ಪಕ್ಷಾಂತರ ತಡೆಯಲು ಬೇಕಿದೆ ಕಾನೂನು ತಿದ್ದುಪಡಿ
ರಾಜ್ಯದಲ್ಲಿ ಇದೀಗ ಚುನಾವಣೆಯ ಪರ್ವಕಾಲ. ಬಿಬಿಎಂಪಿ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ, ವಿಧಾನಸಭೆ, ವಿಧಾನ ಪರಿಷತ್‌ಗೆ ಸಾಲು ಸಾಲು ಚುನಾವಣೆಗಳು ನಡೆಯಲಿವೆ. ಚುನಾವಣೆಯ ಹೊಸ್ತಿಲಲ್ಲಿ ಪಕ್ಷಾಂತರದ ಪರ್ವವೂ ಜೋರಾಗಿಯೇನಡೆದಿದೆ.
ವಿಧಾನ ಪರಿಷತ್ ಸ್ಪೀಕರ್ ಆಗಿದ್ದ ಬಸವರಾಜ್ ಹೊರಟ್ಟಿ, ಪರಿಷತ್ ಸದಸ್ಯ ಪುಟ್ಟಣ್ಣ ಸೇರಿದಂತೆ ಹಲವರು ಪಕ್ಷಾಂತರ ಮಾಡಿ ದ್ದು ರಾಜ್ಯದಲ್ಲಿ ಭಾರಿ ಚರ್ಚೆಗೂ ಕಾರಣ ವಾಗಿದೆ. ಜನಪ್ರತಿನಿಧಿಗಳು ಪಕ್ಷಾಂತರ ಮಾಡುವುದನ್ನು ತಡೆಯುವಲ್ಲಿ ಪಕ್ಷಾಂತರ ನಿಷೇಧ ಕಾನೂನು ಇದೆಯಾದರೂ ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ. ಹೀಗಾಗಿ ಈ ರೀತಿಯ ಪಕ್ಷಾಂತರ ತಡೆಯಲು ಕಾನೂನು ತಿದ್ದುಪಡಿ ಅಗತ್ಯವಿದೆ.
ಶಾಸಕರು/ಸಂಸದರು ಪಕ್ಷಾಂತರ ಮಾಡುವಾಗ ಅವರ ಅನರ್ಹತೆ ಕುರಿತು ತೀರ್ಮಾನ ವನ್ನು ಕೈಗೊಳ್ಳುವ ಸಂಪೂರ್ಣ ಅಧಿ ಕಾರವನ್ನು ವಿಧಾನಸಭೆ/ಲೋಕಸಭೆಯ ಸ್ಪೀಕರ್‌ಗೆ ನೀಡಿರುವುದು ಈ ಕಾನೂನಿನ ಮುಖ್ಯ ಲೋಪ. ಕಾನೂನಿನ ಆಶಯವನ್ನು ವಿಫಲಗೊಳಿಸಲು ಎಲ್ಲ ಪಕ್ಷಗಳೂ ಸ್ಪೀಕರ್ ಅವರನ್ನು ಅಸವಾಗಿ ಬಳಸಿವೆ. ತಾತ್ವಿಕ ವಾಗಿ, ಜನಪ್ರತಿನಿಧಿಯೊಬ್ಬ ಸ್ಪೀಕರ್ ಆದ ನಂತರದಲ್ಲಿ ಪಕ್ಷಪಾತಿಯಾಗಿ ಇರುವುದಿಲ್ಲ.
ಆದರೆ ವಾಸ್ತವದಲ್ಲಿ, ಆತ ಪಕ್ಷಪಾತಿಯಾಗಿಯೇ ಇರುತ್ತಾನೆ. ಅವರು ತಮ್ಮ ಪಕ್ಷದ ನಾಯಕತ್ವ ಹೇಳಿದಂತೆಯೇ ಮಾಡುತ್ತಾರೆ. ಸದನದ ಅವಧಿ ಪೂರ್ಣಗೊಳ್ಳುವವರೆಗೆ ಅನರ್ಹತೆಗೆ ಸಂಬಂಧಿಸಿದ ಅರ್ಜಿಯ ಬಗ್ಗೆ ಸ್ಪೀಕರ್ ತೀರ್ಮಾನ ಕೈಗೊಳ್ಳದಿರಲಿ ಎಂದು ಪಕ್ಷದ ನಾಯಕತ್ವವು ಬಯಸುತ್ತದೆ. ಆಗ ಅರ್ಜಿಯನ್ನು ನಿಷ್ಪ್ರಯೋಜಕವಾಗಿಸಲು ನಾಯಕತ್ವಕ್ಕೆ ಸಾಧ್ಯವಾಗುತ್ತದೆ. ನಾಯಕರು ಹೇಳಿದ್ದನ್ನು ಜಾಣತನದಿಂದ ಅನುಸರಿಸುವ ಸ್ಪೀಕರ್, ಅರ್ಜಿಯ ವಿಚಾರಣೆಗೆ ದೀರ್ಘ ಅವಧಿ ತೆಗೆದುಕೊಳ್ಳುತ್ತಾರೆ.
ಪಕ್ಷಾಂತರ ನಿಷೇಧ ಕಾನೂನು ಪರಿಣಾಮಕಾರಿಯಾಗಬೇಕು ಎಂದಾದರೆ, ಅನರ್ಹತೆಗೆ ಸಂಬಂಧಿಸಿದ ಅರ್ಜಿಗಳ ವಿಚಾರದಲ್ಲಿ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಸ್ಪೀಕರ್ ಅವರಿಂದ ಹಿಂದಕ್ಕೆ ಪಡೆಯುವ ರೀತಿಯಲ್ಲಿ ಕಾನೂನು ತಿದ್ದುಪಡಿ ಆಗಬೇಕು. ಆ ಅಧಿಕಾರವನ್ನು ಸ್ವತಂತ್ರ ಪ್ರಾಧಿಕಾರವೊಂದರ ಕೈಯಲ್ಲಿ ಇರಿಸಬೇಕು. ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅಥವಾ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ನೇತೃತ್ವದ ನ್ಯಾಯ ಮಂಡಳಿಯ ಕೈಗೆ ಅಥವಾ ಬೇರೆ ಯಾವುದಾದರೂ ಹೊರ ಗಿನ ಸ್ವತಂತ್ರ ವ್ಯವಸ್ಥೆಗೆ ಈ ಅಧಿಕಾರವನ್ನು ನೀಡುವ ರೀತಿಯಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತರುವ ಬಗ್ಗೆ ಸಂಸತ್ತು ಗಂಭೀರವಾಗಿ ಪರಿಶೀಲಿಸಬೇಕಿದೆ.