ಪಠ್ಯ ಬಿಡಿ, ಮಕ್ಕಳಲ್ಲಿ ಸ್ಪೂರ್ತಿ ತುಂಬಿ
ರಾಜ್ಯದಲ್ಲಿ ಶಾಲೆಗಳು ಪ್ರಾರಂಭವಾಗಿ ಆಗಲೇ ಹದಿನೈದು ದಿನಗಳು ಕಳೆದಿವೆ. ಒಂದೆಡೆ ಪಠ್ಯ ವಿವಾದ ದಿನದಿಂದ ದಿನಕ್ಕೆ ಬಿರುಸುಗೊಳ್ಳುತ್ತಿರುವಾಗಲೇ ಕರೋನೋತ್ತರ ಸಮಸ್ಯೆಗಳು ಶಾಲೆಗಳಲ್ಲಿ ಮಕ್ಕಳನ್ನು ಕಾಡುತ್ತಿರುವುದು ಬೆಳಕಿಗೆ ಬಂದಿದೆ.
ಎರಡು ಸುದೀರ್ಘ ವರ್ಷಗಳ ಬಳಿಕ ಶಾಲೆಗೆ ಕಾಲಿಟ್ಟ ಮಕ್ಕಳಲ್ಲಿ ‘ಕಲಿಕಾ ಚೇತರಿಕೆ’ ಹೆಸರಿನಲ್ಲಿ ಉತ್ಸಾಹ ತುಂಬುವ ಯತ್ನವನ್ನು ಶಿಕ್ಷಣ ಇಲಾಖೆ ಮಾಡು  ತ್ತಿದ್ದರೂ, ಮಕ್ಕಳು ಇನ್ನೂ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲಾಗುತ್ತಿಲ್ಲ. ಒಂದು ರೀತಿಯಲ್ಲಿ ಮಕ್ಕಳಲ್ಲಿ ಖಿನ್ನತೆಯ ಮನಃಸ್ಥಿತಿ ಆವರಿಸಿರುವುದು ಪೂರ್ಣ ಪ್ರಮಾಣದ ಬೋದನೆಗೂ ಅಡ್ಡಿಯುಂಟು ಮಾಡುತ್ತಿದೆ. ಮೊದಲಿನಂತೆ ಮಕ್ಕಳು ಲವಲವಿಕೆಯಿಂದ ಪಠ್ಯ, ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿಲ್ಲದಿರುವ ಬಗ್ಗೆ ಸಾಕಷ್ಟು ಶಿಕ್ಷಕ ವರ್ಗ ಅಳಲು ತೋಡಿಕೊಳ್ಳುತ್ತಿದೆ.
ಕೋವಿಡ್ ಸಂದರ್ಭದಲ್ಲಿ ಶೈಕ್ಷಣಿಕವಾಗಿ ಹಿಂದುಳಿದಿರುವುದು ಮಾತ್ರವಲ್ಲದೇ ಸುದೀರ್ಘ ಅವಧಿಯಲ್ಲಿ ಮನೆಗಳಲ್ಲೇ ಉಳಿದಿದ್ದ ಮಕ್ಕಳ ಗುಣ ಸ್ವಭಾವದಲ್ಲೂ ಸಾಕಷ್ಟು ವ್ಯತ್ಯಾಸಗಳನ್ನು ಶಿಕ್ಷಕರು ಗುರುತಿಸುತ್ತಿzರೆ. ಇನ್ನೂ ಬಹುತೇಕರು ಆನ್ ಲೈನ್ ಗುಂಗಿನಿಂದ ಹೊರಬಂದಿಲ್ಲ. ಏಕಾಏಕಿ ಭೌತಿಕ ಬೋಧನೆಗೆಹೊಂದಿ ಕೊಳ್ಳಲೂ ಆಗುತ್ತಿಲ್ಲದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದರೊಂದಿಗೆ ಮಕ್ಕಳ ಕೈಗೆ ಸುಲಭವಾಗಿ ಸಿಗುತ್ತಿದ್ದ ಮೊಬೈಲ್‌ಗಳನ್ನು ದೂರ ಮಾಡಲು ಹೆತ್ತವರು ಪ್ರಯತ್ನಿಸುತ್ತಿರುವುದರ ಜತೆಗೆ ಪಠ್ಯ, ಓದಿನ ಕಡೆಗೆ ಗಮನ ಹರಿಸುವಂತೆ ಸಹಜವಾಗಿ ಒತ್ತಡ ಹೇರುತ್ತಿದ್ದಾರೆ. ಆನ್‌ಲೈನ್‌ನಲ್ಲಿ ಎರಡು-ಮೂರು ಗಂಟೆಯ ಪಾಠ ಕೇಳಿ, ಆಟ, ಸಿನೆಮಾ, ಮೊಬೈಲ್‌ಗೇಮ್ ಇತ್ಯಾದಿಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದ ಮಕ್ಕಳಿಗೆ ಈಗ ದಿನದ ಬಹುತೇಕ ಅವಧಿಯನ್ನು ಶಾಲೆಯಲ್ಲಿ ಕಳೆಯುವುದು ಕಷ್ಟ ಸಾಧ್ಯವಾಗುತ್ತಿದೆ.
ಇದರಿಂದ ಕೆಲವು ಮಕ್ಕಳು ಸಹಜ ಖಿನ್ನತೆ ಆವರಿಸಿದೆ. ಎರಡು ವರ್ಷಗಳಲ್ಲಿ ಶಾಲೆಗಳು, ಶಿಕ್ಷಕರು, ಸಹಪಾಠಿಗಳು, ಸ್ನೇಹಿತರೂ ಬದಲಾಗಿದ್ದು ಹೊಸ ಅಪರಿಚಿತ ಮುಖಗಳು ಇನ್ನಷ್ಟು ಆತಂಕಕ್ಕೆ, ಹಿಂಜರಿಕೆಗೆ ದೂಡುತ್ತಿವೆ. ತಕ್ಷಣ ಮಕ್ಕಳಿಗೆ ಧೈರ್ಯತುಂಬುವ ಮತ್ತು ವೈಯಕ್ತಿಕವಾಗಿ ಮಾತನಾಡಿ ಸಮಸ್ಯೆ ಆಲಿಸಿ ಪರಿಹಾರ ವನ್ನು ಸೂಚಿಸುವ ಕೆಲಸ ಆಗಬೇಕಿದೆ. ಇದಕ್ಕಾಗಿ ಎಲ್ಲ ಶಾಲೆಗಳಿಗೆ ತಾತ್ಕಾಲಿಕವಾಗಿಯಾದರೂ ಮಕ್ಕಳ ಆಪ್ತಸಮಾಲೋಚಕರ ವ್ಯವಸ್ಥೆ ಮಾಡಬೇಕಿದೆ. ಎಡ-ಬಲ ಸಿದ್ಧಾಂತದ ಪೈಪೋಟಿಯ ಪಠ್ಯದ ಚರ್ಚೆಯಲ್ಲೇ ಸಮಯ ಕಳೆಯುವ ಬದಲು ವಿಭಿನ್ನ ಕ್ರಮಗಳ ಮೂಲಕ ಮಕ್ಕಳಲ್ಲಿ ಸ್ಫೂರ್ತಿ ತುಂಬುವ ಅಗತ್ಯವಿದೆ. ಮಕ್ಕಳನ್ನು ಕ್ರಿಯಾಶೀಲವಾಗಿಡಲು ಶಿಕ್ಷಕರಿಗೆ ಸೂಕ್ತ ಬೆಂಬಲ ನೀಡುವ ಅನಿವಾರ್ಯವನ್ನು ಇಲಾಖೆ ಅರಿಯಲಿ.