ರಸಗೊಬ್ಬರ ಪೂರೈಕೆಗೆ ಕ್ರಮ ಕೈಗೊಳ್ಳಿ
ಕಚ್ಚಾ ವಸ್ತುಗಳು ದುಬಾರಿಯಾಗಿರುವುದರಿಂದ ರಸಗೊಬ್ಬರ ಉತ್ಪಾದನೆ ಮೇಲೆಯೂ ಪರಿಣಾಮ ಬೀರಿದ್ದು, ರಾಜ್ಯದಲ್ಲಿ ಮುಂಗಾರುಹಂಗಾಮು ಆರಂಭವಾಗುವ ಮುನ್ನವೇ ರಸಗೊಬ್ಬರ ಕೊರತೆಯಾಗಿದೆ.
ಹೀಗಾಗಿ ರೈತರು ಆತಂಕಕ್ಕೀಡಾಗಿದ್ದು, ಸಕಾಲಕ್ಕೆ ರಸಗೊಬ್ಬರ ಸಿಗುತ್ತಿಲ್ಲ ಎನ್ನುವ ದೂರುಗಳು ರಾಜ್ಯದ ನಾನಾ ಕಡೆಗಳಿಂದ ಕೇಳಲಾ ರಂಭಿಸಿವೆ. ದಿನೇ ದಿನೆ ರಸ ಗೊಬ್ಬರ ಸಮಸ್ಯೆ ಹೆಚ್ಚುತ್ತಿದ್ದು, ರೈತರು ಅಂಗಡಿಗಳ ಎದುರು ಕಾದು ನಿಲ್ಲಬೇಕಾದ ಸ್ಥಿತಿ ಸೃಷ್ಟಿಯಾಗುತ್ತಿದೆ. ಹಲವೆಡೆ ಪೂರೈಕೆಯಾದ ತಕ್ಷಣವೇ ಖಾಲಿಯಾಗುತ್ತಿದೆ. ಕೆಲವೆಡೆ ರಸಗೊಬ್ಬರ ಇದ್ದರೂ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ದೂರು ಗಳು ಕೇಳಿಬಂದಿವೆ.
ಬಿತ್ತನೆ ಸಮಯದಲ್ಲಿ ಬೀಜ, ಸಸಿಯೊಂದಿಗೆ ನೀಡುವ ಡಿಎಪಿ ಮತ್ತು ಎನ್ ಪಿಕೆ ಮಿಶ್ರ ಣದ ರಸಗೊಬ್ಬರ ಬೆಲೆಯೂ ಗಗನಕ್ಕೇರಿದೆ. ಕಳೆದ ವರ್ಷ ಸೆಪ್ಟೆಂಬರ್‌ನಿಂದಲೇ ಆರಂಭವಾದ ಸಮಸ್ಯೆ ಈಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದ. ಕೆಲವು ಭಾಗಗಳಲ್ಲಿ ಯೂರಿಯಾ ಕೊರತೆ ಇದ್ದರೆ, ಇನ್ನು ಕೆಲವೆಡೆ ಡಿಎಪಿ ಕೊರತೆ ತಲೆದೋರಿದೆ. ಈ ಕೊರತೆಗೆ ಪೂರೈಕೆಯು ಒಂದು ಸಮಸ್ಯೆಯಾದರೆ, ಅತಿಯಾದ ಬಳಕೆಯೂ ಮತ್ತೊಂದು ಕಾರಣ ಎನ್ನಲಾಗಿದೆ.
ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಶೇ.೩೦ರಷ್ಟು ಕಾಂಪ್ಲೆಕ್ಸ್ ರಸಗೊಬ್ಬರ ಬಳಕೆ ಹೆಚ್ಚಾಗಿದೆ. ೨೦೨೧ರ ಏಪ್ರಿಲ್‌ವರೆಗೆ ರಸಗೊಬ್ಬರಕ್ಕೆ ನಿರ್ದಿಷ್ಟ ದರವನ್ನು ಕೇಂದ್ರ ಸರಕಾರ ನಿಗದಿಪಡಿಸುವ ಪದ್ಧತಿ ಇತ್ತು. ೨೦೨೧ರ ಏಪ್ರಿಲ್ ನಂತರ ವಾರಕ್ಕೊಮ್ಮೆ, ೧೫ ದಿನಗಳಿಗೊಮ್ಮೆ ದರಗಳನ್ನು ಬದಲಾವಣೆ ಮಾಡುತ್ತ ಬಂದಿದೆ. ೫೦ ಕೆ.ಜಿ ತೂಕದ ಪೊಟ್ಯಾಷ್ ಪ್ಯಾಕೆಟ್ ರು.೮೫೦ ದೊರೆಯುತ್ತಿತ್ತು. ಕಳೆದ ವರ್ಷದ ದೀಪಾವಳಿ ವೇಳೆಗೆ ಇದು ರು.೧,೦೪೦ಕ್ಕೆ ತಲುಪಿತು. ಕಾಂಪ್ಲೆಕ್ಸ್ ರಸಗೊಬ್ಬರ ರು.೧,೦೭೫ಕ್ಕೆ ಹೆಚ್ಚಾಯಿತು.
ಒಟ್ಟಾರೆಯಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಒಂದು ಚೀಲಕ್ಕೆ ರು.೩೦೦ರಿಂದ ರು.೩೫೦ರಷ್ಟು ಹೆಚ್ಚಾಗಿದೆ. ಈ ದರ ಏರಿಕೆಯಿಂದ ಚಿಕ್ಕ ಹಿಡುವಳಿದಾರರಿಗೆ ರಸಗೊಬ್ಬರ ಕೈಗೆಟುಕದಂತಾಗಿದೆ. ಹೀಗಾಗಿ ಮುಂಗಾರು ಹಂಗಾಮಿಗೆ ಅಗತ್ಯವಿರುವಷ್ಟು ರಸಗೊಬ್ಬರವನ್ನು ಕೃಷಿಕರಿಗೆ ಸೂಕ್ತ ದರದಲ್ಲಿ ಸರಬರಾಜು ಮಾಡಲು ಸರಕಾರ ಕ್ರಮ ಕೈಗೊಳ್ಳಬೇಕಿದೆ. ಇನ್ನೊಂದೆಡೆ ರೈತರು ಕೂಡ ರಸಗೊಬ್ಬರದ ಮೇಲೆಯೇ ಅವಲಂಬನೆಯಾಗದೆ ಸಾವಯವ ಕೃಷಿಯತ್ತ ಆಸಕ್ತಿ ವಹಿಸಬೇಕಿದೆ.