ನೈಜ ಶೈಕ್ಷಣಿಕ ಸಮಸ್ಯೆ ಅರಿಯಿರಿ
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಂತದ ರಾಷ್ಟ್ರೀಯ ಸಾಧನೆ ಸಮೀಕ್ಷೆಯ ಅಂಶಗಳು ಪ್ರಕಟಗೊಂಡಿದ್ದು, ವರದಿ ಪ್ರಕಾರ 2021ನೇ ಸಾಲಿನ 3, 5, 8 ಮತ್ತು10ನೇ ತರಗತಿಯ ಮಕ್ಕಳ ಭಾಷೆ ಮತ್ತು ಇತರ ವಿಷಯಗಳ ಕಲಿಕೆಯು ಈ ಹಿಂದಿನ ವರ್ಷಗಳಿಗೆ ಹೋಲಿಸಿ ದರೆ ಇಳಿಕೆ ಕಂಡುಬಂದಿದೆ.
ಹತ್ತನೆಯ ತರಗತಿಯ ಆಧುನಿಕ ಭಾರತೀಯ ಭಾಷೆ ಮತ್ತು ಇತರ ವಿಷಯಗಳ ಕಲಿಕೆ ಮತ್ತು ಗ್ರಹಿಕೆಯ ಮಟ್ಟ ಶೇ.99ರಷ್ಟು ವಿದ್ಯಾರ್ಥಿಗಳಲ್ಲಿ ಸಾಧಾರಣ ಮತ್ತು ಅದಕ್ಕಿಂತ ಕಡಿಮೆ ಎಂದು ಹೇಳಲಾಗಿದೆ. ಅದೇ ರೀತಿ ಇಂಗ್ಲಿಷ್ ಕಲಿಕೆ ಕೂಡ ಕಡಿಮೆ ಎಂದು ಹೇಳಲಾಗಿದೆ. ಇದಕ್ಕೆ ಹಲವು ಕಾರಣಗಳನ್ನು ಗುರುತಿಸಲಾಗಿದ್ದು, ಪಠ್ಯಗಳಲ್ಲಿ ಕೆಲವು ಪಾಠಗಳನ್ನು ಸೇರಿಸುವುದು, ಪದೇ ಪದೆ ತೆಗೆದು ಹಾಕುವುದೂ ಪ್ರಮುಖ ಕಾರಣ ಎನ್ನಲಾ ಗಿದೆ.
ರಾಜ್ಯದಲ್ಲಿ ಪಠ್ಯಪುಸ್ತಕ ಕುರಿತ ವಿವಾದ ತಾರಕಕ್ಕೇರಿರುವ ಈ ಹೊತ್ತಿನಲ್ಲಿ ಈ ಸಮೀಕ್ಷೆ ವರದಿಯನ್ನು ಗಂಭೀರ ವಾಗಿ ಪರಿಗಣಿಸಬೇಕಿದೆ. ಪಠ್ಯವನ್ನು ಬದಲಿಸುವ ಬದಲು ಈಗಾಗಲೇ ಪಠ್ಯದಲ್ಲಿರುವ ಪಾಠಗಳನ್ನು ಮಕ್ಕಳಿಗೆ ಹೇಗೆ ಕಲಿಸಲಾಗುತ್ತಿದೆ, ಮಕ್ಕಳು ಹೇಗೆ ಪಾಠಗಳನ್ನು ಕಲಿಯುತ್ತಿzರೆ ಅಥವಾ ಗ್ರಹಿಸುತ್ತಾರೆ ಎಂಬುದರ ಕುರಿತೂ ಗಂಭೀರವಾಗಿ ಚಿಂತಿಸಬೇಕಿದೆ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಕಳಪೆ ಗುಣಮಟ್ಟದ ಕಲಿಕೆ ಮತ್ತು ಬೋಧನೆಗೆ ಯಾರನ್ನೂ ಹೊಣೆಗಾರರನ್ನಾಗಿ ಮಾಡುವ ವ್ಯವಸ್ಥೆ ಇಲ್ಲ. ಹೀಗಾಗಿ ಗ್ರಾಮೀಣ ಪ್ರದೇಶದ ಮಕ್ಕಳು ಸತತವಾಗಿ ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
ಇಂಥ ಮಕ್ಕಳಿಗೆ ಹತ್ತನೆಯ ತರಗತಿಯ ಪರೀಕ್ಷೆಗಳಲ್ಲಿ ಗ್ರೇಸ್ ಅಂಕ ನೀಡುವ ಮೂಲಕ ಮತ್ತೊಂದು ರೀತಿಯ ವಂಚನೆ ಮಾಡಲಾಗುತ್ತಿದೆ. ನಿಗದಿತ ಪಾಠ ಗಳನ್ನು ಸಮರ್ಪಕವಾಗಿ ಬೋಧನೆ ಮಾಡುವುದು ಅಷ್ಟೇ ಮುಖ್ಯ. ಇಲ್ಲಿ ಶಿಕ್ಷಕನ ಪಾತ್ರ ಬಹಳ ಮುಖ್ಯ. ಆದ್ದರಿಂದ ಪಠ್ಯ ಬದಲಾವಣೆ, ಸೇರ್ಪಡೆ, ಮಾರ್ಪಾಡು ಇತ್ಯಾದಿ ಅಂಶಗಳೊಂದಿಗೆ ಗುಣ ಮಟ್ಟದ ಕಲಿಯುವಿಕೆ, ಕಲಿಸುವಿಕೆ ಬಗೆಗಿನ ಚರ್ಚೆಗಳು ಕೂಡ ಮುನ್ನೆಲೆಗೆ ಬರಬೇಕು. ಅದನ್ನು ಖಾತರಿಪಡಿಸುವ ಕ್ರಮ ಆಗಬೇಕು. ಇಲ್ಲದಿದ್ದರೆ ಪಠ್ಯ ಕುರಿತು ವಿವಾದ ಕೇವಲ ಎಡ- ಬಲ ಎಂಬ ವಿವಾದವಾಗಿ, ನೈಜ ಶೈಕ್ಷಣಿಕ ಸಮಸ್ಯೆ ಹಾಗೆಯೇ ಉಳಿಯುತ್ತದೆ.