ರಾಜೀನಾಮೆ ಸ್ವೀಕರಿಸಿ
ಪಠ್ಯಪುಸ್ತಕ ಪರಿಷ್ಕರಣೆ ವಿಚಾರವಾಗಿ ನಾಡಿನ ಕೆಲವು ಸಾಹಿತಿಗಳು ಬಂಡೆದ್ದು ಸರಕಾರದ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಪಠ್ಯ ಪುಸ್ತಕ ಗಳು ಇನ್ನೂ ಮುದ್ರಣ ಹಂತದಲ್ಲಿರುವುದರಿಂದ ಪಠ್ಯದಲ್ಲಿ ಯಾವ ಪಾಠ ಇದೆ, ಯಾವ ಪಾಠ ಇಲ್ಲವೆಂಬುದನ್ನು ಯಾರೂ ನೋಡಿಲ್ಲ.
ಏಕೆಂದರೆ ಪಠ್ಯದ ಪಿಡಿಎಫ್ ಪ್ರತಿಗಳು ಕೂಡ ಯಾರಿಗೂ ಲಭ್ಯವಾಗಿಲ್ಲ. ಹೀಗಿರುವಾಗ ಪಠ್ಯದಲ್ಲಿ ಯಾವ ಪಾಠ ಇದೆ, ಯಾವ ಪಾಠ ಇಲ್ಲ ಎಂಬುದನ್ನು ಇವರಿಗೆ ತಿಳಿಸಿದವರ‍್ಯಾರು? ಅದನ್ನು ತಿಳಿಯುವುದಕ್ಕೂ ಮೊದಲೇ ಈ ಸಾಹಿತಿಗಳೆಲ್ಲರೂ ಒಗ್ಗಟ್ಟಿನಿಂದ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿರುವುದರ ಹಿಂದೆ ರಾಜಕಾರಣ ಕೈವಾಡ ಇಲ್ಲದಂತಿಲ್ಲ. ಆರಕ್ಕಿಂತ ಹೆಚ್ಚು ಸಾಹಿತಿಗಳು ತಮ್ಮ ಲೇಖನಗಳು ಪಠ್ಯದಲ್ಲಿ ಇಲ್ಲದೇ ಇದ್ದರೂ ಪಠ್ಯ ವಾಪಸ್ ಪಡೆಯಬೇಕು ಎಂದು ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಪತ್ರ ಬರೆದಿರುವುದು ಸರಕಾರದ ಮೇಲೆ ವಿನಾಕಾರಣ ಒತ್ತಡ ಹೇರಬೇಕು ಎಂಬ ಉದ್ದೇಶದಿಂದಲೇ.
ರಾಜಕೀಯದಲ್ಲಿ ಅಪಪ್ರಚಾರ, ಒತ್ತಡ, ತಂತ್ರ-ಕುತಂತ್ರಗಳು ಸಾಮಾನ್ಯವಾಗಿದ್ದರೂ ಅವು ಸಾಹಿತ್ಯ ಕ್ಷೇತ್ರ ವನ್ನು ಆಕ್ರಮಿಸಬಾರದು. ಪಕ್ಷಗಳಲ್ಲಿ ಸಾಹಿತ್ಯ ವಿರಬೇಕು, ಆದರೆ ಸಾಹಿತ್ಯದಲ್ಲಿ ಪಕ್ಷಗಳು ಇರಬಾರದು. ಅನೇಕ ಸಾಹಿತಿಗಳು ತಾವು ಬರೆದಿದ್ದೇ ಸಾಹಿತ್ಯ, ಅದನ್ನೇ ಈ ನಾಡಿನ ಜನರು ಓದಬೇಕು ಎಂಬ ಭ್ರಮೆ ಯಲ್ಲಿದ್ದಾರೆ. ಒಬ್ಬೊಬ್ಬರು ಒಂದೊಂದು ಪಕ್ಷಗಳ ಪ್ರತಿನಿಧಿಗಳಾಗಿದ್ದಾರೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಸಾಹಿತಿಗಳು ಎಂದು ಜನರು ಗುಂಪಿನಲ್ಲೇ ಗುರುತಿಸುವಂತಾಗಿದೆ. ಸಾಹಿತಿಗಳು ಹೀಗೆ ಯಾವುದೋ ಪಕ್ಷಗಳಿಗೆ ಹಿಂಬಾಗಿಲಿನಿಂದ ಬೆಂಬಲಿಸುವ ಬದಲು ಆ ಪಕ್ಷಗಳ ಕಾರ್ಯಕರ್ತರು, ನಾಯಕರಾಗಿ ರಾಜಕೀಯ ಕ್ಷೇತ್ರದಲ್ಲಿ ಸುಧಾರಣೆ ತರಲಿ.
ತಮ್ಮ ತಮ್ಮ ಸಿದ್ಧಾಂತಗಳಿಗೆ ಆಶಯಗಳಿಗೆ ತಕ್ಕಂತೆ ತಂತ್ರ ಪ್ರತಿತಂತ್ರಗಳನ್ನು ಬಳಸಿ, ಭ್ರಷ್ಟಾಚಾರಿಗಳನ್ನು ಸೋಲಿಸಿ ಮನೆಗೆ ಕಳಿಸುವ ಕೆಲಸ ಮಾಡಲಿ. ಸದನಗಳಲ್ಲಿ ಶಿಷ್ಟಾಚಾರಗಳನ್ನು ಜಾರಿಗೆ ತರಲು ಪ್ರಯತ್ನಿಸಲಿ. ಆದರೆ ಇದ್ಯಾವುದನ್ನೂ ಮಾಡದೆ ವಿನಾಕಾರಣ ಗೊಂದಲ ಮೂಡಿಸುತ್ತಿರುವುದು ಸರಿಯಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಅವರೇ, ಪಕ್ಷ ರಾಜಕಾರಣ ಮಾಡುವ ಸಾಹಿತಿಗಳೇ ಇಡೀ ಕನ್ನಡ ಸಾಹಿತ್ಯದ ಪ್ರತಿನಿಧಿಗಳಲ್ಲ. ಈ ಸಾಹಿತಿಗಳ ಮನವೊಲಿಸಿ ರಾಜೀನಾಮೆ ಹಿಂಪಡೆಯುವ ಮನವೊಲಿಕೆ ಯತ್ನ ಮಾಡುವ ಬದಲು, ರಾಜೀನಾಮೆ ಸ್ವೀಕರಿಸಿ, ಬೇರೆಯವರನ್ನು ನೇಮಿಸುವುದು ಒಳ್ಳೆಯದು.