧ್ಯಮಗಳಲ್ಲಿ ಬರುತ್ತಿವೆ. ಸರಕಾರ ಕೂಡಲೇ ತುರ್ತು ಗಮನ ಹರಿಸಿ, ಒಬ್ಬ ಉಸ್ತುವಾರಿ ಅಧಿಕಾರಿಯನ್ನು ನಿಯೋಜಿಸಿ, ಎಲ್ಲರಿಗೂ ಸಂಪೂರ್ಣವಾಗಿ ಉಚಿತ ಚಿಕಿತ್ಸೆ ಕೊಡಿಸಬೇಕಿದೆ. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕಿದೆ.