ರಾಜಕಾರಣಿಗಳಿಗೆ ಸೂಕ್ಷ್ಮತೆಯಿರಲಿ
ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ತಾರಕ್ಕೇರುತ್ತಿದೆ. ಪರಿಷ್ಕೃತ ಪಠ್ಯಪುಸ್ತಕಗಳನ್ನು ಒಪ್ಪದೆ ಅದಕ್ಕೆ ಪರ್ಯಾಯ ಪಠ್ಯ ಪುಸ್ತಕ ರಚನೆ ಮಾಡಿ ಬೋಧನೆ ಮಾಡುವಮಾತುಗಳು ಸಾಂಸ್ಕೃತಿಕ ವಲಯದಿಂದ ಕೇಳಿಬರುತ್ತಿವೆ. ಈ ಹಂತದಲ್ಲಿ ರಾಜಕಾರಣಿಗಳು ಸೂಕ್ಷ್ಮ ಸಂವೇದನೆ ಯಿಂದ ನಡೆದುಕೊಂಡರೆ ಮಾತ್ರ ಸಮಸ್ಯೆಯನ್ನು ಸರಾಗವಾಗಿ ಇತ್ಯರ್ಥಪಡಿಸಲು ಸಾಧ್ಯ.
ಇಲ್ಲವಾದಲ್ಲಿ ಪಠ್ಯ ಪುಸ್ತಕ ವಿವಾದ ದೊಡ್ಡ ಮಟ್ಟಕ್ಕೆ ತಿರುಗಿ ಶೈಕ್ಷಣಿಕ ವಿಚಾರದಲ್ಲಿ ದೇಶಕ್ಕೆ ಮಾದರಿಯನ್ನು ಹಾಕಿಕೊಟ್ಟಿರುವ ಕರ್ನಾಟಕ, ಇದೀಗ ದೇಶದ ಮುಂದೆ ನಗೆಪಾಟಲಿಗೀಡಾಗಲಿದೆ. ಪಠ್ಯದಲ್ಲಿ ಕುವೆಂಪು, ನಾರಾಯಣ ಗುರು, ಭಗತ್ ಸಿಂಗ್ ಅವರಿಗೆ ಅವಮಾನ ಮಾಡಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ. ಇದಕ್ಕೆ ಸತ್ಯವಾದ ಉತ್ತರವನ್ನು ಅಧಿಕೃತವಾಗಿ ನೀಡುವುದು ಮತ್ತು ಜನರ ಸಮಸ್ಯೆಗಳನ್ನು ಬಗೆಹರಿಸುವುದು ಸರಕಾರ ಮತ್ತು ಶಿಕ್ಷಣ ಸಚಿವರ ಕರ್ತವ್ಯ. ಈ ವಿಷಯದಲ್ಲಿ ಪ್ರಬುದ್ಧತೆಯಿಂದ ನಡೆದುಕೊಳ್ಳಬೇಕಾಗಿದ್ದ ಶಿಕ್ಷಣ ಸಚಿವ ನಾಗೇಶ್, ಚಕ್ರತೀರ್ಥ ಐಐಟಿ ಪ್ರೊಫೆಸರ್ ಎಂಬ ಸುಳ್ಳು ವಾದ ಮಂಡನೆ ಮಾಡಿ ನಗೆಪಾಟಲಿ ಗೀಡಾದರು.
ನಾನು ಐಐಟಿ ಪ್ರೊಪೆಸರ್ ಅಲ್ಲ ಎಂದು ಸ್ವತಃ ರೋಹಿತ್ ಚಕ್ರತೀರ್ಥ ಅವರೇ ಒಪ್ಪಿಕೊಂಡಿದ್ದಾರೆ. ಹೀಗೆ, ಸಚಿವರ ಸುಳ್ಳು ಸರಕಾರಕ್ಕೆ ಮುಜುಗರ ತರುವ ಜತೆಗೆ ಸಮಸ್ಯೆಗೆ ಕಾರಣವಾಗುತ್ತದೆ. ಇದೀಗ ದೇವನೂರ ಮಹಾದೇವ ಅವರ ಪಠ್ಯವನ್ನು ಕೈಬಿಡಬೇಕು ಎಂಬ ಅವರ ವಾದವನ್ನು ಟೀಕಿಸುವ ಭರದಲ್ಲಿ ಅವರಿಗೆ ಅವಮಾನ ಮಾಡುವ ರೀತಿಯಲ್ಲಿ ಕೆಲ ಬಿಜೆಪಿ ನಾಯಕರು ಮಾತನ್ನಾಡುತ್ತಿದ್ದಾರೆ. ಇದು ವಿಕೋಪಕ್ಕೆ ಹೋದಲ್ಲಿ ಸಾಂಸ್ಕೃತಿಕ ಪ್ರತಿರೋಧ ಹುಟ್ಟಿಕೊಳ್ಳುವ ಸಾಧ್ಯತೆಗಳಿವೆ. ಇದು ರಾಜ್ಯವನ್ನು ರಾಷ್ಟ್ರೀಯ ಮಟ್ಟದಲ್ಲಿ ಹಿನ್ನೆಡೆಗೆ ನೂಕಲಿದೆ. ಜತೆಗೆ, ಕಲಿಯುವ ಮಕ್ಕಳಿಗೆ ಗೊಂದಲದ ವಾತಾವರಣ ಮುಂದುವರಿಯಲಿದೆ.
ನಾಡಿನ ಸಾಂಸ್ಕೃತಿಕ ಪರಂಪರೆಗೆ ಎಲ್ಲಿಯೂ ದಕ್ಕೆಯಾಗದಂತೆ ನೋಡಿಕೊಳ್ಳಬೇಕಿದೆ. ಇದೆಲ್ಲ ಹೊರೆಯೂ ರಾಜಕಾರಣಿಗಳ ಮೇಲೆ ಇದ್ದು, ಅದನ್ನು ಅವರು ಸಮರ್ಥವಾಗಿ ನಿಭಾಯಿಸಬೇಕು. ಅದನ್ನು ಬಿಟ್ಟು ಸಿಕ್ಕಸಿಕ್ಕಂತೆ ಮಾತನಾಡಿದರೆ ಅವರ ಮರ್ಯಾದೆಯನ್ನು ಕಳೆದುಕೊಳ್ಳುವ ಜತೆಗೆ ನಾಡಿನ ಮರ್ಯಾದೆಯನ್ನು ಕಳೆದಂತಾಗುತ್ತದೆ. ಇದನ್ನು ಎಲ್ಲ ಪಕ್ಷದ ರಾಜಕಾರಣಿಗಳು ಅರ್ಥ ಮಾಡಿಕೊಳ್ಳಬೇಕಿದೆ.