ಜೀವಜಲ ಮಲೀನಗೊಳಿಸದಿರಿ
ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಕಲುಷಿತಗೊಂಡಿರುವ ನದಿಗಳು ಕರ್ನಾಟಕದಲ್ಲಿವೆ ಎಂಬ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯವರದಿ ಆತಂಕ ಹುಟ್ಟಿಸುವಂತಹದ್ದು. ಆ ವರದಿ ಪ್ರಕಾರ, ರಾಜ್ಯದ 17 ನದಿಗಳ ನೀರು ಕಲುಷಿತಗೊಂಡಿದ್ದು, ಕೃಷ್ಣಾ, ಮಲಪ್ರಭಾ, ಘಟಪ್ರಭಾ ಒಳಗೊಂಡತೆ ಕೆಲ ನದಿಗಳ ನೀರು ಕುಡಿಯಲು ಹಾಗೂ ಬಳಕೆಗೂ ಯೋಗ್ಯವಿಲ್ಲ ಎನ್ನಲಾಗಿದೆ.
ಆಯಾ ನದಿಗಳ ಜಲಾನಯನ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೈಗಾರಿಕೆ ಗಳ ತ್ಯಾಜ್ಯ, ನಗರಗಳು ಮತ್ತು ಪಟ್ಟಣಗಳಲ್ಲಿನ ಒಳಚರಂಡಿಯಿಂದ ಹೊರಸೂಸುವ ತ್ಯಾಜ್ಯಗಳೇ ನದಿ ಕಲುಷಿತಗೊಳ್ಳಲು ಕಾರಣ ಎನ್ನಲಾಗಿದೆ. ಇದೊಂದು ಗಂಭೀರವಾದ ವರದಿ ಯಾಗಿದ್ದು, ಸರಕಾರ ಮತ್ತು ಸಾರ್ವಜನಿಕರು ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ಇಂತಹ ನೀರನ್ನೇ ಕುಡಿದು ಸಾವಿರಾರು ಜನ ಸಾವು ನೋವು ಅನುಭವಿಸುವ ದಿನ ಬಂದರೂ ಬಂದೀತು.
ಇತ್ತೀಚೆಗೆ ರಾಯಚೂರಿನಲ್ಲಿ ಕಲುಷಿತ ನೀರು ಸೇವನೆಯಿಂದ ವಾಂತಿ-ಭೇದಿ ಕಾಣಿಸಿ ಕೊಂಡು ಏಳು ಮಂದಿ ಮೃತ ಪಟ್ಟಿರುವುದೇ ಇದಕ್ಕೆ ತಾಜಾ ಉದಾಹರಣೆ. ಅಲ್ಲಿ ಈವರೆಗೂ 230ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಪೈಕಿ 25 ಮಂದಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲದೆ ಹೊರರೋಗಿಗಳ ವಿಭಾಗದಲ್ಲಿ 800ಕ್ಕೂ ಹೆಚ್ಚು ಮಂದಿ ಔಷಧೋಪಚಾರ ಪಡೆದಿದ್ದಾರೆ.
ರಾಯಚೂರು ನಗರಕ್ಕೆ ಕೃಷ್ಣಾ ಮತ್ತು ತುಂಗಭದ್ರಾ ನದಿಗಳ ನೀರು ಪೂರೈಕೆಯಾಗುತ್ತಿದ್ದು, ಈ ನದಿಗಳ ನೀರೇ ಕಲುಷಿತಗೊಂಡಿರುವು ದರಿಂದ ಸಾವು ನೋವು ಸಂಭವಿಸಲು ಕಾರಣ ಎನ್ನಲಾಗಿದೆ. ಇನ್ನೊಂದೆಡೆ ಕುಡಿಯುವ ನೀರು ಸಂಗ್ರಹಿಸಲು ನಗರಸಭೆಯಿಂದ ನಿರ್ಮಿಸ ಲಾದ ಓವರ್‌ಹೆಡ್ ಟ್ಯಾಂಕ್‌ಗಳನ್ನು 20 ವರ್ಷಗಳಿಂದಲೂ ಸ್ವಚ್ಛಗೊಳಿಸದೇ ಇದ್ದುದರಿಂದ ಅಲ್ಲಿ 8-10 ಅಡಿಗಳಷ್ಟು ಹೂಳು ತುಂಬಿಕೊಂಡಿತ್ತು. ಅಲ್ಲಿರುವ ಅಶುದ್ಧ ನೀರನ್ನು ಕುಡಿದಿದ್ದರಿಂದ ಸಾವುಗಳು ಸಂಭವಿಸಿವೆ ಎನ್ನಲಾಗಿದೆ.
ಇದು ರಾಯಚೂರು ಸ್ಥಳೀಯ ಸಂಸ್ಥೆಗೆ ಮಾತ್ರ ಸೀಮಿತವಾಗಿಲ್ಲ. ರಾಜ್ಯದಲ್ಲಿ ಶೇ.16ರಷ್ಟು ಸ್ಥಳೀಯ ಸಂಸ್ಥೆಗಳು ಮಾತ್ರ ನೀರು ಸಂಸ್ಕರಣಾ ಘಟಕಗಳನ್ನು ಹೊಂದಿವೆ. ಅಂದರೆ 219 ಸ್ಥಳೀಯ ಸಂಸ್ಥೆಗಳಲ್ಲಿ ಕೇವಲ 36ರಲ್ಲಿ ಮಾತ್ರ ನೀರು ಸಂಸ್ಕರಣಾ ಘಟಕಗಳಿವೆ ಎಂಬುದು ಸ್ಥಳೀಯ ಸಂಸ್ಥೆಗಳ ದುರಾಡಳಿತಕ್ಕೆ ಸಾಕ್ಷಿ. ಸರಕಾರ, ಸ್ಥಳೀಯ ಸರಕಾರಗಳು, ಸಾರ್ವಜನಿಕರು ಜೀವಜಲವನ್ನು ಮಲೀನ ಗೊಳ್ಳದಂತೆ ನೋಡಿಕೊಳ್ಳಬೇಕಿದೆ. ಇಲ್ಲವಾದಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾದೀತು.