ಯುಪಿಎಸ್‌ಸಿ ಪರೀಕ್ಷೆ ಪ್ರಾದೇಶಿಕ ಭಾಷೆಯಲ್ಲಿರಲಿ
ಇತ್ತೀಚೆಗೆ ಪ್ರಕಟವಾಗಿರುವ ಯುಪಿಎಸ್‌ಸಿ ಫಲಿತಾಂಶದಲ್ಲಿ ರಾಜ್ಯದ 27 ಅಭ್ಯರ್ಥಿಗಳು ಆಯ್ಕೆಯಾಗಿದ್ದು ಹೆಮ್ಮೆಯ ಸಂಗತಿ. ಇದರಲ್ಲಿ ಬಹುತೇಕರು ಕನ್ನಡ ಮಾಧ್ಯಮದಲ್ಲೇ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ್ದರು ಎಂಬುದು ಕೂಡ ಮೆಚ್ಚತಕ್ಕಂತಹದ್ದು. ಇದೇ ೫ರಂದು ಮತ್ತೆ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆ ನಡೆಯ ಲಿದ್ದು, ಈ ಬಾರಿಯಾದರೂ ಕನ್ನಡ ಸೇರಿ ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕೊಟ್ಟರೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯದ ಅಭ್ಯರ್ಥಿಗಳುಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸಾಗಲು ಅನುಕೂಲವಾಗಬಹುದು.
ಪೂರ್ವಭಾವಿ ಪರೀಕ್ಷೆಯನ್ನು ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲು ಅವಕಾಶ ಇರದಿರುವು ದರಿಂದ ಗ್ರಾಮೀಣ ಭಾಗದ ಅನೇಕ ಪ್ರತಿಭಾನ್ವಿತ ಅಭ್ಯರ್ಥಿಗಳು ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಪೂರ್ವಭಾವಿ ಪರೀಕ್ಷೆಯು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ನಡೆಯುತ್ತಿರುವುದರಿಂದ ಸಾವಿರಾರು ವಿದ್ಯಾರ್ಥಿಗಳು ಐಎಎಸ್ ಬದಲು ಕೆಎಎಸ್ ಪರೀಕ್ಷೆ ತೆಗೆದುಕೊಂಡು ಪಾಸಾಗಿರುವುದನ್ನು ಹಿಂದಿನ ಅನೇಕ ಸಂದರ್ಶನಗಳಲ್ಲಿ ಹೇಳಿದ್ದಾರೆ.
ಗೊತ್ತಿರದ ಭಾಷೆಗಳಲ್ಲಿ ಅಭ್ಯರ್ಥಿಗಳಿಗೆ ತಮ್ಮ ಸಂಪೂರ್ಣ ಸಾಮರ್ಥ್ಯ ಪ್ರದರ್ಶಿಸಲು ಸಾಧ್ಯವಾಗುವುದಿಲ್ಲ. ಐಎಎಸ್ ಪೂರ್ವ ಭಾವಿ ಪರೀಕ್ಷೆಯ ಪಠ್ಯ ಮತ್ತು ಕೆಪಿಎಸ್‌ಸಿ ನಡೆಸುವ ಕೆಎಎಸ್ ಪೂರ್ವಭಾವಿ ಪರೀಕ್ಷೆಯ ಪಠ್ಯದಲ್ಲಿ ಬಹುತೇಕ ಸಾಮ್ಯ ಇರುತ್ತದೆ. ಭಾಷಾ ಸಮಸ್ಯೆಯಿಂದ ಐಎಎಸ್ ಪರೀಕ್ಷೆಯಲ್ಲಿ ಹೆಚ್ಚಿನ ಅಭ್ಯರ್ಥಿಗಳಿಗೆ ಯಶಸ್ಸು ಸಾಧ್ಯವಾಗುತ್ತಿಲ್ಲ.
ಇದರಿಂದ ಕನ್ನಡಿಗರು ಉದ್ಯೋಗ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಪ್ರಾದೇಶಿಕ ಭಾಷೆಗಳಲ್ಲಿ ಪ್ರಶ್ನೆ ಪತ್ರಿಕೆ ನೀಡಬೇಕು. ಈ ಕುರಿತು ರಾಜ್ಯದ ಸಂಸದರು ಕೇಂದ್ರ ಸರಕಾರದ ಗಮನ ಸೆಳೆದು, ಪ್ರಾದೇಶಿಕ ಭಾಷೆಗಳಲ್ಲಿ ಯುಪಿಎಸ್‌ಸಿ ಪ್ರಶ್ನೆ ಪತ್ರಿಕೆಗಳು ಇರು ವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಬೇಕು.
ಈ ಹಿಂದೆ ಅನೇಕ ಬಾರಿ ಬ್ಯಾಂಕಿಂಗ್ ಪರೀಕ್ಷೆಗಳು ಕನ್ನಡದಲ್ಲಿ ಇರಬೇಕು ಎಂದು ರಾಜ್ಯದ ಸಂಸದರು ಧ್ವನಿ ಎತ್ತಿದ್ದರೂ ಪ್ರಯೋ ಜನವಾಗಿಲ್ಲ. ಈ ಬಾರಿಯಾದರೂ ಎಲ್ಲ ಸಂಸದರು ಪಕ್ಷ ಭೇದ ಮರೆತು ರಾಜ್ಯದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದೆಹಲಿಯಲ್ಲಿ ಧ್ವನಿ ಎತ್ತಬೇಕು. ಕೇಂದ್ರದಲ್ಲಿ ಬಿಜೆಪಿ ಸರಕಾರವೇ ಇರುವುದರಿಂದ ರಾಜ್ಯದ 25 ಬಿಜೆಪಿ ಸಂಸದರು ಕೇಂದ್ರದ ಮೇಲೆ ಒತ್ತಡ ಹೇರಬೇಕು.