ರಾಜಕಾಲುವೆ ಒತ್ತುವರಿ ತೆರವುಗೊಳಿಸಿ
ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಬೆಂಗಳೂರಿನ ಜನಜೀವನ ಅಸ್ತವ್ಯಸ್ತ ವಾಗಿದೆ. ತಗ್ಗು ಪ್ರದೇಶ ಗಳಲ್ಲಿನ ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಆಸ್ತಿಪಾಸ್ತಿ ಹಾನಿಯಾಗಿದೆ.
ಮೂರು ಜೀವಗಳೂ ಬಲಿಯಾಗಿವೆ. ರಾಜಕಾಲುವೆಗಳ ಒತ್ತುವರಿ, ಕೆರೆಗಳಲ್ಲಿ ಹೂಳು ತುಂಬಿರುವುದು ಮಾತ್ರವಲ್ಲದೆ, ತ್ಯಾಜ್ಯನೀರಿನ ನಿರ್ವಹಣೆಗೆ ಸಮರ್ಪಕ ಯೋಜನೆ ರೂಪಿಸದಿರುವುದೇ ಇಂತಹ ಸ್ಥಿತಿಗೆ ಪ್ರಮುಖ ಕಾರಣ ಎನ್ನಲಾಗಿದೆ. ನಗರದಲ್ಲಿ ಕೆಲವೆಡೆ ಪ್ರಭಾವಿಗಳೇ ರಾಜಕಾಲುವೆ ಮೇಲೆ ಮನೆ ಕಟ್ಟಿಕೊಂಡುನೀರಿನ ಹರಿವಿಗೆ ಅಡಚಣೆ ಉಂಟುಮಾಡುತ್ತಿದ್ದಾರೆ. ಇನ್ನು ಕೆಲವು ಕಡೆ ಕಾಲುವೆಯ ದಿಕ್ಕನ್ನೇ ಬದಲಿಸಿದ್ದಾರೆ. ಕೆಲವೇ ಜನರಿಂದಾಗಿ ಇಡೀ ಊರಿಗೆ ತೊಂದರೆ ಆಗುತ್ತಿದೆ. ಹೀಗಾಗಿ ಒತ್ತುವರಿಗಳೆಲ್ಲವನ್ನೂ ತೆರವುಗೊಳಿಸಲು ಸರಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕಿದೆ.
ಮಳೆ ಬಂದಾಗ ನಗರದಲ್ಲಿ ಪ್ರವಾಹ ಉಂಟಾಗಬಹುದಾದ ೨೧೦ ಪ್ರದೇಶಗಳನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸೇರಿ ಗುರುತಿಸಿವೆ. ಅವುಗಳಲ್ಲಿ ೫೬ ಅತಿ ಸೂಕ್ಷ್ಮ ಪ್ರದೇಶಗಳಿವೆ. ರಾಜಕಾಲುವೆಗಳ ಹೂಳೆತ್ತುವ ಹಾಗೂಅಗತ್ಯ ಇರುವ ಕಡೆ ರಾಜಕಾಲುವೆ ಗಳಿಗೆ ತಡೆಗೋಡೆಗಳನ್ನು ಎತ್ತರಿಸುವ ಮೂಲಕ ಪ್ರವಾಹ ಉಂಟಾಗುವ ಪ್ರದೇಶಗಳ ಸಂಖ್ಯೆಯನ್ನು ಕಡಿಮೆ ಮಾಡಿರುವು ದಾಗಿ ಬಿಬಿಎಂಪಿ ಹೇಳಿತ್ತು. ಆದರೆ ಆ ನಿಟ್ಟಿನಲ್ಲಿ ಯಾವುದೇ ಕ್ರಮ ಜರುಗಿಸದ ಹಿನ್ನೆಲೆಯಲ್ಲಿ ನಗರದ ಜನಜೀವನ ಹೈರಾಣಾಗುವಂತಾಗಿದೆ.
ಮತ್ತೊಂದೆಡೆ ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳು ನಡೆಯುತ್ತಿರುವ ಪ್ರದೇಶಗಳು ಹಾಗೂ ನಮ್ಮ ಮೆಟ್ರೊ ಯೋಜನೆಯ ಎರಡನೇ ಹಂತದ ಕಾಮಗಾರಿಗಳು ನಡೆಯುತ್ತಿರುವ ಪ್ರದೇಶಗಳಲ್ಲಿ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ದಶಕದಿಂದ ಇತ್ತೀಚೆಗೆ ಪ್ರತೀ ಮಳೆಗಾಲದಲ್ಲೂ ಪ್ರವಾಹ ಗಳು ಮರುಕಳಿಸಿದರೂ ಅವನ್ನು ಶಾಶ್ವತ ವಾಗಿ ತಡೆಯುವ ಸಮಗ್ರ ಕಾರ್ಯಯೋಜನೆ ಜಾರಿಗೊಳಿಸಲು ಸಾಧ್ಯವಾಗಿಲ್ಲ ಎಂಬುದು ಬೇಸರದ ಸಂಗತಿ. ಸರಕಾರ ಇನ್ನಾದರೂ ಎಚ್ಚೆತ್ತು, ಪ್ರವಾಹ ತಡೆಯಲು ಆಗ ಬೇಕಾದ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಪೂರ್ಣಗೊಳಿಸಬೇಕು.
ಮುಂಗಾರು ಆರಂಭಕ್ಕೆ ಮೊದಲೇ ರಸ್ತೆಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಬೇಕು. ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಕಲ್ಪಿಸಬೇಕು. ರಾಜಕಾಲುವೆಗಳು ೬೩೦ ಕಡೆ ಒತ್ತುವರಿ ಆಗಿವೆ ಎಂದು ಬಿಬಿಎಂಪಿ ಗುರುತಿಸಿದೆ. ಅವುಗಳನ್ನು ಮುಲಾಜಿಲ್ಲದೇ ತೆರವುಗೊಳಿಸಬೇಕು.