ಗಣ್ಯರ ಶಿಷ್ಟಾಚಾರ: ತಿದ್ದುಪಡಿ ಅಗತ್ಯ
ಜೂನ್ ತಿಂಗಳಲ್ಲೇ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಭೇಟಿ ನೀಡಿದ್ದಾರೆ. ಇದರಿಂದ ಅನೇಕ ವರ್ಷಗಳಿಂದ ದುರಸ್ತಿ ಕಾಣದ ರಸ್ತೆಗಳು ಡಾಂಬರು ಹಾಕಿಸಿಕೊಂಡು ಸಿದ್ಧಗೊಂಡಿವೆ. ಗೋಡೆಗಳು ಬಣ್ಣ ಬಳಿಸಿ ಕೊಂಡು ಸಿಂಗಾರಗೊಂಡಿವೆ. ಬತ್ತಿಹೋದ ಬೀದಿ ದೀಪಗಳು ಬೆಳಗುತ್ತಿವೆ.
ಗಣ್ಯ ವ್ಯಕ್ತಿಗಳಿಂದ ಅಭಿವೃದ್ಧಿಯಾಗುತ್ತದೆ ಎಂಬುದು ಸಂತೋಷದ ವಿಷಯ. ಆದರೆ ಗಣ್ಯರು ಭೇಟಿ ನೀಡಿದಾಗ ಶಿಷ್ಟಾಚಾರದ ಹೆಸರಿನಲ್ಲಿ ರಸ್ತೆಗಳನ್ನು ಬಂದ್ ಮಾಡಿ, ವಾಹನ ಸವಾರರಿಗೆ ಆಗುತ್ತಿರುವ ಕಿರಿಕಿರಿಯನ್ನು ತಪ್ಪಿಸಲು ಯಾವ ಮಾರ್ಗ ವನ್ನೂ ಕಂಡು ಹಿಡಿಯ ಲಾಗಿಲ್ಲ. ಇಲ್ಲಿ ಮೂಲತಃ ಎರಡು ಅಂಶಗಳು ಅಡಗಿ ರುತ್ತವೆ, ಒಂದು, ಗಣ್ಯರ ಸುರಕ್ಷತೆ. ಇನ್ನೊಂದು, ಸ್ಥಾನಗೌರವ. ಆರು ತಿಂಗಳಿಗೋ, ವರ್ಷಕ್ಕೋ ಗಣ್ಯರು ಬಂದಾಗ ಸುರಕ್ಷತೆ ಮತ್ತು ಸ್ಥಾನಗೌರವ ಉದ್ದೇಶದಿಂದ ವಾಹನ ಸಂಚಾರ ಉಂಟಾ ದರೆ ಜನರು ಅದು ಸ್ವಾಭಾವಿಕ ಎಂಬಂತೆ ಪರಿಗಣಿಸುತ್ತಾರೆ.
ಆದರೆ ದಿನಬೆಳಗಾದರೆ ಬೆಂಗಳೂರಿನ ಪ್ರತಿ ಬೀದಿಯಲ್ಲೂ ಓಡಾಡುವ ರಾಜ್ಯ ಸರಕಾರದ ಸಚಿವರು ಬಂದಾಗಲೂ ಗಂಟೆ ಗಟ್ಟಲೇ ರಸ್ತೆಗಳನ್ನು ಬಂದ್ ಮಾಡುವ ಕುರಿತು ಸಾರ್ವಜನಿಕರಲ್ಲಿ ಆಕ್ಷೇಪವಿದೆ. ನಗರ ಪ್ರದಕ್ಷಿಣೆ ಹಾಕುವ ಬಹುಪಾಲು ರಾಜಕಾರಣಿಗಳು ಈ ಶಿಷ್ಟಾಚಾರದ ನೀತಿನಿಯಮಗಳು ದರ್ಪ-ದೌಲತ್ತು ತೋರ್ಪಡಿಸುವ ಅವಕಾಶ ಗಳನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಅನೇಕ ಕಡೆ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗಲೂ ಶಿಷ್ಟಾಚಾರ ಸಂಭ್ರಮಿಸಿದ ಉದಾಹರಣೆಗಳಿವೆ.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಈ ಪರಿ ಗಣ್ಯವ್ಯಕ್ತಿ ಸಂಸ್ಕೃತಿಯ ಪರಿಪಾಲನೆಯ ಅಗತ್ಯವಿದೆಯೇ? ಇದರಿಂದ ಸರಕಾರದ ಬೊಕ್ಕಸಕ್ಕೆ ಬೀಳುವ ಹೊರೆ ಎಷ್ಟು? ಅನಗತ್ಯವಾಗಿ ವ್ಯಯವಾಗುವ ಪೊಲೀಸರು ಮತ್ತು ನಾಗರಿಕರ ಮಾನವ ಸಮಯ, ಶಕ್ತಿಯ ನಷ್ಟ ಭರಿಸುವವರು ಯಾರು? ಈ ಹಿನ್ನೆಲೆಯಲ್ಲಿ ಗಣ್ಯವ್ಯಕ್ತಿಗಳ ಶಿಷ್ಟಾಚಾರ ನಿಯಮಗಳ ಪ್ರಾಥಮಿಕ ಉದ್ದೇಶವಾದ ಭದ್ರತೆ ಮತ್ತು ಸ್ಥಾನಗೌರವಗಳ ಆಮೂಲಾಗ್ರ ಪುನರ್‌ವ್ಯಾಖ್ಯಾನ, ಅವಲೋಕನ ಆಗಬೇಕಿದೆ. ಗಣ್ಯರ ಅತಿ ಶಿಷ್ಟಾಚಾರ ನಿಯಮಗಳಿಗೆ ತಿದ್ದುಪಡಿ ಮಾಡಿ ಕನಿಷ್ಠ ಒಂದು ಮಿತಿಗೆ ಒಳಪಡಿಸಬೇಕಿದೆ