ಪ್ರವಾಹ ಎದುರಿಸಲು ಸನ್ನದ್ಧರಾಗಿ
ಕಳೆದ ನಾಲ್ಕೈದು ದಿನಗಳಿಂದ ರಾಜ್ಯದ ಕರಾವಳಿ, ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಕೆಲವೆಡೆ ಭೂಕಂಪನದಿಂದಭೂಕುಸಿತವೂ ಆಗಿದೆ. ಜನರು ಆತಂಕಗೊಂಡಿದ್ದು, ಸರಕಾರ ಕೂಡಲೇ ಅವರ ನೆರವಿಗೆ ಧಾವಿಸಬೇಕಿದೆ.
ಗುಡ್ಡಗಾಡು ಪ್ರದೇಶಗಳೇ ಹೆಚ್ಚಿರುವ ಉತ್ತರಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಗಳಲ್ಲೇ ಮಳೆ ಹೆಚ್ಚಾಗಿ ಸುರಿಯುತ್ತಿದ್ದು, ಅಲ್ಲಿನ ಜನರನ್ನು ಸರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕೆಲಸ ತುರ್ತಾಗಿ ಆಗಬೇಕಿದೆ. ಕಳೆದ ಬಾರಿ ಇದೇ ರೀತಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿ ಕೆಲವು ಗ್ರಾಮಗಳು ಸಂಪರ್ಕ ಕಡಿತಗೊಂಡಿದ್ದವು. ಈ ಬಾರಿ ಹಾಗಾಗದಂತೆ ಅಧಿಕಾರಿಗಳು ಈಗಲೇ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕಿದೆ. ನೆರೆಯ ಮಹಾರಾಷ್ಟ್ರದಲ್ಲೂ ಭಾರೀ ಮಳೆಯಾಗುತ್ತಿದ್ದು, ಅದರ ಮಾರಕ ಪರಿಣಾಮ ರಾಜ್ಯದ ಮೇಲೂ ಆಗುತ್ತದೆ. ಕೊಯ್ನಾ ಜಲಾಶಯ ತುಂಬುತ್ತಿದ್ದಂತೆ ಅಲ್ಲಿನ ಸರಕಾರ ಕೂಡಲೇ ಜಲಾಶಯದಿಂದ ಹೊರಕ್ಕೆ ನೀರು ಹರಿಸಲು ಆದೇಶಿಸುತ್ತದೆ.
ಈ ನೀರು ಬೆಳಗಾವಿ, ಬಾಗಲಕೋಟೆ, ವಿಜಯಪುರದ ಮೂಲಕ ಆಲಮಟ್ಟಿ ಅಣೆಕಟ್ಟು ಸೇರುತ್ತದೆ. ಅಲ್ಲಿಂದ ಹೊರ ಚೆಲ್ಲುವ ನೀರು ನಾರಾಯಣಪುರ ಜಲಾಶಯ ಮುಟ್ಟಲಿದೆ.  ಇದರಿಂದ ಯಾದಗಿರಿ ಜಿಯ ಕೆಲ ಪ್ರದೇಶಗಳಿಗೆ ಪೆಟ್ಟು ಬೀಳುತ್ತದೆ. ಕೊಯ್ನಾ ನೀರಿನ ಪರಿಣಾಮದಿಂದ ಕೃಷ್ಣಾ ನದಿ ಪಾತ್ರದ ನೂರಾರು ಗ್ರಾಮಗಳು ತಲ್ಲಣಗೊಳ್ಳುತ್ತವೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ, ಯಾದಗಿರಿಯ ಸುತ್ತಲಿನ ಪ್ರದೇಶದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣ ವಾಗುವುದನ್ನು ಪ್ರತಿ ವರ್ಷ ನೋಡಿದ್ದೇವೆ.
ಆದ್ದರಿಂದ ಈ ಬಾರಿ ಅದೇ ರೀತಿ ಆಗದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕಿದೆ. ಪ್ರತಿ ಬಾರಿ ಪ್ರವಾಹಕ್ಕೆ ತುತ್ತಾಗುವ ಕೆಲ ನದಿ ತೀರದ ಗ್ರಾಮಗಳನ್ನು ಶಾಶ್ವತವಾಗಿ ಸ್ಥಳಾಂತರ ಮಾಡಬೇಕು. ಇನ್ನು ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗ ಪ್ರವಾಹದಿಂದಾಗಿ ಹಲವು ಕಡೆ ಮನೆಗಳು ಬಿದ್ದಿದ್ದವು. ಆ ಸಂದರ್ಭದಲ್ಲಿ ಅವರು 5 ಲಕ್ಷ ಪರಿಹಾರ ಘೋಷಣೆ ಮಾಡಿದ್ದರು. ಆದರೆ ಇಲ್ಲಿವರೆಗೂ ಆ ಕುಟುಂಬ ಗಳಿಗೆ ತಲುಪಿರುವುದು ಒಂದು ಲಕ್ಷ ರು. ಮಾತ್ರ. ಉಳಿದ 4 ಲಕ್ಷ ಪರಿಹಾರ ತಲುಪಲೇ ಇಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಆದ್ದರಿಂದ ಆ ಕುಟುಂಬಗಳಿಗೆ ಪೂರ್ಣ ಪ್ರಮಾಣದ ಪರಿಹಾರ ಕೊಡಿಸಬೇಕಿದೆ.