ರಾಜ್ಯ ಸರಕಾರಗಳೂ ತೈಲದ ಮೇಲಿನ ತೆರಿಗೆ ಕಡಿತಗೊಳಿಸಲಿ
ಹಣದುಬ್ಬರ ನಿಯಂತ್ರಿಸಲು ಮತ್ತು ಅಗತ್ಯ ವಸ್ತುಗಳ ದರ ಏರಿಕೆ ತಡೆಯುವ ಉದ್ದೇಶದಿಂದ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು ಪ್ರತಿ ಲೀಟರಿಗೆ ಕ್ರಮವಾಗಿ ?8 ಮತ್ತು ?6 ಕಡಿತ ಮತ್ತು ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಪ್ರತಿ ಸಿಲಿಂಡರ್‌ಗೆ ? 200 ಸಬ್ಸಿಡಿಯನ್ನು ನೀಡಲು ನಿರ್ಧರಿಸಿರುವ ಕೇಂದ್ರ ಸರಕಾರಕ್ಕೆ ಅಭಿನಂದನೆಗಳು.
ಒಂದೆಡೆ ರಷ್ಯಾ-ಉಕ್ರೇನ್ ಯುದ್ಧ, ಇನ್ನೊಂದೆಡೆ ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲಾದ ಆರ್ಥಿಕ ಮುಗ್ಗಟ್ಟು ಸಾಮಾನ್ಯ ವರ್ಗದ ಜನರನ್ನು ಆತಂಕಕ್ಕೀಡು ಮಾಡಿತ್ತು. ಆದರೆ ಈ ಜಾಗತಿಕ ಸವಾಲಿನ ಪರಿಸ್ಥಿತಿಯ ನಡುವೆಯೂ ನರೇಂದ್ರ ಮೋದಿ ಸರಕಾರ ಜನರಿಗೆ ದೊಡ್ಡ ನಿರಾಳತೆ ಒದಗಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪ್ರತಿಯೊಂದು ವರ್ಗದ ಬಗ್ಗೆ ಕಾಳಜಿ ವಹಿಸುತ್ತಾರೆ ಮತ್ತು ಅವರೊಬ್ಬ ಸಂವೇದನಾಶೀಲ ನಾಯಕ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.
ಪೆಟ್ರೋಲ್ ಮತ್ತು ಡಿಸೇಲ್ ದರ ಇಳಿಕೆಯು ಅನೇಕ ಕ್ಷೇತ್ರಗಳ ಮೇಲೆ ಪರಿಣಾಮ ಬೀರಲಿದೆ. ಮಧ್ಯಮ ವರ್ಗದ ಕುಟುಂಬಗಳಿಗೆ ಜೀವನ ನಿರ್ವಹಣೆ ಸುಗಮ ವಾಗಲಿದೆ. ಉಜ್ವಲ ಯೋಜನೆಯಿಂದ ಕೋಟ್ಯಂತರ ಕುಟುಂಬಗಳಿಗೆ ವಿಶೇಷವಾಗಿ ಮಹಿಳೆಯರಿಗೆ ನೆರವಾಗಲಿದೆ. ಕರೋನಾ ಆರ್ಭಟದ ನಂತರ ಬದುಕು ಕಟ್ಟಿಕೊಳ್ಳಲು ಹೆಣಗಾಡು ತ್ತಿರುವ ಜನ ಸಾಮಾನ್ಯರಿಗೆ ಈ ತೆರಿಗೆ ಕಡಿತ ಕೊಂಚ ನಿರಾಳತೆ ಉಂಟುಮಾಡಿದೆ. ಬಿಜೆಪಿ ಆಡಳಿತದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೂಡ 2021ರ ನವೆಂಬರ್‌ನಲ್ಲೇ ಜನಹಿತ ದೃಷ್ಟಿಯಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿತ ಮಾಡಿವೆ.
ಆದರೆ ಪ್ರತಿಪಕ್ಷಗಳ ಆಡಳಿತದ ವಿವಿಧ ರಾಜ್ಯಗಳಲ್ಲಿ ಅದರಲ್ಲೂ ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಕಿಂಚಿತ್ತೂ ದರ ಕಡಿಮೆ ಮಾಡುವ ಕ್ರಮ ಕೈಗೊಂಡಿಲ್ಲ. ಎಲ್ಲ ರಾಜ್ಯ ಸರಕಾರಗಳೂ ಅದರಲ್ಲಿಯೂ ವಿಶೇಷವಾಗಿ 2021ರ ನವೆಂಬರ್‌ನಲ್ಲಿ ತೆರಿಗೆ ಕಡಿತ ಮಾಡದ ರಾಜ್ಯಗಳು, ಕೇಂದ್ರ ಸರಕಾರದ ರೀತಿಯಲ್ಲಿಯೇ ತೆರಿಗೆ ಕಡಿತ ಮಾಡಿ, ಸಾಮಾನ್ಯ ಜನರಿಗೆ ಬೆಲೆ ಏರಿಕೆಯಿಂದ ತುಸು ನೆಮ್ಮದಿ ನೀಡಬೇಕಿದೆ.