ಅಮಾಯಕರ ಸಾವು ನಿಲ್ಲಲಿ
ಉಕ್ರೇನಿನ ರೈಲು ನಿಲ್ದಾಣದ ಮೇಲೆ ರಷ್ಯಾವು ರಾಕೆಟ್ ದಾಳಿ ನಡೆಸಿದ್ದರಿಂದಾಗಿ, ಸುಮಾರು ೪೦ ಜನರು ನಿನ್ನೆ ಸತ್ತಿದ್ದಾರೆಂದುವರದಿಯಾಗಿದೆ. ಒಂದು ತಿಂಗಳಿನಿಂದ ನಡೆಯುತ್ತಿರುವ ಈ ಯುದ್ಧದಿಂದಾಗಿ, ಅಪಾರ ಪ್ರಮಾಣದ ಹಾನಿ, ಸಾಕಷ್ಟು ಸಾವು ನೋವುಗಳುವರದಿಯಾಗುತ್ತಿದ್ದು, ನಿನ್ನೆ ನಡೆದಂತಹ ಇಂತಹ ದಾಳಿಗಳು ಕೇವಲ ಒಂದು ಅಂಕಿ ಅಂಶದ ರೂಪವನ್ನು ತಾಳುತ್ತಿರುವುದು ಒಂದು ಕಟು ವಾಸ್ತವ.
ಪ್ರತಿದಿನವೆಂಬಂತೆ ರಷ್ಯಾ ಸೇನೆಯು ಉಕ್ರೇನಿನ ಮೇಲೆ ನಡೆಸುತ್ತಿರುವ ಬರ್ಬರ ದಾಳಿಯಿಂದ ಸಾಯುತ್ತಿರುವವರ ಕುರಿತು ವ್ಯಕ್ತವಾಗುತ್ತಿರುವ ಕಾಳಜಿ, ಕನಿಕರ ಮತ್ತು ಇದರ ವಿರುದ್ಧ ಖಂಡನೆಗಳು ‘ಲಿಪ್ ಸಿಂಪೆತಿ’ ಮಟ್ಟವನ್ನು ಮುಟ್ಟಿವೆ.
ವಿಶ್ವದ ಬಹುಪಾಲು ರಾಷ್ಟ್ರಗಳು ರಷ್ಯಾದ ಇಂತಹ ಭೀಕರ ದಾಳಿಯನ್ನು ತೀವ್ರವಾಗಿ ಖಂಡಿಸಿದರೂ, ಅಲ್ಲಿನ ಅಧ್ಯಕ್ಷ ಪುಟಿನ್ ತನ್ನ ಆಕ್ರಮಣವನ್ನು ಕಡಿಮೆ ಮಾಡಲಿಲ್ಲ, ಬದಲಿಗೆ ದಿನೇ ದಿನೇ ಜಾಸ್ತಿ ಮಾಡುತ್ತಿರುವಂತೆ ಕಾಣುತ್ತಿದೆ. ಕಳೆದ ವಾರವಷ್ಟೇ ಉಕ್ರೇನಿನ ಒಂದೇ ಸ್ಥಳದಲ್ಲಿ ನೂರಾರು ಅಮಾಯಕ ನಾಗರಿಕರನ್ನು ರಷ್ಯಾ ಸೇನೆ ಕೊಂದು ಹಾಕಿದೆ ಎಂಬ ಹೃದಯವಿದ್ರಾವಕ ವರದಿಯು ಎಲ್ಲೆಡೆ ಸುದ್ದಿ ಮಾಡಿತು.
ಅಪಾರಶಸ್ತ್ರಾಸ್ತ್ರಹೊಂದಿರುವ ರಷ್ಯಾದಂತಹ ಸೇನೆಯು, ತನ್ನ ಪಶುಶಕ್ತಿಯನ್ನು ಉಪಯೋಗಿಸಿ ಎಂತಹದೇ ಆಕ್ರಮಣವನ್ನು ಬೇಕಾ ದರೂ ನಡೆಸಬಹುದು ಮತ್ತು ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವಂತಹ ಭಾವನೆ ಮೂಡಿಬರುತ್ತಿದೆ. ಈ ನಡುವೆ ವಿಶ್ವಸಂಸ್ಥೆಯು ರಷ್ಯಾದ ಮೇಲೆ ನಾನಾ ವಿಧವಾದ ನಿಯಂತ್ರಣಗಳನ್ನು ಹೇರುತ್ತಿದೆ, ಜಗತ್ತಿನ ಬಹುಪಾಲು ರಾಷ್ಟ್ರಗಳು ಆರ್ಥಿಕ ನಿರ್ಬಂಧವನ್ನೂ ಹೇರಿವೆ. ರಷ್ಯಾ ಅಧ್ಯಕ್ಷ ಪುಟಿನ್‌ನ ಮಕ್ಕಳ ವ್ಯವಹಾರದ ಮೇಲೆ ಸಹ ಪಾಶ್ಚಿಮಾತ್ಯ ದೇಶಗಳು ನಿಯಂತ್ರಣ ಹೇರಲು ಆರಂಭಿಸಿವೆ.
ರಷ್ಯಾದ ಆಕ್ರಮಣವನ್ನು ತಡೆಯಬೇಕು ಎಂದು ಹಲವು ದೇಶಗಳು ಸಲಹೆ ನೀಡಿದ್ದರೂ, ಅದನ್ನು ಕಾರ್ಯಗತಗೊಳಿಸಲು ಯಾರಿಂದಲೂ ಇದುವರೆಗೆ ಸಾಧ್ಯವಾಗಿಲ್ಲ. ಉಕ್ರೇನ್ ಬಸವಳಿದಿದೆ, ನಾಶದ ಹಾದಿ ಹಿಡಿದಿದೆ. ಈ ಹಿಂಸೆಯು ಬೇಗನೆ ನಿಲ್ಲಲಿ, ಅಮಾಯಕರ ಪ್ರಾಣ ಉಳಿಯಲಿ ಎಂದು ಆಶಿಸುವುದೊಂದೇ ಈಗ ಉಳಿದಿರುವ ದಾರಿ ಎನಿಸತೊಡಗಿದೆ.