ಪಾಕಿಸ್ತಾನದ ಕ್ರಿ-ಕೆಟ್ಟಾಟದಲ್ಲಿ ಔಟ್!
ಹಾಗೆ ನೋಡಿದರೆ ಪಾಕಿಸ್ತಾನದಲ್ಲಿ ಇಷ್ಟು ದಿನ ಸಂಭಾವಿತ ಕ್ರಿಕೆಟಿಗ ಇಮ್ರಾನ್ ಖಾನ್ ಪ್ರಧಾನಿ ಹುದ್ದೆಯಲ್ಲಿದ್ದುದೇ ಹೆಚ್ಚು.ಏಕೆಂದರೆ ಆ ದೇಶದ ಇತಿಹಾಸದಲ್ಲಿಯೇ ಈವರೆಗೆ ಯಾರೊಬ್ಬರೂ ಫುಲ್ ಓವರ್ (ಪೂರ್ಣವಧಿ) ಬ್ಯಾಟಿಂಗ್ (ಅಧಿಕಾರ) ಮಾಡಿದ್ದೇ ಇಲ್ಲ.
ಇಡೀ ಪಾಕಿಸ್ತಾನವನ್ನೇ ಬದಲಿಸಿಬಿಡುತ್ತೇನೆಂಬ ಹುಚ್ಚು ಕನಸಿನಲ್ಲಿ ಪ್ರಧಾನಿ ಹುದ್ದೇ ಗೇರಿದ ಇಮ್ರಾನ್‌ಗೆ ದೇಶದ ‘ರಾಜಕೀಯದ ಪಿಚ್’ನ ಅರಿವು ಸ್ವಲ್ಪವೂ ಇಲ್ಲದಿದ್ದುದು ಅರಿವಾಗಲು ತೆಗೆದುಕೊಂಡು ಸಮಯ ತುಸು ಹೆಚ್ಚೇ. ಬಹುಶಃ ಅಂತಾರಾಷ್ಟ್ರೀಯ ಕ್ರೀಡಾಂಗಣವನ್ನಷ್ಟೇ ಕಂಡು ಅರಿವಿದ್ದ ಅವರಿಗೆ ಪಾಕ್ ಮಿಲಿಟರಿಯ ಜತೆಗಿನ ‘ಗಲ್ಲಿ ಕ್ರಿಕೆಟ್’ ಹೊಸತೇ. ಅದರಲ್ಲೂ ಅಘೋಷಿತ ಮಿಲಿಟರಿ ಭಾಗವಾದ ಹಲವು ಉಗ್ರ ಪಂಗಡಗಳು, ಅಥವಾ ಉಗ್ರರ ಭಾಗವಾದ ಸೇನಾ ಸದಸ್ಯರೂ ಕಾಮೆಂಟ್ರೇಟರ್, ಅಂಪೈರುಗಳು ಆಗುತ್ತಾರೆ.
ಇನ್ನೂ ಬೇಕೆಂದರೆ ಯಾರು ಬೇಕಿದ್ದರೂ ಮಾರಕ ಬೌಲಿಂಗ್‌ಗೂ ಇಳಿಯುತ್ತಾರೆ. ಕೊನೆಗೆ ಪಂದ್ಯ ಸವಿಯುತ್ತ, ಮನರಂಜನೆ ಗಾಗಿ ಕೂತ ಪ್ರೇಕ್ಷಕರೂ ನೇರವಾಗಿ ಮೈದಾನಕ್ಕೂ ನುಗ್ಗುತ್ತಾರೆ. ಇಷ್ಟಕ್ಕೂ ತಂಡದ ಆಯ್ಕೆಗೆ ಇರುವುದು ಪಾಶ್ಚಿಮಾತ್ಯ ಬಲಾಢ್ಯ ದೇಶಗಳ ಆಯ್ಕೆ ಸಮಿತಿ. ಅಮೆರಿಕದಂಥ ದೇಶಗಳು ಅಲ್ಲಿನ ಸರಕಾರವೆಂಬ ಪಂದ್ಯಾವಳಿಗೆ ತಂಡವನ್ನಷ್ಟೇ ಆಯ್ಕೆ ಮಾಡುವು ದಿಲ್ಲ.
ಬದಲಿಗೆ ಮ್ಯಾಚ್ ಅನ್ನೂ ಮೊದಲೇ ಫಿಕ್ಸ್ ಮಾಡುತ್ತವೆ. ತಾನು ಪ್ರಧಾನಿ. ಟೀಮ್ ಕ್ಯಾಪ್ಟನ್. ಬ್ಯಾಟಿಂಗ್ ಕ್ರಮಾಂಕ, ಓವರ್ ಡಿಕ್ಲೇರ್, ಬೌಲರ್ ಇತ್ಯಾದಿಗಳನ್ನೆಲ್ಲ ನಾನೇ ನಿರ್ಧರಿಸುವುದು ಎನ್ನುವಂತೆಯೇ ಇಲ್ಲ. ಎಲ್ಲವೂ ಸೂತ್ರದ ಗೊಂಬೆಯಂತೆಯೇ ಆಡಬೇಕೆಂಬ ಗಲ್ಲಿ ಕ್ರಿಕೆಟ್‌ನ ಅರಿವು ಇಮ್ರಾನ್‌ಗೆ ಇರದಿರುವುದು ಸ್ಪಷ್ಟ. ಪಾಕ್ ರಾಜಕೀಯ ಕ್ರಿ-ಕೆಟ್ಟಾಟದಲ್ಲಿ ಔಟು ಔಟಲ್ಲ. ಬೌಂಡರಿ ಲೈನ್ ದಾಟಿದರೆ ಔಟ್. ಇಮ್ರಾನ್ ಕೊನೆ ದಿನಗಳಲ್ಲಿ ಚೀನಾದ ‘ಚಿಯರ್ ಗರ್ಲ್ಸ್’ ಆಕರ್ಷಣೆಗೆ ಬಿದ್ದು, ಅಬ್ಬರದ ಆಟಆಡಲು ಹೋಗಿ ಬೌಂಡರಿ ದಾಟಿದ್ದೇ ವಿಕೆಟ್ ಕಳೆದುಕೊಳ್ಳಲು ಕಾರಣ ಎಂಬುದರಲ್ಲಿ ಅನುಮಾನವಿಲ್ಲ.
ರಷ್ಯಾದ ಬೌಂಡರಿ ಲೈನ್‌ವರೆಗೆ ತಮ್ಮ ಅಧಿಕಾರದ ಬೌಲ್ ಅನ್ನು ಅಟ್ಟಿದ್ದೇ ಮುಳುವಾಯಿತು. ಬೆಟರ್ ಇಮ್ರಾನ್ ನಂಥವರು ಆಟಕ್ಕಿಳಿಯುವ ಮೊದಲು ಪಂದ್ಯದ ನಿಯಮಾವಳಿಯನ್ನು ಅರಿತುಕೊಳ್ಳಬೇಕಿತ್ತು. ಹೇಳಿ ಕೇಳಿ ಅದು ಪಾಕಿಸ್ತಾನ. ಅದೇ ಬೇರೆ, ಅಲ್ಲಿನ ರಾಜಕೀಯ ಆಟದ ರೂಲ್ಸ್‌ಗಳೇ ಬೇರೆ; ಅಲ್ಲವೇ?