ಮಾನ್ ನಿರ್ಧಾರ ಅನುಕರಣೀಯ
ಪಂಜಾಬ್ ಆರೋಗ್ಯ ಸಚಿವ ವಿಜಯ್ ಸಿಂಗ್ಲಾ ಅವರ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿ ಬಂದ ಕೂಡಲೇ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿರುವುದಲ್ಲದೇ, ಬಂಧನವಾಗುವಂತೆ ಮಾಡಿದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಕಾರ್ಯ ಇಡೀ ದೇಶವೇ ಹೆಮ್ಮೆ ಪಡುವಂತದ್ದು. ಭ್ರಷ್ಟಾಚಾರದ ವಿಚಾರವು ಪ್ರತಿಪಕ್ಷಗಳಿಗೆ, ಮಾಧ್ಯಮಗಳಿಗೆ ಗೊತ್ತಾಗುವು ದಕ್ಕಿಂತ ಮುನ್ನವೇ ತಮ್ಮದೇ ಸರಕಾರದ ಸಚಿವರಾಗಿದ್ದವರ ಮೇಲೆ ಕಠಿಣ ನಿರ್ಧಾರ ತೆಗೆದು ಕೊಂಡಿದ್ದು ಎಎಪಿ ಪಕ್ಷದ ಮೇಲೆ ದೇಶದ ಜನತೆ ಭರವಸೆ ಇಡುವಂತೆ ಮಾಡಿದೆ.
ಆದರೆ ಭ್ರಷ್ಟಾಚಾರದ ವಿರುದ್ಧವೇ ಸಮರ ಸಾರಿ ಎರಡು ರಾಜ್ಯಗಳಲ್ಲಿ ಅಧಿಕಾರದ ಗದ್ದುಗೆ ಏರಿರುವ ಎಎಪಿ ನಾಯಕರೂ ಅಧಿಕಾರ ಸಿಕ್ಕ ಕೆಲ ತಿಂಗಳುಗಳಲ್ಲೇ ಲಂಚದ ದುಡ್ಡಿಗೆ ಕೈಯೊಡ್ಡಿರುವುದನ್ನು ನೋಡಿದರೆ, ಯಾವುದೇ ಪಕ್ಷವೂ ಭ್ರಷ್ಟಾಚಾರದಿಂದ ಹೊರತಾಗಿಲ್ಲ ಎಂಬ ಮತ್ತೊಂದು ಕೆಟ್ಟ ಸಂದೇಶವೂ ರವಾನೆ ಯಾಗಿದೆ. ಹಾಗಾದರೆ ಚುನಾವಣೆಗೆ ಸ್ಪರ್ಧಿಸುವಾಗ ಇರುವ ನೈತಿಕತೆ ಚುನಾಯಿತರಾದ ಮೇಲೆ ಏಕೆ ಇರುವುದಿಲ್ಲ ಎಂಬ ಪ್ರಶ್ನೆ ಹುಟ್ಟುತ್ತದೆ. ಜನಪ್ರತಿನಿಧಿಗಳಿಗೆ ಸರಕಾರ ಲಕ್ಷಾಂತರ ರುಪಾಯಿ ಸಂಬಳ, ಭತ್ಯೆ ನೀಡಿದರೂ ಈ ಹೇಸಿಗೆ ದುಡ್ಡಿಗೆ ಬಾಯಿ ಹಾಕಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ ಎಂದಾದರೆ ಈ ವ್ಯವಸ್ಥೆ ಸುಧಾರಣೆ ಸರಳ ಪ್ರಕ್ರಿಯೆಯಲ್ಲ.
ಎಲ್ಲ ರಾಜ್ಯಗಳಲ್ಲೂ ಭಗವಂತ್ ಮಾನ್ ಅವರಂತಹ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಮನಸ್ಥಿತಿಯ ಮುಖ್ಯಮಂತ್ರಿಗಳು ಅಧಿಕಾರಕ್ಕೆ ಬಂದರೆ ಮಾತ್ರ ಇದು ಸಾಧ್ಯ. ಗುತ್ತಿಗೆದಾರರಿಂದ ಸಚಿವರು ಕಮಿಷನ್‌ಗೆ ಬೇಡಿಕೆ ಇಟ್ಟ ವಿಷಯ ರಾಜ್ಯದಲ್ಲೂ ಇತ್ತೀಚೆಗೆ ಭಾರಿ ಸದ್ದು ಮಾಡಿತ್ತು. ಆರೋಪ ಎದುರಿಸಿದ್ದ ಸಚಿವರ ರಾಜೀನಾಮೆಯೇನೋ ನೀಡಿದರು, ಆದರೆ ಈ ಪ್ರಕರಣ ಏನಾಯಿತು ಎಂಬುದು ಗೌಪ್ಯವಾಗಿಯೇ ಇದೆ. ರಾಜೀನಾಮೆ ನೀಡಿದ ಸಚಿವರ ವಿರುದ್ಧ ಈವರೆಗೂ ಯಾವ ತನಿಖಾ ಸಂಸ್ಥೆಗಳೂ ಕ್ರಮ ವಹಿಸಿಲ್ಲ.
ರಾಜ್ಯದ ಬಹುತೇಕ ಇಲಾಖೆಗಳಲ್ಲಿ ಲಂಚದ ಹಾವಳಿ ಇನ್ನೂ ನಡೆದೇ ಇದೆ. ಆದರೆ ಯಾರೂ ಪಂಜಾಬ್ ಮಾದರಿಯಲ್ಲಿ ಕ್ರಮ ಕೈಗೊಂಡಿಲ್ಲ. ಪಂಜಾಬ್ ಸಿಎಂ ನಿರ್ಧಾರ ಎಲ್ಲ ರಾಜಕೀಯ ಪಕ್ಷಗಳಿಗೆ, ಜನಪ್ರತಿನಿಽಗಳಿಗೆ ಎಚ್ಚರಿಕೆಯ ಗಂಟೆಯಾಗಬೇಕು. ವ್ಯವಸ್ಥೆ ಸುಧಾರಣೆಯಾಗಬೇಕಾದರೆ ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳಲೇಬೇಕು.